ಹನೂರು: ತಾಲ್ಲೂಕಿನ ಪೆದ್ದನಪಾಳ್ಯ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಪೋಷಕರು ಗುರುವಾರವೂ ಮಕ್ಕಳನ್ನು ಕಳುಹಿಸದೇ ಮನೆಯಲ್ಲಿಯೇ ಉಳಿಸಿಕೊಂಡಿದ್ದಾರೆ.
ಶಾಲೆಯಲ್ಲಿ ಮಕ್ಕಳಿಗೆ ಸುರಕ್ಷತೆಯಿಲ್ಲದೆ ಇರುವುದರಿಂದ ಪೋಷಕರಲ್ಲಿ ಆತಂಕ ಎದುರಾಗಿದೆ. ವಿದ್ಯಾರ್ಥಿಗೆ ಕೋಳಿ ಕಚ್ಚಿ ಗಾಯಗೊಳಿಸಿ ವಾರ ಕಳೆಯುತ್ತಿದೆ. ಇಷ್ಟಾದರೂ ಶಿಕ್ಷಕರಾಗಲಿ, ಸಂಬಂಧಿಸಿದ ಅಧಿಕಾರಿಗಳಾಗಲೀ ಶಾಲಾ ಆವರಣದಲ್ಲಿರುವ ಕೋಳಿ ಶೆಡ್ ತೆರವುಗೊಳಿಸಲು ಮೀನಾಮೇಷ ಎಣಿಸುತ್ತಿದ್ದಾರೆ. ಆದ್ದರಿಂದ ಯಾವ ನಂಬಿಕೆ ಮೇಲೆ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಎಂದು ಪೋಷಕರು ಆತಂಕ ವ್ಯಕ್ತಪಡಿಸಿದರು.
ಅಧಿಕಾರಿಗಳ ತಂಡ ಭೇಟಿ: ಐದು ದಿನಗಳಿಂದ ಶಾಲೆಗೆ ಮಕ್ಕಳನ್ನು ಪೋಷಕರು ಕಳುಹಿಸದಿರುವ ಬಗ್ಗೆ ಮಾಹಿತಿ ತಿಳಿದು ಮಂಗಳವಾರ ಅಧಿಕಾರಿಗಳ ತಂಡ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಉಮೇಶ್, ಕ್ಷೇತ್ರಶಿಕ್ಷಣಾಧಿಕಾರಿ ಶಿವರಾಜು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪುಷ್ಪಲತಾ ಆಗಮಿಸಿ ಶಿಕ್ಷಕರು ಹಾಗೂ ಪೋಷಕರಿಂದ ಮಾಹಿತಿ ಪಡೆದರು.
‘ಜಾಗದ ಕುರಿತು ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ, ಅದು ಇತ್ಯರ್ಥವಾದ ನಂತರವೇ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯ. ಆದ್ದರಿಂದ, ಜಾಗವು ಪಂಚಾಯಿತಿ ದಾಖಲೆಯಲ್ಲಿ ನಮೂದಾಗಿರುವುದರಿಂದ ಅದರ ಆಧಾರದ ಮೇಲೆ ಇ-ಸ್ವತ್ತು ಮಾಡಿ ನಂತರ ಸುತ್ತುಗೋಡೆ ನಿರ್ಮಿಸಲು ಕ್ರಮ ವಹಿಸಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.