ADVERTISEMENT

ಚಾಮರಾಜನಗರ: ಸಾಮಾಜಿಕ ಬಹಿಷ್ಕಾರದ ಆರೋಪ ಮಾಡಿದ ಕುಟುಂಬ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2023, 5:53 IST
Last Updated 13 ಫೆಬ್ರುವರಿ 2023, 5:53 IST

ಚಾಮರಾಜನಗರ: ತಮ್ಮ ಕುಟುಂಬಕ್ಕೆ ಸಮುದಾಯದವರು ಸಾಮಾಜಿಕ ಬಹಿಷ್ಕಾರ ಹಾಕಿದ್ದು, ಮೃತಪಟ್ಟಿರುವ ತನ್ನ ಅಣ್ಣನ ಅಂತ್ಯಸಂಸ್ಕಾರವನ್ನು ಮಾಡಲು ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸಿ ತಾಲ್ಲೂಕಿನ ನಾಗವಳ್ಳಿ ಗ್ರಾಮದ ಗುಂಡಶೆಟ್ಟಿ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ.

ಗುಂಡಶೆಟ್ಟಿ ಅವರು ಉಪ್ಪಾರ ಸಮುದಾಯದವರು. ಅವರ ಅಣ್ಣ ರಂಗಶೆಟ್ಟಿ (65) ಭಾನುವಾರ ಮೃತಪಟ್ಟಿದ್ದಾರೆ. ತೋಟದ ಮನೆಯಲ್ಲಿ ವಾಸಿಸುತ್ತಿರುವ ಇವರ ಮನೆಗೆ ಭಾನುವಾರ ಸಮುದಾಯದವರು ಯಾರೂ ಬಂದಿಲ್ಲ. ನೆಂಟರಿಷ್ಟರು ಮಾತ್ರ ಬಂದಿದ್ದಾರೆ.

‘ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಐದು ವರ್ಷಗಳ ಹಿಂದೆ ನಮ್ಮ ಕುಟುಂಬಕ್ಕೆ ಸಮುದಾಯದವರು ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ಹಾಗಾಗಿ, ನಾವು ತೋಟದ ಮನೆಯಲ್ಲಿ ವಾಸಿಸುತ್ತಿದ್ದೇವೆ. ಅಣ್ಣ ಮೃತಪಟ್ಟಿದ್ದು, ಅವನ ಅಂತ್ಯಸಂಸ್ಕಾರವನ್ನು ಗೌರವಯುತವಾಗಿ ನಡೆಸುವುದಕ್ಕೆ ಅವಕಾಶ ಕೊಡುತ್ತಿಲ್ಲ. ಜಮೀನು ವಿಚಾರದಲ್ಲಿ ತಾವು ಹೇಳಿದಂತೆ ನಡೆದರೆ ಮಾತ್ರ ಬರುವುದಾಗಿ ಹೇಳುತ್ತಿದ್ದಾರೆ’ ಎಂದು ಗುಂಡಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಈ ಬಗ್ಗೆ ಪ್ರತಿಕ್ರಿಯಿಸಿದ ಚಾಮರಾಜನಗರ ಪೂರ್ವ ಠಾಣೆ ಇನ್‌ಸ್ಪೆಕ್ಟರ್‌ ಶ್ರೀಕಾಂತ್‌, ‘ಗುಂಡಶೆಟ್ಟಿ ಎಂಬುವವರು ನಮಗೆ ದೂರು ನೀಡಿದ್ದಾರೆ. ನಾವು ಸಮುದಾಯದವರನ್ನು ಕರೆದು ವಿಚಾರಿಸಿದ್ದೇವೆ. ‘ರಂಗಶೆಟ್ಟಿ ಮತ್ತು ಕುಟುಂಬದವರೇ, ಸಮುದಾಯದವರು ತಮಗೆ ಬೇಡ ಎಂದು ಹೇಳಿಕೊಂಡು ದೂರ ಆಗಿ ತೋಟದ ಮನೆಯಲ್ಲಿದ್ದಾರೆ. ಅವರಿಗೆ ಬೇಡ ಎಂದ ಮೇಲೆ ನಾವು ಯಾಕೆ ಹೋಗಬೇಕು ಎಂದು ಹೋಗಿಲ್ಲ’ ಎಂದು ಹೇಳಿದ್ದಾರೆ. ಅಂತ್ಯ ಸಂಸ್ಕಾರಕ್ಕೆ ಸಹಕಾರ ನೀಡಬೇಕು ಎಂದು ಹೇಳಿದ್ದೇವೆ. ಅವರೂ ಒಪ್ಪಿದ್ದಾರೆ’ ಎಂದರು.

ಆದರೆ, ಭಾನುವಾರ ಸಂಜೆಯವರೆಗೆ ಅಂತ್ಯಸಂಸ್ಕಾರ ನಡೆದಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.