ಚಾಮರಾಜನಗರ: ಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತವಾಗಿಸಲು ರೂಪಿಸಲಾಗಿರುವ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಮಗ್ರ ಮಕ್ಕಳ ರಕ್ಷಣಾ ಯೋಜನೆಯ ಜಿಲ್ಲಾಮಟ್ಟದ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯನ್ನು ನ.14ರ ವೇಳೆಗೆ ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿ ಘೋಷಿಸಲು ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದರು.
ಗ್ರಾಮ ಪಂಚಾಯಿತಿಗಳಲ್ಲಿ ವಿಶೇಷ ಗ್ರಾಮ ಸಭೆಗಳನ್ನು ಏರ್ಪಡಿಸಿ ಬಾಳ್ಯವಿವಾಹಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಆರೋಗ್ಯ, ಶಿಕ್ಷಣ, ಕಂದಾಯ, ಪೊಲೀಸ್ ಹಾಗೂ ಇತರ ಇಲಾಖೆಗಳು ಮುತುವರ್ಜಿಯಿಂದ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಜುಲೈ 21ರಂದು ಜಿಲ್ಲೆಯ ಎಲ್ಲ ಕಚೇರಿಗಳಲ್ಲಿ ಬಾಲ್ಯವಿವಾಹ ಮುಕ್ತಗೊಳಿಸುವ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮ ಆಯೋಜಿಸಬೇಕು. ಹಂತ ಹಂತವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ಮಕ್ಕಳ ದಿನಾಚರಣೆ ಒಳಗೆ ಉದ್ದೇಶಿತ ಗುರಿ ತಲುಪಬೇಕು. ಎಲ್ಲ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು, ಮಕ್ಕಳ ಹಕ್ಕುಗಳು ರಕ್ಷಣೆಯ ವಿಚಾರವನ್ನು ಆದ್ಯತೆ ಮೇರೆಗೆ ಮಾಡಬೇಕು ಎಂದು ಸೂಚನೆ ನೀಡಿದರು.
ಶಾಲೆಯಲ್ಲಿ ಮಕ್ಕಳ ಹಾಜರಾತಿ ಬಗ್ಗೆ ನಿರಂತರ ನಿಗಾ ಇರಿಸಬೇಕು, ಯಾವುದೇ ವಿದ್ಯಾರ್ಥಿ ಮೂರು ದಿನ ಸಕಾರಣವಿಲ್ಲದೆ ಶಾಲೆಗೆ ಗೈರು ಹಾಜರಾದರೆ ಶಿಕ್ಷಕರು ಹಾಗೂ ಅಧಿಕಾರಿಗಳು ಪೋಷಕರ ಮನೆಗೆ ಭೇಟಿನೀಡಿ ಗೈರಾದ ಬಗ್ಗೆ ಕಾರಣ ತಿಳಿದುಕೊಳ್ಳಬೇಕು. ಸತತ ಗೈರು ಹಾಜರಾದವರಿಗೆ ಕೌನ್ಸೆಲಿಂಗ್ ಮೂಲಕ ಶಾಲೆ ತೊರೆಯದಂತೆ ನೋಡಿಕೊಳ್ಳಬೇಕು. ಶಿಕ್ಷಣ ಇಲಾಖೆ ಅಧಿಕಾರಿಗಳು ಕಾಲಕಾಲಕ್ಕೆ ವರದಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ್ ಮಾತನಾಡಿ, ‘ಬಾಲ ಕಾರ್ಮಿಕ ಪದ್ಧತಿಯಿಂದ ರಕ್ಷಣೆ ಮಾಡಿದ ಮಕ್ಕಳಿಗೆ ನಿಯಮಾನುಸಾರ ನೋಡಿಕೊಂಡು ಮುಂದಿನ ಭವಿಷ್ಯಕ್ಕೆ ಅನುಕೂಲವಾಗುವ ಸೌಲಭ್ಯಗಳನ್ನು ಒದಗಿಸಬೇಕು. ಮಕ್ಕಳ ಹಕ್ಕುಗಳು, ರಕ್ಷಣೆ, ಬಾಲ್ಯವಿವಾಹ ತಡೆಗಟ್ಟುವಿಕೆಗೆ ಎಲ್ಲ ಇಲಾಖೆಗಳು ಯೋಜನಾ ಬದ್ಧವಾಗಿ ಕಾರ್ಯನಿರ್ವಹಿಸಬೇಕು’ ಎಂದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್ ಮಾತನಾಡಿ, ‘ಬಾಲ್ಯವಿವಾಹ ತಡೆಗೆ ಎಲ್ಲ ಇಲಾಖೆಗಳ ಸಹಕಾರ ಅಗತ್ಯ. ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ವ್ಯಾಪಕ ಅರಿವು ಕಾರ್ಯಕ್ರಮ ಆಯೋಜಿಸಬೇಕು. ಕಚೇರಿ ಮುಂಭಾಗ ಜನರಿಗೆ ಬಾಲ್ಯವಿವಾಹ ತಡೆಯುವ ಬಗ್ಗೆ ಅರಿವು ಮುಡಿಸುವ ಸಂದೇಶಗಳ ಪೋಸ್ಟರ್ ಹಾಗೂ ಫಲಕಗಳನ್ನು ಪ್ರದರ್ಶಿಸಬೇಕು’ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋನಾ ರೋತ್, ಎಸ್‌ಪಿ ಬಿ.ಟಿ. ಕವಿತಾ, ಡಿವೈಎಸ್‍ಪಿ ಲಕ್ಷ್ಮಯ್ಯ, ತಹಶೀಲ್ದಾರ್ ಬಿ. ಗಿರಿಜಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕ ಹೆಚ್.ಆರ್.ಸುರೇಶ್, ಡಿಡಿಪಿಐ ರಾಮಚಂದ್ರರಾಜೇ ಅರಸ್, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಬಿ.ಎಂ.ಪ್ರಕಾಶ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುಳಾ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ಎಂ.ಮಹೇಶ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಲತಾ, ಸದಸ್ಯರಾದ ಲೀನಾ ಕುಮಾರಿ, ಎನ್.ಅರುಣ್ ಕುಮಾರ್, ಕೆ.ಶ್ವೇತಾ, ಗಾಯತ್ರಿ, ಬಾಲನ್ಯಾಯ ಮಂಡಳಿ ಸದಸ್ಯರಾದ ಎನ್.ಎಂ ಸರಸ್ವತಿ, ವಿ.ಎಚ್. ಗಂಗಾಧರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್ ಇದ್ದರು.
ಜಾಗೃತಿ: ಇಲಾಖೆಗಳ ನಡುವೆ ಸಮನ್ಯಯತೆ ಅಗತ್ಯ ಜುಲೈ 21ರಂದು ಪ್ರತಿಜ್ಞಾ ವಿಧಿ ಸ್ವೀಕಾರ ಮಕ್ಕಳು ನಿರಂತರ ಗೈರಾದರೆ ಮನೆಗೆ ಭೇಟಿನೀಡಿ ಪರಿಶೀಲಿಸಿ
‘ಪ್ರಚಾರಕ್ಕೆ ಒತ್ತು ನೀಡಿ’ ಜಿಲ್ಲೆಯಲ್ಲಿರುವ ಧಾರ್ಮಿಕ ಸ್ಥಳಗಳು ಪ್ರವಾಸಿ ತಾಣಗಳಲ್ಲಿ ಬಾಲ್ಯವಿವಾಹ ತಡೆ ಬಾಲಕಾರ್ಮಿಕ ಪದ್ಧತಿ ವಿರೋಧಿ ಜಾಗೃತಿ ಫಲಕಗಳನ್ನು ಅಳವಡಿಸಿದರೆ ಪರಿಣಾಮಕಾರಿ ಆಗಲಿದೆ. ಎನ್.ಆರ್.ಎಲ್.ಎಂ ಮಹಿಳಾ ಸ್ವಸಹಾಯ ಸಂಘಗಳು ಅಂಗನವಾಡಿ ಆರೋಗ್ಯ ಕಾರ್ಯಕರ್ತೆಯರನ್ನು ಜಾಗೃತಿ ಕಾರ್ಯಕ್ರಮಗಳಲ್ಲಿ ಬಳಸಿಕೊಳ್ಳಬೇಕು. ಮಕ್ಕಳ ಹಕ್ಕುಗಳ ಬಗ್ಗೆ ತಿಳಿ ಹೇಳಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್ ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.