ADVERTISEMENT

ಎಪಿಎಂಸಿ: ಮತ್ತೆ ಕಾಂಗ್ರೆಸ್‌ ತೆಕ್ಕೆಗೆ

ಚಾಮರಾಜನಗರ: ಅಧ್ಯಕ್ಷರಾಗಿ ಡಿ.ನಾಗೇಂದ್ರ, ಉಪಾಧ್ಯಕ್ಷರಾಗಿ ನಾಗಮ್ಮ ಆಯ್ಕೆ

ಸೂರ್ಯನಾರಾಯಣ ವಿ
Published 28 ಮೇ 2020, 16:32 IST
Last Updated 28 ಮೇ 2020, 16:32 IST
ಎಪಿಎಂಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ನಾಗೇಂದ್ರ ಹಾಗೂ ನಾಗಮ್ಮ ಅವರನ್ನು ಸದಸ್ಯರು ಅಭಿನಂದಿಸಿದರು. ಚುನಾವಣಾಧಿಕಾರಿ ಜೆ.ಮಹೇಶ್‌ ಇದ್ದರು
ಎಪಿಎಂಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ನಾಗೇಂದ್ರ ಹಾಗೂ ನಾಗಮ್ಮ ಅವರನ್ನು ಸದಸ್ಯರು ಅಭಿನಂದಿಸಿದರು. ಚುನಾವಣಾಧಿಕಾರಿ ಜೆ.ಮಹೇಶ್‌ ಇದ್ದರು   

ಚಾಮರಾಜನಗರ: ಚಾಮರಾಜನಗರ ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎ‍ಪಿಎಂಸಿ) ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಮತ್ತೆ ಕಾಂಗ್ರೆಸ್‌ ಪಾಲಾಗಿದೆ.

ಗುರುವಾರ ನಡೆದ ಚುನಾವಣೆಯಲ್ಲಿ ಬದನಗುಪ್ಪೆ ಕ್ಷೇತ್ರದ ಡಿ.ನಾಗೇಂದ್ರ ಅವರು ಅಧ್ಯಕ್ಷರಾಗಿ ಹಾಗೂ ಅಮಚವಾಡಿ ಕ್ಷೇತ್ರದ ನಾಗಮ್ಮ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

17 ಸದಸ್ಯ ಬಲದ ಎಪಿಎಂಸಿಯಲ್ಲಿ 14 ಮಂದಿ ಚುನಾಯಿತ ಸದಸ್ಯರು ಇದ್ದಾರೆ. ಮೂವರು ನಾಮ ನಿರ್ದೇಶಿತ ಸದಸ್ಯರು. ಕಾಂಗ್ರೆಸ್‌ ಹಾಗೂ ಬಿಜೆಪಿ ಬೆಂಬಲಿತ ತಲಾ ಎಂಟು ಸದಸ್ಯರು ಇಲ್ಲಿದ್ದಾರೆ. ಹಾಗಾಗಿ, ಪ್ರಬಲ ಪೈಪೋಟಿ ಏರ್ಪಟ್ಟಿತ್ತು. ಈ ಹಿಂದಿನ ಎರಡು ಬಾರಿಯೂ ಕಾಂಗ್ರೆಸ್‌ ಬೆಂಬಲಿತ ಸದಸ್ಯರೇ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿದ್ದರು.

ADVERTISEMENT

ಈ ಬಾರಿ ಬಿಜೆಪಿ ಬೆಂಬಲಿತ, ಯಳಂದೂರು ಕ್ಷೇತ್ರದ ಕೆ.ಎಸ್‌.ಚಂದ್ರಶೇಖರ್‌ ಅವರು ಅಧ್ಯಕ್ಷ ಸ್ಥಾನಕ್ಕೆ ಹಾಗೂ ಚಾಮರಾಜನಗರ ಕ್ಷೇತ್ರದ ಹೆಗ್ಗೂರುಶೆಟ್ಟಿ ಅವರು ಸ್ಪರ್ಧಿಸಿದ್ದರು.

ಚುನಾವಣಾಧಿಕಾರಿಯಾಗಿ ನಿಯೋಜನೆಗೊಂಡಿದ್ದ ತಹಶೀಲ್ದಾರ್‌ ಜೆ.ಮಹೇಶ್‌ ಅವರ ಉಸ್ತುವಾರಿಯಲ್ಲಿ ಗುಪ್ತ ಮತದಾನ ನಡೆಯಿತು. ಡಿ.ನಾಗೇಂದ್ರ ಹಾಗೂ ನಾಗಮ್ಮ ಅವರು ತಲಾ 10 ಮತಗಳನ್ನು ಪಡೆದರೆ, ಚಂದ್ರಶೇಖರ್ ಮತ್ತು ಹೆಗ್ಗೂರುಶೆಟ್ಟಿ ಅವರು ತಲಾ ಆರು ಮತಗಳನ್ನು ಪಡೆದರು. ಒಂದು ಮತ ತಿರಸ್ಕೃತಗೊಂಡಿತು.

ಚುನಾವಣಾಧಿಕಾರಿ ಮಹೇಶ್‌ ಅವರು ಡಿ.ನಾಗೇಂದ್ರ ಹಾಗೂ ನಾಗಮ್ಮ ಅವರ ಆಯ್ಕೆಯನ್ನು ಘೋಷಿಸಿ ಪ್ರಮಾಣಪತ್ರ ನೀಡಿದರು. ನಾಗೇಂದ್ರ ಅವರು 20 ತಿಂಗಳ ಅವಧಿಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಎಪಿಎಂಸಿ ನಿರ್ಗಮಿತ ಅಧ್ಯಕ್ಷ ಶಿವಶಂಕರಮೂರ್ತಿ, ಉಪಾಧ್ಯಕ್ಷ ನಂಜುಂಡಸ್ವಾಮಿ, ನಿರ್ದೇಶಕರಾದ ಬಿ.ಕೆ.ರವಿಕುಮಾರ್, ಮಾದೇವಸ್ವಾಮಿ, ನಾಗೇಂದ್ರ, ಚಂದ್ರಶೇಖರ್, ಜಿ.ಸುಂದ್ರಮ್ಮ, ಹೆಗ್ಗೂರುಶೆಟ್ಟಿ, ಎಸ್.ಬಸವನಾಯಕ, ಪುಟ್ಟಸುಬ್ಬಪ್ಪ, ಎಂ.ವಿಶ್ವನಾಥ್, ಪಿ.ಚಾಮರಾಜು, ಎಚ್.ವಿ.ವೆಂಕಟಶೇಷಯ್ಯ, ನಾಮನಿರ್ದೇಶನ ಸದಸ್ಯರಾದ ಜೆ.ಪಿ.ದೊರೆಸ್ವಾಮಿ, ಶಿವಣ್ಣ, ಮಹದೇವಮ್ಮ, ಸಹಾಯಕ ನಿರ್ದೇಶಕ ರವಿಶಂಕರ್, ಕಾರ್ಯದರ್ಶಿ ಪ್ರಕಾಶ್‌ಕುಮಾರ್ ಇದ್ದರು.

ಎಪಿಎಂಸಿ ಕಾಯ್ದೆ ವಿರುದ್ಧ ಹೋರಾಟ

ಆಯ್ಕೆಯ ನಂತರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನಾಗೇಂದ್ರ ಅವರು, ‘ಹಿಂದಿನ ಇಬ್ಬರು ಅಧ್ಯಕ್ಷರು ಆರಂಭಿಸಿದ ಹಲವು ಯೋಜನೆಗಳನ್ನು ಪೂರ್ಣಗೊಳಿಸಲು ಶ್ರಮ ವಹಿಸುತ್ತೇನೆ. ರಾಜ್ಯ ಸರ್ಕಾರವು ಸುಗ್ರೀವಾಜ್ಞೆ ಮೂಲಕ, ರೈತರಿಗೆ ಮಾರಕವಾಗಿರುವ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದೆ. ಇದರ ವಿರುದ್ಧ ಹೋರಾಟ ನಡೆಸುತ್ತೇನೆ’ ಎಂದು ಹೇಳಿದರು.

ಶೀಘ್ರ ಪೂರ್ಣ: ‘ಎಪಿಎಂಸಿಯಲ್ಲಿ ಸ್ಥಾಪ‍ನೆ ಮಾಡಲಾಗುತ್ತಿರುವ ಅರಿಸಿನ ಸಂಸ್ಕರಣಾ ಕೇಂದ್ರವನ್ನು ಶೀಘ್ರದಲ್ಲಿ ಕಾರ್ಯಾರಂಭ ಮಾಡಲು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಕಟ್ಟಡ ಉದ್ಘಾಟನೆಯಾಗಿದೆ. ಪ್ರಯೋಗಾಲಯವೂ ಆರಂಭವಾಗಲಿದ್ದು, ಘಟಕದ ಕೆಲವು ಸಲಕರಣೆಗಳು ಬರಬೇಕಿದೆ. ಎರಡು ವಾರಗಳೊಳಗೆ ಘಟಕ ಸಿದ್ಧವಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.