ADVERTISEMENT

ಕಾಂಗ್ರೆಸ್‌ ಪ್ರಜಾಧ್ವನಿ ಬಸ್ ಯಾತ್ರೆ ಚಾಮರಾಜನಗರಕ್ಕೆ ಗುರುವಾರ

ಚಾಮರಾಜನಗರದಲ್ಲಿ ಬಹಿರಂಗ ಸಮಾವೇಶ; 60 ಸಾವಿರ ಜನರು ಭಾಗವಹಿಸುವ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2023, 16:43 IST
Last Updated 24 ಜನವರಿ 2023, 16:43 IST
ಸಿ.ಪುಟ್ಟರಂಗಶೆಟ್ಟಿ
ಸಿ.ಪುಟ್ಟರಂಗಶೆಟ್ಟಿ   

ಚಾಮರಾಜನಗರ: ಕೆಪಿಸಿಸಿ ಹಮ್ಮಿಕೊಂಡಿರುವ ‘ಪ್ರಜಾಧ್ವನಿ ಬಸ್‌ ಯಾತ್ರೆ‘ ಗುರುವಾರ (ಜ.26) ನಗರಕ್ಕೆ ಬರಲಿದ್ದು, ಬೃಹತ್‌ ಬಹಿರಂಗ ಸಭೆ ನಡೆಯಲಿದೆ.

ಜಿಲ್ಲಾ ಕಾಂಗ್ರೆಸ್‌ ಸಮಿತಿ, ಚಾಮರಾಜನಗರ ಬ್ಲಾಕ್‌ ಕಾಂಗ್ರೆಸ್‌, ಗ್ರಾಮಾಂತರ ಬ್ಲಾಕ್‌ ಕಾಂಗ್ರೆಸ್‌ ಘಟಕಗಳು ಬಹಿರಂಗ ಸಭೆಗೆ ಸಿದ್ಧತೆ ನಡೆಸುತ್ತಿವೆ.

ಪ್ರಜಾಧ್ವನಿ ಬಸ್‌ ಯಾತ್ರೆ, ಬಹಿರಂಗ ಸಭೆಯ ಬಗ್ಗೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶಾಸಕ ಸಿ.ಪುಟ್ಟರಂಗಶೆಟ್ಟಿ, ‘ಇದೇ 11ರಂದು ಬೆಳಗಾವಿಯಿಂದ ಬಸ್ ಯಾತ್ರೆ ಆರಂಭವಾಗಿದ್ದು, 26 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲೆಗೆ ಬರಲಿದೆ. ಸಂತೇಮರಹಳ್ಳಿ ರಸ್ತೆಯ ರೇಷ್ಮೆ ಕಾರ್ಖಾನೆ ಬಳಿಯ ಮೈದಾನದಲ್ಲಿ ಬಹಿರಂಗ ಸಭೆ ನಡೆಯಲಿದೆ’ ಎಂದರು.

ADVERTISEMENT

‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಬಸ್ ಯಾತ್ರೆ ಬರಲಿದ್ದು, ಟೋಲ್‌ಗೇಟ್ ಬಳಿ ಸ್ವಾಗತಿಸಿ, ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಡಿವಿಯೇಷನ್ ರಸ್ತೆ, ಸುಲ್ತಾನ್ ಷರೀಫ್‌ ರಸ್ತೆ, ದೊಡ್ಡಂಗಡಿ ಬೀದಿ ಮಾರ್ಗವಾಗಿ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ನಂತರ ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ವೃತ್ತದ ಮೂಲಕ ರೇಷ್ಮೆ ಕಾರ್ಖಾನೆಯ ಹತ್ತಿರ ಮೈದಾನದಲ್ಲಿರುವ ಹಾಕಿರುವ ಬೃಹತ್ ವೇದಿಕೆಯಲ್ಲಿ ಸಮಾವೇಶ ನಡೆಯಲಿದೆ’ ಎಂದರು.

‘ಈ ಯಾತ್ರೆಯಲ್ಲಿ ಬಿಜೆಪಿ ಸರ್ಕಾರ ಭ್ರಷ್ಟಾಚಾರ, ದುರಾಡಳಿತ ಹಾಗೂ ಕಾಂಗ್ರೆಸ್ ಸರ್ಕಾರ ಅವಧಿಯ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಾಧನೆ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಆಗಿರುವ ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಲಾಗುವುದು. ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ. ಪಾಟೀಲ, ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಸೇರಿದಂತೆ ರಾಜ್ಯ ಮಟ್ಟದ ನಾಯಕರು ಭಾಗವಹಿಸಲಿದ್ದಾರೆ’ ಎಂದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ‘ಈ ಸಮಾವೇಶದಲ್ಲಿ ಜಿಲ್ಲೆಯ ನಾಲ್ಕು ವಿಧಾನ ಸಭಾ ಕ್ಷೇತ್ರಗಳಿಂದ ತಲಾ 15 ಸಾವಿರದಂತೆ 60 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ’ ಎಂದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್, ಎಸ್‌ಟಿ ಘಟಕದ ಅಧ್ಯಕ್ಷ ಬಿ.ಕಾಂ. ಮಹದೇವನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮದ್ ಅಸ್ಗರ್, ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ವಕೀಲರಾದ ಅರುಣ್ ಕುಮಾರ್, ಮುಖಂಡ ಉಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.