ADVERTISEMENT

ಕ್ರಿಸ್‌ಮಸ್‌ ಸಂಭ್ರಮ; ಯೇಸುವಿನ ಗುಣಗಾನ

ಚರ್ಚ್‌ಗಳಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಕ್ರೈಸ್ತರು

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 6:08 IST
Last Updated 26 ಡಿಸೆಂಬರ್ 2025, 6:08 IST
ಚಾಮರಾಜನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಸಂತ ಪೌಲರ ಚರ್ಚ್‌ನಲ್ಲಿ ಬುಧವಾರ ರಾತ್ರಿ ಶ್ರೇಷ್ಠ ಧರ್ಮಗುರು ಸಿ.ಅಂತೋನಪ್ಪ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದವು
ಚಾಮರಾಜನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಸಂತ ಪೌಲರ ಚರ್ಚ್‌ನಲ್ಲಿ ಬುಧವಾರ ರಾತ್ರಿ ಶ್ರೇಷ್ಠ ಧರ್ಮಗುರು ಸಿ.ಅಂತೋನಪ್ಪ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದವು   

ಚಾಮರಾಜನಗರ: ಶಾಂತಿ, ಪ್ರೀತಿ, ಸೌಹಾರ್ದತೆ ಸಾರುವ ಕ್ರಿಸ್‌ಮಸ್ ಹಬ್ಬವನ್ನು ಜಿಲ್ಲೆಯಾದ್ಯಂತ ಗುರುವಾರ ಸಂಭ್ರಮದಿಂದ ಆಚರಿಸಲಾಯಿತು. ಎಲ್ಲ ಚರ್ಚ್‌ಗಳಲ್ಲಿ ಬುಧವಾರ ರಾತ್ರಿ ಹಾಗೂ ಗುರುವಾರ ಬೆಳಿಗ್ಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಕುಟುಂಬ ಸಮೇತ ಚರ್ಚ್‌ಗಳಿಗೆ ತೆರಳಿದ ಕ್ರೈಸ್ತರು ಯೇಸುವಿನ ಸ್ಮರಣೆ ಮಾಡಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡು ಕೇಕ್‌ ಸೇವಿಸಿ ಸಂಭ್ರಮಿಸಿದರು. ಧರ್ಮಗುರುಗಳ ನೇತೃತ್ವದಲ್ಲಿ ಬಲಿ ಪೂಜೆ ಸಹಿತ ಹಲವು ಧಾರ್ಮಿಕ ವಿಧಿ–ವಿಧಾನಗಳು ನಡೆದವು. ಮಕ್ಕಳು ಸಾಂತಾ ಕ್ಲಾಸ್ ವೇಷಧಾರಿಗಳಾಗಿ ಗಮನ ಸೆಳೆದರು.   

ಹಬ್ಬದ ಅಂಗವಾಗಿ ಚರ್ಚ್‌ಗಳು ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದ್ದವು. ಚರ್ಚ್‌ನ ಒಳಾಂಗಣ ಹಾಗೂ ಹೊರಾಂಗಣದಲ್ಲಿ ನಕ್ಷತ್ರ ಸಾಲುದೀಪಗಳು ಮಿನುಗುತ್ತಿದ್ದವು. ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಸಂತ ಪೌಲರ ಚರ್ಚ್‌ನಲ್ಲಿ ಶ್ರೇಷ್ಠ ಧರ್ಮಗುರು ಸಿ.ಅಂತೋನಪ್ಪ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದವು.

ADVERTISEMENT

ಬಳಿಕ ಮಾತನಾಡಿ ‘ಕ್ರಿಸ್‌ಮಸ್‌ ಒಳಿತು ಹಾಗೂ ಗೆಲುವಿನ ಸಂಕೇತವಾಗಿ ಆಚರಿಸಲಾಗುತ್ತದೆ. ಕ್ರೈಸ್ತ ಸಮುದಾಯಕ್ಕೆ ಹೊಸ ಆರಂಭವಾಗಿಯೂ ಪರಿಗಣಿಸಲಾಗುತ್ತದೆ. ಪ್ರೀತಿ, ಶಾಂತಿ, ತ್ಯಾಗ ಮತ್ತು ಮಾನವೀಯತೆಯ ಸಂದೇಶವನ್ನು ಸಾರುವ ಕ್ರಿಸ್‌ಮಸ್ ಹಬ್ಬವನ್ನು ಜಿಲ್ಲೆಯಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಬುಧವಾರ ಮಧ್ಯರಾತ್ರಿಯಿಂದಲೂ ಕ್ರೈಸ್ತರು ಚರ್ಚ್‌ಗೆ ಬಂದು ಹಬ್ಬವನ್ನು ಆಚರಿಸುತ್ತಿದ್ದಾರೆ. ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ ಎಂದರು.

ವಿಶೇಷ ಖಾದ್ಯಗಳ ತಯಾರಿ: ಹಬ್ಬದ ಅಂಗವಾಗಿ ಮನೆಗಳಲ್ಲಿ ವಿಶೇಷ ಖಾದ್ಯಗಳನ್ನು ತಯಾರಿಸಲಾಗಿತ್ತು. ಬಿರಿಯಾನಿ, ಚಿಕನ್ ಹಾಗೂ ಮಟನ್‌ನಿಂದ ತರಹೇವಾರಿ ಖಾದ್ಯಗಳನ್ನು ಸಿದ್ಧಪಡಿಸಿ ಕುಟುಂಬ ಸದಸ್ಯರು, ಬಂಧುಗಳು ಹಾಗೂ ನೆರೆ ಹೊರೆಯವರೊಂದಿಗೆ ಸವಿಯಲಾಯಿತು. 

ಚಾಮರಾಜನಗರದ ಸಂತ ಪೌಲರ ಚರ್ಚ್‌ನಲ್ಲಿ ಬುಧವಾರ ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದ ಕ್ರೈಸ್ತರು
ಚಾಮರಾಜನಗರದ ಚರ್ಚ್‌ಗೆ ಶಾಸಕ ಪುಟ್ಟರಂಗಶೆಟ್ಟಿ ಭೇಟಿನೀಡಿ ಕ್ರಿಸ್‌ಮಸ್ ಹಬ್ಬದ ಶುಭಾಶಯ ಕೋರಿದರು

ಶಾಸಕ ಪುಟ್ಟರಂಗಶೆಟ್ಟಿ ಚರ್ಚ್‌ಗೆ ಭೇಟಿ

ಕ್ರಿಸ್‌ಮಸ್ ಅಂಗವಾಗಿ ನಗರದ ಸಿಎಸ್‌ಐ ಮಸಗಾಪುರದ ಬಿಷಪ್ ಸಾರ್ಚೆಂಟ್ ಸ್ಮಾರಕ ದೇವಾಲಯ ದೊಡ್ಡರಾಯಪೇಟೆ ಸಂತ ತೆರೆಸಾ ಚರ್ಚ್‌ ಗ್ಲೋರಿಯನ್ ಚಿಕ್ಕಹೊಳೆ ಚರ್ಚ್‌ಗಳಿಗೆ ಶಾಸಕ ಸಿ.ಪುಟ್ಟರಂಗ ಶೆಟ್ಟಿ ಭೇಟಿನೀಡಿ ಹಬ್ಬದ ಶುಭಾಶಯ ಕೋರಿದರು. ಧರ್ಮಗುರುಗಳನ್ನು ಸನ್ಮಾನಿಸಿದ ಶಾಸಕರು ಕೇಕ್ ಕಟ್ ಮಾಡಿ ಹಬ್ಬದ ಸಂಭ್ರಮದಲ್ಲಿ ಭಾಗಿಯಾದರು. ಬಳಿಕ ಮಾತನಾಡಿ ಏಸುಕ್ರಿಸ್ತ ಜಗತ್ತಿಗೆ ಶಾಂತಿ ಅಹಿಂಸೆ ಕರುಣೆ ಮಾನವೀಯ ಗುಣಗಳನ್ನು ಸಾರಿದ ಮಹಾನ್ ಮಾನವತಾವಾದಿ ಎಂದು ಬಣ್ಣಿಸಿದರು. ಯೇಸು ಹುಟ್ಟಿದ ಪವಿತ್ರ ದಿನವಾದ ಕ್ರಿಸ್‌ಮಸ್‌ ಎಲ್ಲರಿಗೂ ಶುಭ ತರಲಿ. ಯೇಸುವಿನ ಆದರ್ಶಗಳು ದಾರಿದೀಪವಾಗಲಿ. ಕ್ರಿಸ್‌ಮಸ್ ನಂತರ ಹೊಸ ವರ್ಷವೂ ಬರಲಿದ್ದು ಎಲ್ಲರಿಗೂ ಒಳಿತಾಗಲಿ. ಉತ್ತಮ ಮಳೆ-ಬೆಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು. ಇದೇವೇಳೆ ಶಾಸಕ ಪುಟ್ಟರಂಗಶೆಟ್ಟಿ ಅವರನ್ನು ಧರ್ಮಗುರುಗಳು ಸನ್ಮಾನಿಸಿದರು. ಚುಡಾ ಸದಸ್ಯ ರಾಜು ನಗರಸಭೆ ನಾಮ ನಿರ್ದೇಶಿತ ಸದಸ್ಯ ಸ್ವಾಮಿ ದೂಡ್ಡರಾಯಪೇಟೆ ರವಿಗೌಡ ಪವನ್ ಜೋಸೆಫ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.