ಹನೂರು: ‘ಬೇರೆ ಶಾಲೆಗೆ ನಿಯೋಜನೆಗೊಳಿಸಿರುವ ನಮ್ಮ ಶಿಕ್ಷಕ ಮಹಾದೇವ ಅವರನ್ನು ಮರಳಿ ನಮ್ಮ ಶಾಲೆಯಲ್ಲೇ ಮುಂದುವರಿಸಬೇಕು’ ಎಂದು ಒತ್ತಾಯಿಸಿ ಮಿಣ್ಯಂ ಶಾಲೆ ಮಕ್ಕಳು ಶನಿವಾರ ಶಾಲೆಗೆ ತೆರಳದೇ ಗೇಟ್ ಮುಂದೆ ಕುಳಿತು ಪ್ರತಿಭಟನೆ ನಡೆಸಿದರು.
‘ನಮ್ಮ ಶಿಕ್ಷಕರು ಯಾವುದೇ ತಪ್ಪು ಮಾಡಿಲ್ಲ. ಅವರನ್ನು ಬೇರೆ ಶಾಲೆಗೆ ಕಳುಹಿಸಿರುವುದು ಸರಿಯಲ್ಲ. ಅವರು ಮರಳಿ ಶಾಲೆಗೆ ಬರುವವರೆಗೆ ನಾವು ತರಗತಿಗಳಿಗೆ ಹೋಗುವುದಿಲ್ಲ’ ಮಕ್ಕಳು ಎಂದು ಪಟ್ಟು ಹಿಡಿದರು.
‘ಅವರು ಬಿಸಿಯೂಟ ಜವಾಬ್ದಾರಿ ವಹಿಸಿಕೊಂಡಾಗಿನಿಂದ ಉತ್ತಮ ಆಹಾರ ನೀಡುತ್ತಿದ್ದಾರೆ. ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿರಲಿಲ್ಲ .ಪಠ್ಯದ ಜೊತೆಗೆ ಅವರೇ ನಮಗೆ ಕ್ರೀಡೆಯನ್ನು ಹೇಳಿ ಕೊಡುತ್ತಿದ್ದರು. ಆದರೆ ಅಧಿಕಾರಿಗಳು ಯಾರೋ ಮಾತನ್ನು ಕೇಳಿ ನಮ್ಮ ಶಿಕ್ಷಕರನ್ನು ಬೇರೆಡೆಗೆ ಕಳುಹಿಸಿದ್ದಾರೆ’ ಎಂದು ಆರೋಪಿಸಿದರು.
ಶಿಕ್ಷಣ ಸಚಿವರು ಸುಳ್ವಾಡಿ ದೇವಾಲಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಗ್ರಾಮಸ್ಥರು ಭೇಟಿ ಮಾಡಿ ಪ್ರಭಾರ ಮುಖ್ಯಶಿಕ್ಷಕರ ಕರ್ತವ್ಯ ಲೋಪದ ಬಗ್ಗೆ ಲಿಖಿತವಾಗಿ ದೂರು ನೀಡಿದ್ದರು. ಕೂಡಲೇ ಪ್ರಭಾರ ಮುಖ್ಯಶಿಕ್ಷಕರನ್ನು ಬೇರೆಡೆಗೆ ನಿಯೋಜಿಸುವಂತೆ ಸಚಿವರು ಸ್ಥಳದಲ್ಲೇ ಸೂಚಿಸಿದರು. ಆದರೆ ಬಿಇಓ ಅವರು ಬೇಕಂತಲೇ ಸಹಶಿಕ್ಷಕ ಮಹಾದೇವ ಅವರನ್ನು ಬೇರೆ ಶಾಲೆಗೆ ನಿಯೋಜಿಸಿದ್ದಾರೆ. ಕೂಡಲೇ ಆದೇಶವನ್ನು ಹಿಂಪಡೆಯದಿದ್ದಲ್ಲಿ ಗ್ರಾಮಸ್ಥರು ಮಕ್ಕಳ ಜೊತೆಗೂಡಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ಗ್ರಾಮದ ಪಿ. ಮಾದೇಶ್ ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.