ADVERTISEMENT

ಥಂಡಿ ವಾತಾವರಣಕ್ಕೆ ಥರಗುಟ್ಟುತ್ತಿರುವ ಜನರು

ಶಾಲು, ಸ್ವೆಟರ್, ಟೋಪಿ, ಕೈಗವಸಿಗೆ ಹೆಚ್ಚಾದ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 6:04 IST
Last Updated 26 ಡಿಸೆಂಬರ್ 2025, 6:04 IST
ಯಳಂದೂರು ತಾಲ್ಲೂಕಿನ ಕೆಸ್ತೂರು-ಹೊಸೂರು ರಸ್ತೆಯಲ್ಲಿ ಗುರುವಾರ ಸಂಜೆ ಕಂಡುಬಂದ ದೃಶ್ಯ
ಯಳಂದೂರು ತಾಲ್ಲೂಕಿನ ಕೆಸ್ತೂರು-ಹೊಸೂರು ರಸ್ತೆಯಲ್ಲಿ ಗುರುವಾರ ಸಂಜೆ ಕಂಡುಬಂದ ದೃಶ್ಯ   

ಯಳಂದೂರು: ಸಂಜೆ ನೇಸರ ವಿಶ್ರಾಂತಿಗೆ ಜಾರುತ್ತಿದ್ದಂತೆ ಶೀತಗಾಳಿ ಅಬ್ಬರ ದಾಂಗುಡಿ ಇಡುತ್ತದೆ. ಗೋಧೂಳಿ ಲಗ್ನದಲ್ಲಿ ಧೂಳಿನ ಕಣಗಳು ಕೆಂಪಡರುತ್ತ ಪಶ್ಚಿಮದ ದಿಗಂತವನ್ನು ದಿಟ್ಟಿಸುತ್ತ ಸಾಗುವ ದೃಶ್ಯಗಳು ತಾಲ್ಲೂಕಿನಲ್ಲಿ ಕಾಣಸಿಗುತ್ತಿವೆ.

ಹೊಲಗದ್ದೆ, ಜಾನುವಾರು ಸಾಕಣೆಯಲ್ಲಿ ಶ್ರಮಿಸುತ್ತಿರುವ ದುಡಿಯುವ ವರ್ಗದವರ ಬದುಕು ‘ಥಂಡಿ’ ವಾತಾವರಣದಲ್ಲಿ ಥರಗುಟ್ಟುವಂತಾಗಿದೆ.  ಗ್ರಾಮೀಣ ಭಾಗಗಳಲ್ಲಿ ಮುಂಜಾನೆ ಎದ್ದು ಹಾಲು ಕರೆಯುವ ಮಂದಿ, ಶಾಲಾ-ಕಾಲೇಜಿಗೆ ಸಿದ್ಧವಾಗುವ ಮಕ್ಕಳು, ಪತ್ರಿಕೆ ಹಂಚುವ ಯುವಕರು, ದಿನದ ದುಡಿಮೆಗೆ ಪರಿತಿಸುವ ರೈತರು ಹಾಗೂ ಶ್ರಮಿಕರು ಶೀತ ಗಾಳಿಗೆ ಸಿಲುಕಿ ನಡುಗುತ್ತಿದ್ದಾರೆ.

ಮೈ ನಡುಗಿಸುವ ಚಳಿಯಿಂದ ರಕ್ಷಣೆ ಪಡೆಯಲು ಬೆಚ್ಚನೆಯ ಉಡುಪುಗಳನ್ನು ತೊಟ್ಟು, ಬಿಸಿಲಿಗೆ ಮೈವೊಡ್ಡುವ ಹಾಗೂ ಬೆಂಕಿಯ ಪಕ್ಕ ಬಿಸಿ ಕಾಯಿಸಿಕೊಳ್ಳುವ ದೃಶ್ಯಗಳು ತಾಲ್ಲೂಕಿನಾದ್ಯಂತ ಸಾಮಾನ್ಯವಾಗಿ ಕಾಣಸಿಗುತ್ತಿವೆ.

ADVERTISEMENT

‘ಈ ಬಾರಿ ಅತಿಯಾದ ಚಳಿ ಕಾಣಿಸಿಕೊಂಡಿದೆ. ಮಧ್ಯಾಹ್ನ ಮೈಸುಡುವ ಬಿಸಿಲಾದರೆ ಸಂಜೆ ಹೊತ್ತಿಗೆ ಶೀತ ಮಾರುತ ಬೀಸುತ್ತಿದ್ದು ಮೈಕೊರೆಯುವಷ್ಟು ಚಳಿ ಕಾಡುತ್ತಿದೆ. ರಾತ್ರಿಯಾಗುತ್ತಲೇ ಮನೆಯಿಂದ ಹೊರಬರುವುದಕ್ಕೆ ಮನಸ್ಸು ಒಪ್ಪುತ್ತಿಲ್ಲ. ದಪ್ಪನೆ ಧಿರಿಸು ತೊಟ್ಟು ಮನೆಯಲ್ಲಿ ಇರುವುದು ಖುಷಿ ಕೊಡುತ್ತದೆ’ ಎನ್ನುತ್ತಾರೆ ಪಟ್ಟಣದ ಸುರೇಶ್ ಕುಮಾರ್.

ಮಳೆ ಇರಲಿ, ಚಳಿ ಇರಲಿ, ಬೆಳ್ಳಿ ಮೂಡುವ ಹೊತ್ತಿನಲ್ಲಿ ಮನೆಯಿಂದ ಹೊರಬಂದು ಸಗಟು ಮಾರುಕಟ್ಟೆಯಲ್ಲಿ ತರಕಾರಿ ತಂದು ಮಾರಾಟ ಮಾಡಿ ಜೀವನ ನಿರ್ವಹಣೆ ಮಾಡಬೇಕು. ಜೀವನದ ಬಂಡಿ ಸಾಗಲು ವ್ಯಾಪಾರ ಅನಿವಾರ್ಯವಾಗಿದ್ದು ಸಂಜೆವರೆಗೂ ಸೈಕಲ್ ತುಳಿಯಬೇಕು. ಸಂತೆಗಳಿಗೆ ಕಾಯಿಪಲ್ಯ ಸಾಗಣೆ ಮಾಡಿ ವ್ಯಾಪಾರ ಮಾಡಬೇಕು ಎನ್ನುತ್ತಾರೆ ಹುಲ್ಲೇಪುರ ವ್ಯಾಪಾರಿ ಮಹದೇಶ್.

ಬಟ್ಟೆ ಅಂಗಡಿಗಳಲ್ಲಿ ಮತ್ತು ದಾರಿ ಬದಿ ಬೆಚ್ಚಗಿನ ಉಡುಪು ಮಾರಾಟ ಮಾಡುವವರ ಸಂಖ್ಯೆ ಏರಿಕೆ ಕಂಡಿದೆ. ಸ್ಪೆಟರ್, ಮಫ್ಲಾರ್, ಶಾಲು, ಟೋಟಿ, ಕೈಗವಸು, ಹೊದಿಕೆಗಳನ್ನು ಖರೀದಿ ಮಾಡುತ್ತಿದ್ದಾರೆ.

ಮತ್ತೊಂದೆಡೆ ಚಳಿ ಅನಾರೋಗ್ಯ ಸಮಸ್ಯೆಗಳನ್ನು ಸೃಷ್ಟಿಸಿದೆ. ಮಕ್ಕಳು ಮತ್ತು ವೃದ್ಧರಲ್ಲಿ ಹೆಚ್ಚಾಗಿ ಶೀತ, ನೆಗಡಿ, ಚಳಿ, ಜ್ವರಗಳಿಂದ ನರಳುತ್ತಿದ್ದಾರೆ.  ಮಧ್ಯ ವಯಸ್ಕರು ಮತ್ತು ಹಿರಿಯರು ಶೀತಗಾಳಿಗೆ ದೇಹವನ್ನು ಒಡ್ಡಿಕೊಳ್ಳಬಾರದು. ದೇಹದ ಉಷ್ಣಾಂಶ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು ಎಂಬುದು ವೈದ್ಯರ ಸಲಹೆ.

ಬಿಸಿಯಾದ ಟೀ, ಕಾಫಿ ಸೇವಿಸುವವ ಸಂಖ್ಯೆ ಹೆಚ್ಚಾಗಿದೆ. ತಂಪು ಪಾನೀಯಗಳ ಬಳಕೆ ತಗ್ಗಿದೆ. ಖಾರ ಪದಾರ್ಥ, ಬಜ್ಜಿ, ಬೋಂಡ, ಮೆಣಸಿಕಾಯಿ ಮುಳಕ ಹಾಗೂ ಬಿಸಿಬಿಸಿ ಪದಾರ್ಥ ಸೇವನೆಯತ್ತ ಒಲವು ಹೆಚ್ಚಾಗಿದೆ. ಅನುಪಯುಕ್ತ ಪದಾರ್ಥಗಳಿಗೆ ಬೆಂಕಿಹಚ್ಚಿ ಸುತ್ತಲೂ ಕುಳಿತು ಬೆಚ್ಚಗಿನ ಅನುಭವ ಪಡೆಯುವ ದೃಶ್ಯಗಳು ಎಲ್ಲೆಡೆ ಸಾಮಾನ್ಯವಾಗಿದೆ ಎನ್ನುತ್ತಾರೆ ಪಟ್ಟಣದ ಹೋಟೆಲ್ ಮಾಲೀಕ ಬಾಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.