
ಕೊಳ್ಳೇಗಾಲ: ತಾಲ್ಲೂಕಿನ ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆಯ 5ನೇ ದಿನವಾದ ಬುಧವಾರ ಮುತ್ತತ್ತಿರಾಯನ ಸೇವೆಯೊಂದಿಗೆ ತೆರೆ ಬಿದ್ದಿತು.
ಚಿಕ್ಕಲ್ಲೂರು ಘನನೀಲಿ ಸಿದ್ದಪ್ಪಾಜಿ ಧರ್ಮಪರಂಪರೆಯ ಸಂಪ್ರದಾಯದಂತೆ ಬೊಪ್ಪೇಗೌಡನಪುರ ಮಠದ ಜ್ಞಾನಾನಂದ ಚನ್ನರಾಜೇ ಅರಸ್ ಅವರು ಪೂಜಾ ಕೈಂಕರ್ಯ ನೆರವೇರಿಸಿ ಕೊನೆಯ ದಿನ ಮುತ್ತುರಾಯನ ಸೇವೆ ಮಾಡುವ ಮೂಲಕ ಜಾತ್ರೆಗೆ ತೆರೆ ಎಳೆಯಲಾಯಿತು. ಜ.3ರಂದು ಚಂದ್ರಮಂಡಲದ ಮೂಲಕ ಚಾಲನೆಗೊಂಡು 7ರವರೆಗೂ ಪೂಜಾ ಕೈಂಕರ್ಯಗಳು ನಡೆದು ಮುತ್ತುರಾಯನ ಸೇವೆಯ ಮೂಲಕ ಜಾತ್ರೆ ಅಂತ್ಯವಾಯಿತು.
ಹಲಗೂರಿಗೆ ಕಬ್ಬಿಣದ ಭಿಕ್ಷೆಗೆ ಹೋಗುವಾಗ ಮುತ್ತತ್ತಿರಾಯ ಸಿದ್ದಪ್ಪಾಜಿ ಪವಾಡಗಳಿಗೆ ಸಾಕ್ಷಿಯಾಗುತ್ತಾನೆ. ಇವರಿಬ್ಬರ ಸ್ನೇಹದ ಕುರುಹಾಗಿ ಚಿಕ್ಕಲ್ಲೂರು ಜಾತ್ರೆಯ ಕಡೆಯ ದಿನ ಮುತ್ತತ್ತಿರಾಯನ ಸೇವೆ ಜರುಗಿತು.
ಈ ದಿನ ನೀಲಗಾರರು ವೈಷ್ಣವ ಬಿರುದಾರರ ದಾಸಯ್ಯ ಅವರನ್ನು ಆಹ್ವಾನಿಸಿ ಸಸ್ಯಾಹಾರಿ ಹಾಗೂ ಮಾಂಸಹಾರದ ಅಡುಗೆ ಮಾಡಿ ಅವರ ದುಂಡು, ಕೋಲು, ಕಣಜ, ಅರಿಕೆಗಳಿಗೆ, ಎಡೆ ಇಟ್ಟು ಪೂಜೆ ಸಲ್ಲಿಸಲಾಯಿತು. ಮೂರು ನಾಮಗಳನ್ನು ಹಾಕಿಕೊಂಡು ಮುತ್ತತ್ತಿರಾಯನ ಸೇವೆ ಮಾಡಲಾಯಿತು.
ತೆಳ್ಳನೂರು ಗ್ರಾಮದ ಮಾಯೇಗೌಡರ ಕುಟುಂಬದ ನೇತೃತ್ವದಲ್ಲಿ 10 ವರ್ಷಗಳಿಂದಲೂ ಮುತ್ತುರಾಯನ ಸೇವೆ ನಡೆಯುತ್ತಿದ್ದು, ವೆಂಕಟೇಗೌಡ, ಸಾಗರ್, ವೆಂಕಟರಾಜೇಗೌಡ, ಮಹೇಶ್ (ಮಾಯಗೌಡ), ಕೆಂಚೇಗೌಡ, ಮುತ್ತುರಾಜು, ಮಹೇಶ್, ಶ್ರೀನಿವಾಸ್, ಮಹದೇವಸ್ವಾಮಿ, ಗೋವಿಂದ ಅವರು ಮುತ್ತುರಾಯನ ಸೇವೆಯನ್ನು ದೇವಸ್ಥಾನದ ಮುಂಭಾಗ ಕರಿಯಣ್ಣ, ಕೆಂಚಣ್ಣ ಮೂರ್ತಿಗಳನ್ನು ದೇವಸ್ಥಾನದ ಸುತ್ತಲು ತಮಟೆಯೊಂದಿಗೆ ಮೆರವಣಿಗೆ ಮಾಡಿ ದೇವಸ್ಥಾನದ ಮುಂಭಾಗದಲ್ಲಿ ಭೇಟೆ ಮಣೆ ಹಾಕಿ(ರಂಗ) ಬೊಪ್ಪೇಗೌಡನಪುರ ಮಠದ ಜ್ಞಾನನಂದ ಚನ್ನರಾಜೇ ಆರಸ್ ವಿಶೇಷ ಪೂಜೆ ಸಲ್ಲಿಸಿ ಮೂರ್ತಿಗಳನ್ನು ಧೀಕ್ಷೆ ಪಡೆದ ದಾಸರು ದೇವಸ್ಥಾನದ ಒಳಗಡೆ ತೆಗೆದು ಕೊಂಡು ಹೋಗಿ ಗರ್ಭಗುಡಿಯಲ್ಲಿ ಸಿದ್ದಪಾಜಿಯ ಪರಂಪರಯಂತೆ ಪೂಜೆ ಸಲ್ಲಿಸಿದರು.
ವೈಷ್ಣವ ಪಂಥಕ್ಕೆ ಸೇರಿದ ದಾಸಯ್ಯ ಅವರು ಕರಿಯಣ್ಣ ಹಾಗೂ ಕೆಂಚಣ್ಣ ದೇವರ ಆಕೃತಿಗಳನ್ನು ಹೊತ್ತು ವಾದ್ಯ ಮೇಳಗಳ ತಾಳಕ್ಕೆ ‘ಅಪಾರಾಕ್ ಗೋಪರಾಕ್’ ಆ ಎಂದು ಕೂಗುತ್ತಾ ಕಡಲೇಪುರಿ, ತೆಂಗಿನಕಾಯಿ ಚೂರು ಮತ್ತು ಬೆಲ್ಲ ಮಿಶ್ರಿತ ಪದಾರ್ಥಗಳನ್ನು ಗೋಪುರ ರೀತಿಯಲ್ಲಿ ಗುಡ್ಡೆ ಹಾಕಿ ಕೈಯಲ್ಲಿ ಮುಟ್ಟದೆ ಬಾಯಿಯಿಂದಲೇ ಪದಾರ್ಥಗಳನ್ನು ಮುಗಿಬಿದ್ದು ತಿನ್ನುವ ಮೂಲಕ ಸಿದ್ದಪ್ಪಾಜಿ ಚಿಕ್ಕಲ್ಲೂರು ಜಾತ್ರೆಗೆ ತೆರೆ ಎಳೆದರು.
ಮುತ್ತುರಾಯನ ಸೇವೆಗೆ ಸುತ್ತಮುತ್ತಲ ಗ್ರಾಮಗಳಿಂದ ಜನರು ಆಗಮಿಸಿ ಘನನೀಲಿ ಸಿದ್ದಪ್ಪಾಜಿ ಅವರಿಗೆ ಪೂಜೆ ಸಲ್ಲಿಸಿ ತಮ್ಮ ಹರಕೆ ಕಾಣಿಕೆಗಳನ್ನು ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.