
ಕೊಳ್ಳೇಗಾಲ: ತಾಲ್ಲೂಕಿನ ಸುಪ್ರಸಿದ್ಧ ಚಿಕ್ಕಲ್ಲೂರು ಜಾತ್ರೆಗೆ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಜ.4ರಂದು ಆಗಮಿಸುತ್ತಿದ್ದಾರೆ ಎಂದು ಡಾ.ಎಚ್.ಸಿ.ಮಹದೇವಪ್ಪ ಅಭಿಮಾನಿಗಳ ಬಳಗದ ಅಧ್ಯಕ್ಷ ಮಹದೇವಯ್ಯ ಹೇಳಿದರು.
‘ಸಚಿವರು ಚಿಕ್ಕಲ್ಲೂರು ಜಾತ್ರೆ ವೀಕ್ಷಿಸಿದ ಬಳಿಕ ಅಲ್ಲಿನ ಮೂಲ ಸೌಕರ್ಯಗಳು ಹಾಗೂ ಕೊರತೆಯ ಬಗ್ಗೆ ತಿಳಿದುಕೊಳ್ಳಲಿದ್ದಾರೆ, ಭಕ್ತರ ಜೊತೆ ಚರ್ಚಿಸಿ ಮುಂದಿನ ವರ್ಷ ಅಗತ್ಯವಿರುವ ಸೌಲಭ್ಯಗಳ ಬಗ್ಗೆ ತಿಳಿದುಕೊಳ್ಳಲಿದ್ದಾರೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಚಿಕ್ಕಲ್ಲೂರು ಪರಂಪರೆ ಅಭಿವೃದ್ಧಿ ದೃಷ್ಟಿಕೋನದಲ್ಲಿಟ್ಟುಕೊಂಡು ಸಚಿವರು ಈ ನಿರ್ಧಾರ ಕೈಗೊಂಡಿದ್ದು, ಕ್ಷೇತ್ರವು ಅಭಿವೃದ್ಧಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇತಿಹಾಸ ಪ್ರಸಿದ್ಧ ಮಂಟೇಸ್ವಾಮಿ ಕ್ಷೇತ್ರಗಳಲ್ಲಿನ ನೈಜ ಅರಿವಿನ ಕಾರಣಕ್ಕಾಗಿ ಸಚಿವರು ಜಾತ್ರೆಗೆ ಭೇಟಿ ನೀಡುತ್ತಿದ್ದಾರೆ’
‘ಭಕ್ತರ ಹಿತದೃಷ್ಟಿಯಿಂದ ರಸ್ತೆ, ಸಾರಿಗೆ, ಕುಡಿಯುವ ನೀರು, ಸ್ನಾನಘಟ್ಟ, ಶೌಚಾಲಯ ಮುಂತಾದ ಅನುಕೂಲ ಕಲ್ಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಜಾತ್ರೆಯ ಸಹಪಂಕ್ತಿ ಭೋಜನದ ಆಚರಣೆಯೂ ಸುಸೂತ್ರವಾಗಿ ನಡೆಯುವಂತೆ ಮಾಡಬೇಕಾಗಿದೆ. ಈ ಎಲ್ಲಾ ಸ್ಥಿತಿಗತಿಗಳನ್ನು ನಿವಾರಿಸುವ ಬಗ್ಗೆ ಸಚಿವರಿಗೆ ಈಗಾಗಲೇ ಗಮನವನ್ನು ಸೆಳೆದಿದ್ದೇವೆ. ಪರಂಪರೆ ಮತ್ತು ಸಾರ್ವಜನಿಕರ ಭಕ್ತಾದಿಗಳ ಹಿತ ದೃಷ್ಟಿಯಿಂದ ಸಚಿವರು ಆಗಮಿಸುತ್ತಿದ್ದಾರೆ’ ಎಂದರು.
ಮಂಟೇಸ್ವಾಮಿ ಪರಂಪರೆ ರಕ್ಷಣಾ ಹೋರಾಟ ಸಮಿತಿಯ ಹಿರಿಯ ಸಾಹಿತಿ ಮಹದೇವ ಶಂಕನಪುರ ಮಾತನಾಡಿ, ‘ಸಚಿವರಿಗೆ ಹಾಗೂ ಸರ್ಕಾರಕ್ಕೆ ಮಂಟೇಸ್ವಾಮಿ ಕ್ಷೇತ್ರಗಳು ಮತ್ತು ಮಠಗಳ ಬಗ್ಗೆ ಅಪಾರವಾದ ಗೌರವವಿದ್ದು, ಭಕ್ತರಿಗೆ ಮೂಲ ಸೌಕರ್ಯಗಳ ಕೊರತೆಯಾಗಬಾರದು ಹಾಗೂ ಪಂಕ್ತಿ ಭೋಜನ ಸುಸೂತ್ರವಾಗಿ ನಡೆಯಬೇಕು. ನಮ್ಮಲ್ಲಿ ಪ್ರಾಣಿ ಬಲಿ ಪೀಠವಿಲ್ಲ ಹಾಗಾಗಿ ನಮಗೆ ಪಂಕ್ತಿ ಭೋಜನಕ್ಕೆ ಅವಕಾಶ ನೀಡಬೇಕು’ ಎಂದು ಆಗ್ರಹಿಸಿದರು.
‘ಆಹಾರ ಪದ್ಧತಿ ಅವರವರ ಹಕ್ಕು ಹಾಗಾಗಿ ಯಾರೂ ಅವರ ಹಕ್ಕಿಗೆ ಧಕ್ಕೆ ಬಾರದಂತೆ ನಡೆದುಕೊಳ್ಳಬಾರದು. ಈಗಾಗಲೇ ಜಿಲ್ಲೆಗೆ ನೂತನ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹೊಸದಾಗಿ ಆಗಮಿಸಿದ್ದಾರೆ ಹಾಗಾಗಿ ಅವರು ಜಾತ್ರೆಯ ಬಗ್ಗೆ ಸಂಕ್ಷಿಪ್ತ ಮಾಹಿತಿ ಪಡೆದುಕೊಂಡು ಜಾತ್ರೆಯನ್ನು ಉತ್ತಮವಾಗಿ ನಡೆಸಿಕೊಡಬೇಕು, ಎಂದು ನಮ್ಮ ಪರಂಪರೆಯಿಂದ ಕೇಳಿಕೊಳ್ಳುತ್ತೇವೆ’ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಂಟೇಸ್ವಾಮಿ ಪರಂಪರೆ ಹೋರಾಟ ಸಮಿತಿಯ ಪ್ರಭುಲಿಂಗ ಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.