
ಚಾಮರಾಜನಗರ: ಪ್ರೀತಿ, ಶಾಂತಿ, ಸೌಹಾರ್ದತೆ ಸಾರುವ ಹಬ್ಬವಾದ ಕ್ರಿಸ್‌ಮಸ್ ಆಚರಣೆಗೆ ಜಿಲ್ಲೆ ಸಜ್ಜುಗೊಂಡಿದೆ.
ಚರ್ಚ್‌ಗಳಿಗೆ ಸುಣ್ಣ–ಬಣ್ಣ ಬಳಿದು ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಬಣ್ಣ ಬಣ್ಣದ ನಕ್ಷತ್ರಗಳಿಂದ ಪ್ರಾರ್ಥನಾ ಮಂದಿರಗಳು ಕಂಗೊಳಿಸುತ್ತಿವೆ. ಯೇಸುವಿನ ಜನನ ವೃತ್ತಾಂತ ಸಾರುವ ಗೋದಲಿಗಳ ನಿರ್ಮಾಣ ನಡೆಯುತ್ತಿದೆ.
ಜಿಲ್ಲೆಯ ಡೀನರಿ ಚರ್ಚ್‌ಗಳಲ್ಲಿ ಒಂದಾಗಿರುವ ಚಾಮರಾಜನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಸಂತಪೌಲರ ದೇವಾಲಯದಲ್ಲಿ ಕ್ರಿಸ್‌ಮಸ್ ಆಚರಣೆಗೆ ಸಿದ್ಧತೆಗಳು ಭರದಿಂದ ಸಾಗಿವೆ. ಪವಿತ್ರ ಕ್ರಿಸ್‌ಮಸ್ ಮಾಸದ ಪ್ರಾರ್ಥನೆ, ಪೂಜೆಗಳು ನಡೆಯುತ್ತಿವೆ. ನಗರ ವ್ಯಾಪ್ತಿಯಲ್ಲಿ ಕ್ರಿಶ್ಚಿಯನ್ನರು ನೆಲೆಸಿರುವ ಮನೆಗಳಿಗೆ ತೆರಳಿ ಭಜನಾ ಗೀತೆಗಳನ್ನು (ಕ್ಯಾರೋಲ್) ಹಾಡಿ ಹಬ್ಬದ ಶುಭಾಶಯ ಕೋರಲಾಗುತ್ತಿದೆ. ಸಾಂತಾಕ್ಲಾಸ್ ವೇಷಧಾರಿಗಳು ಮಕ್ಕಳಿಗೆ ಉಡುಗೊರೆ ಹಂಚುತ್ತಿದ್ದಾರೆ.
‘ಜಿಲ್ಲೆಯಲ್ಲಿ ಚಾಮರಾಜನಗರ, ಕೊಳ್ಳೇಗಾಲ ಹಾಗೂ ಹನೂರು ತಾಲ್ಲೂಕಿನಲ್ಲಿ ಕ್ರಿಶ್ಚಿಯನ್ನರ ಸಂಖ್ಯೆ ಹೆಚ್ಚಾಗಿದ್ದು, ಸಹಜವಾಗಿ ಕ್ರಿಸ್‌ಮಸ್ ಹಬ್ಬದ ಸಂಭ್ರಮ ಜೋರಾಗಿದೆ. ಹೊಸ ವರ್ಷಾರಂಭದವರೆಗೂ ಚರ್ಚ್‌ನಲ್ಲಿ ವಿಶೇಷ ಕಾರ್ಯಕ್ರಮಗಳು, ಪ್ರಾರ್ಥನೆಗಳು ನಡೆಯಲಿದೆ. ಕ್ರಿಶ್ಚಿಯನ್ನರಲ್ಲದೆ ಸರ್ವಧರ್ಮೀಯರು ಭಾಗವಹಿಸಬಹುದು. ಕ್ರಿಸ್‌ಮಸ್ ಪರಸ್ಪರ ಪ್ರೀತಿ, ಶಾಂತಿ ಹಂಚುವ ಹಬ್ಬವಾಗಿದೆ’ ಎನ್ನುತ್ತಾರೆ ಚಾಮರಾಜನಗರ ವಲಯದ ಶ್ರೇಷ್ಠ ಧರ್ಮಗುರು ಹಾಗೂ ಸಂತ ಪೌಲರ ಚರ್ಚ್ ಫಾದರ್ ಸಿ.ಅಂತೋನಪ್ಪ.
ಭರ್ಜರಿ ವ್ಯಾಪಾರ: ಕೊಳ್ಳೇಗಾಲದಲ್ಲಿ ಏಸುಕ್ರಿಸ್ತನ ಜನ್ಮದಿನವನ್ನು ವಿಭಿನ್ನವಾಗಿ ಸಂಭ್ರಮಿಸಲಾಗುತ್ತದೆ. ಡಿಸೆಂಬರ್ ಆಗಮನವಾಗುತ್ತಿದ್ದಂತೆ ಕ್ರಿಶ್ಚಿಯನ್ನರ ಮನೆಗಳಲ್ಲಿ ಹಬ್ಬಕ್ಕೆ ತಯಾರಿ ಶುರುವಾಗುತ್ತದೆ. ಚರ್ಚ್‌ಗಳಿಗೆ ಸುಣ್ಣಬಣ್ಣ ಬಳಿದು ಅಲಂಕಾರ ಮಾಡಲಾಗಿದೆ. ಕ್ರಿಶ್ಚಿಯನ್ನರ ಮನೆಗಳ ಮುಂದೆ ನಕ್ಷತ್ರ ದೀಪಗಳು ಬೆಳಗುತ್ತಿವೆ.
ಹಬ್ಬಕ್ಕೆ ವಿಶೇಷವಾಗಿ ಒಣ ಹಣ್ಣುಗಳು, ಮದ್ಯ ಬಳಸಿ ವಿಶೇಷ ಕೇಕ್ ತಯಾರಿ ನಡೆಯುತ್ತಿದೆ. ಮನೆಗಳಲ್ಲಿ ಕ್ರಿಸ್ಮಸ್ ಟ್ರೀ, ಗೋದಲಿ ನಿರ್ಮಿಸಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.
‘ಹಬ್ಬಕ್ಕೆ ಖರೀದಿ ಜೋರಾಗಿದೆ. ವಿವಿಧ ಗಾತ್ರದ ಕ್ರಿಸ್ಮಸ್ ಟ್ರೀಗಳನ್ನು ಮಾರಾಟಕ್ಕೆ ಇಡಲಾಗಿದೆ. ಕಣ್ಮನ ಸೆಳೆಯುವ ನಕ್ಷತ್ರ ದೀಪಗಳು, ಶುಭ ಸಂಕೇತದ ಗಂಟೆಗಳು, ರಿಬ್ಬನ್, ಬಣ್ಣದ ಕ್ಯಾಲೆಂಡರ್, ಸಾಂತಾಕ್ಲಾಸನ ಮುಖವಾಡ, ಕ್ರಿಸ್ಮಸ್ ಟೋಪಿಗಳ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ. ಕಳೆದ ವರ್ಷ ಹೋಲಿಸಿದರೆ ಈ ವರ್ಷ ವ್ಯಾಪಾರ ಏರುಮುಖವಾಗಿದೆ’ ಎನ್ನುತ್ತಾರೆ ಅಂಗಡಿ ಮಾಲೀಕರು.
ಕ್ಯಾರಲ್ ಗೀತೆಗಳು: ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಮನೆಗಳಿಗೆ ತೆರಳಿ ಕ್ಯಾರಲ್ (ಸೌಹಾರ್ದತೆಯ ಸಂದೇಶ ಸಾರುವ ಕ್ರಿಸ್ಮಸ್ ಹಾಡುಗಳು) ಗೀತೆ ಹಾಡುವ ಸಾಂಪ್ರದಾಯ ಈ ಬಾರಿಯೂ ಅದ್ಧೂರಿಯಾಗಿ ನಡೆಯುತ್ತಿದೆ. ಹಬ್ಬ ಒಂದು ವಾರ ಇರುವಾಗಲೇ ಚರ್ಚ್‌ಗಳಲ್ಲಿ ಕ್ಯಾರಲ್ ಗೀತೆಗಳನ್ನು ಅಭ್ಯಾಸ ಮಾಡಲಾಗಿದೆ. ಯುವಕರು, ಯುವತಿಯರು, ಹಿರಿಯರು, ಕಿರಿಯರು ಸೇರಿದಂತೆ ಒಂದು ತಂಡ ಮನೆಗಳಿಗೆ ಹೋಗಿ ಕ್ಯಾರಲ್ ಗೀತೆಗಳು ಹಾಡುತ್ತಾರೆ.
ಯೇಸುಕ್ರಿಸ್ತನು ಈ ಮನೆಯಲ್ಲಿ ಹುಟ್ಟಿದ್ದು, ಇಲ್ಲಿಯೇ ಜೀವಿಸುತ್ತಾನೆ ಎಂಬುದು ಕ್ಯಾರೆಲ್ ಗೀತೆಗಳನ್ನು ಹಾಡುವುದರ ಅರ್ಥ. ಕೊರೆಯುವ ಚಳಿಯಲ್ಲೂ ಮಧ್ಯರಾತ್ರಿಯವರೆಗೂ ಹಾರ್ಮೋನಿಯಂ, ಕಾಂಗೋ, ಕೀಬೋರ್ಡ್, ತಬಲಾ, ಕೊಳಲು ಸೇರಿದಂತೆ ವಿವಿಧ ಸಂಗೀತ ಪರಿಕರಗಳನ್ನು ಬಳಸಿಕೊಂಡು ಕ್ಯಾರೊಲ್ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಲಾಗುತ್ತದೆ.
ಕನ್ನಡ, ಮಲಯಾಳಂ, ತೆಲಗು, ತಮಿಳು, ಹಿಂದಿ, ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗಳಲ್ಲಿ ಭಜನಾ ಗೀತೆಗಳು ಹಾಡುತ್ತಾ ಯುವಕರು ಕುಣಿದು ಕುಪ್ಪಳಿಸುತ್ತಾರೆ.
ಆಕರ್ಷಕ ಕೇಕ್ ತಯಾರಿ: ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಸ್ನೇಹಿತರಿಗೆ, ಕುಟುಂಬಸ್ಥರಿಗೆ ಕ್ರಿಶ್ಚಿಯನ್ನರು ಕೇಕ್‌ಗಳನ್ನು ಹಂಚುತ್ತಾರೆ. ನಗರದ ಪ್ರತಿ ಬೇಕರಿಯಲ್ಲಿ ಕೇಕ್‌ಗಳ ಮಾರಾಟ ಭರ್ಜರಿಯಾಗಿ ನಡೆಯುತ್ತದೆ. ಕೇಕ್ ಹಾಗೂ ಹೊಸ ಬಟ್ಟೆ ತೊಟ್ಟು ಹಬ್ಬವನ್ನು ಸಂಭ್ರಮಿಸುವುದು ಸಂಪ್ರದಾಯವಾಗಿರುವ ಕಾರಣ ಬಡವರು, ಶ್ರೀಮಂತರು ಎಂಬ ಬೇಧವಿಲ್ಲದೆ ಎಲ್ಲರೂ ಪಾಲಿಸುತ್ತಾರೆ.
‘ಬೇಕರಿಗಳಲ್ಲಿ ₹ 100ರಿಂದ ಆರಂಭವಾಗಿ ಐದತ್ತು ಸಾವಿದವರೆಗಿನ ಮೌಲ್ಯದ ಕೇಕ್‌ಗಳು ತಯಾರಾಗುತ್ತಿವೆ. ಮನೆಗಳಲ್ಲೂ ಕೇಕ್ ಮಿಕ್ಸಿಂಗ್ ನಡೆಯುತ್ತಿದೆ. ದ್ರಾಕ್ಷಿ, ಬಾದಾಮಿ, ಗೋಡಂಬಿ, ಪಿಸ್ತಾ, ಖರ್ಜುರ ಮತ್ತಿತರ ಒಣ ಹಣ್ಣುಗಳನ್ನು ಬಳಸಿಕೊಂಡು ಬಗೆಬಗೆಯ ಕೇಕ್‌ಗಳನ್ನು ಸಿದ್ಧಪಡಿಸಲಾಗುತ್ತಿದೆ. ಮಿಕ್ಸ್ ಕೇಕ್, ಸಲಾಡ್ ಕೇಕ್, ಫಮ್ ಕೇಕ್ ಹೀಗೆ ಹಲವು ಬಗೆಯ ಕೇಕ್‌ಗಳು ಮಾರುಕಟ್ಟೆಯಲ್ಲಿ ಗಮನ ಸೆಳೆಯುತ್ತಿವೆ’ ಎನ್ನುತ್ತಾರೆ ಸೂಸನ್ನಾ.
ಮಾರ್ಟಳ್ಳಿಯಲ್ಲಿ ಸಂಭ್ರಮ: ಹನೂರು ತಾಲೂಕಿನ ಗ್ರಾಮಾಂತರ ಭಾಗಗಳಲ್ಲಿ ಕ್ರಿಸ್ ಮಸ್ ಹಬ್ಬದ ತಯಾರಿ ಜೋರಾಗಿದೆ. ಮನೆಗಳು, ಚರ್ಚ್‌ಗಳು ವಿದ್ಯುತ್ ದೀಪಾಲಂಕಾರದಿಂದ ಗಮನ ಸೆಳೆಯುತ್ತಿವೆ. ಹನೂರು ಪಟ್ಟಣ, ಕಾಮಗೆರೆ, ಮಂಗಲ, ಕೌದಳ್ಳಿ, ಮಾರ್ಟಳ್ಳಿ ಭಾಗಗಳಲ್ಲಿ ಹಬ್ಬದ ತಯಾರಿ ಜೋರಾಗಿದೆ. ಮನೆ ಹಾಗೂ ಚರ್ಚ್‌ಗಳ ಮುಂಭಾಗ ಗೋದಲಿ ನಿರ್ಮಾಣ ನಡೆಯುತ್ತಿದೆ.
‘ಸರ್ವಧರ್ಮೀಯರೂ ಭಾಗವಹಿಸಿ’ ಡಿ.24ರಂದು ರಾತ್ರಿ 11ರಿಂದ 11.45ರವರೆಗೆ ಭಜನೆ ನಂತರ ಬಲಿ ಪೂಜೆ ನಡೆಯಲಿದೆ. ಹಬ್ಬದ ದಿನ 25ರಂದು ಬೆಳಿಗ್ಗೆ 8ಕ್ಕೆ ನಡೆಯುವ ವಿಶೇಷ ಬಲಿಪೂಜೆಯಲ್ಲಿ ಸಹಸ್ರಾರು ಕ್ರಿಶ್ಚಿಯನ್ನರು ಕುಟುಂಬ ಸಮೇತ ಭಾಗವಹಿಸಿ ಯೇಸುವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಕೇಕ್ ಹಂಚಿ ಪರಸ್ಪರ ಶುಭಾಶಯ ವಿನಿಯಮ ನಡೆಯಲಿದೆ.ಫಾದರ್ ಸಿ.ಅಂತೋನಪ್ಪ ಚಾಮರಾಜನಗರ ವಲಯದ ಶ್ರೇಷ್ಠ ಧರ್ಮಗುರು
‘ಮಕ್ಕಳ ಅಸಮಾನತೆ ನೀಗಲು ಪ್ರಾರ್ಥನೆ’ ಹನೂರು ತಾಲ್ಲೂಕಿನ ಮಾರ್ಟಳ್ಳಿ ಧರ್ಮಕೇಂದ್ರದಲ್ಲಿ ಕ್ರಿಸ್ತನ ಜಯಂತಿ ಉತ್ಸವವನ್ನು ಎಲ್ಲ ಧರ್ಮೀಯರು ಒಗ್ಗಟ್ಟಾಗಿ ಆಚರಿಸುವುದು ವಿಶೇಷ. ಶಾಂತಿ ಪ್ರೀತಿ ಹಂಚುವ ಹಬ್ಬದ ದಿನ ಮಕ್ಕಳ ಮಧ್ಯದಲ್ಲಿರುವ ಅಸಮಾನತೆಯನ್ನು ಹೋಗಲಾಡಿಸಿ ನೆಮ್ಮದಿಯಿಂದ ಬದುಕಲು ಯೇಸುಕ್ರಿಸ್ತನ ಬಳಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು.–ಫಾದರ್ ಡಾ.ಎಂ.ವಿನ್ಸೆಂಟ್ ಮಾರ್ಟಳ್ಳಿ
ಧರ್ಮಕೇಂದ್ರದ ಗುರು ‘ಪ್ರೀತಿ ಶಾಂತಿಯೇ ಮಂತ್ರ’ ಕ್ರಿಸ್‌ಮಸ್ ಹಬ್ಬದ ವಿಶೇಷತೆಯೇ ಪ್ರೀತಿ ಶಾಂತಿ ಹಂಚಿ ಇತರರಿಗೆ ಸಹಾಯ ಮಾಡುವುದಾಗಿದೆ. ಹಾಗಾಗಿ ಹಬ್ಬದಲ್ಲಿ ಬಡವರಿಗೆ ದಾನ ಧರ್ಮ ಮಾಡಲಾಗುವುದು. ವಿಶ್ವಶಾಂತಿಗೆ ಸೈನಿಕರ ಹಾಗೂ ನಾಗರಿಕರ ಶ್ರೇಯಸ್ಸಿಗೆ ವಿಶೇಷ ಪ್ರಾರ್ಥನೆ ನಡೆಯಲಿದೆ. ಹಬ್ಬದ ಸಂದರ್ಭ ಪ್ರತಿನಿತ್ಯ ಹಗಲು ರಾತ್ರಿ ಕ್ರಿಸ್ತನಲ್ಲಿ ಪ್ರಾರ್ಥನೆ ಮಾಡಲಾಗುವುದು.–ರೆ.ಜೋಶುವಾ ಪ್ರಸನ್ನ ಕುಮಾರ್ ಬೇತೆಲ್ ಲೂಥರನ್ ಚರ್ಚ್ ಸಭಾ ಪಾಲಕ
ಮಾರ್ಟಳ್ಳಿಯಲ್ಲಿ ಸಂಭ್ರಮ ಮಾರ್ಟಳ್ಳಿ ಭಾಗದಲ್ಲಿ ಕ್ರೈಸ್ತರು ಹೆಚ್ಚಾಗಿರುವುದರಿಂದ ಕ್ರಿಸ್ ಮಸ್ ಹಬ್ಬದ ಸಂಭ್ರಮ ಹೆಚ್ಚಾಗಿರುತ್ತದೆ. ಬಡವರು ಹಾಗೂ ನಿರ್ಗತಿಕ ಜನರಿಗೆ ಸಹಾಯ ಮಾಡುವ ಮೂಲಕ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ.–ದಯಾಳ್ ಮಾರ್ಟಳ್ಳಿ ನಿವಾಸಿ
ಸಿಂಗಾರಗೊಂಡ ಚರ್ಚ್‌ಗಳು
ಸಂತೇಮರಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿರುವ ಚರ್ಚ್‌ಗಳು ಕ್ರಿಸ್ಮಸ್ ಹಬ್ಬಕ್ಕೆ ಸಿಂಗಾರಗೊಂಡಿವೆ. ಹೋಬಳಿ ವ್ಯಾಪ್ತಿಯ ಬಸವಟ್ಟಿ ದೇಶವಳ್ಳಿ ಮಂಗಲ ಹೊಸೂರು ಕಸ್ತೂರು ಹಾಗೂ ಭೋಗಾಪುರ ಗ್ರಾಮಗಳಲ್ಲಿರುವ ಚರ್ಚ್‌ಗಳಳಿಗೆ ಸುಣ್ಣಬಣ್ಣ ಬಳಿಯಲಾಗಿದೆ. ಬೆಳಕಿನ ನಕ್ಷತ್ರಗಳನ್ನು ಕಟ್ಟಿ ಅಲಂಕಾರ ಮಾಡಲಾಗಿದೆ. ಚರ್ಚ್ ಒಳಾಂಗಣದಲ್ಲಿ ಬಣ್ಣದ ಪೇಪರ್‌ಗಳಿಂ ಸಿಂಗರಿಸಲಾಗಿದೆ. ಗೋದಲಿ ನಿರ್ಮಿಸಲಾಗುತ್ತಿದೆ.
ನಿರ್ವಹಣೆ: ಬಾಲಚಂದ್ರ ಎಚ್,
ಪೂರಕ ಮಾಹಿತಿ: ಅವಿನ್ ಪ್ರಕಾಶ್, ಬಸವರಾಜು ಬಿ, ಮಹದೇವ್ ಹೆಗ್ಗವಾಡಿಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.