ADVERTISEMENT

ಸಂವಿಧಾನ ಜಾಗೃತಿ: ಬೃಹತ್ ವಾಕ್‌ಥಾನ್ ನಾಳೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2020, 16:26 IST
Last Updated 22 ಜನವರಿ 2020, 16:26 IST
ಡಿ.ವಿ.ಪಾಟೀಲ
ಡಿ.ವಿ.ಪಾಟೀಲ   

ಚಾಮರಾಜನಗರ: ಗಣರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪೊಲೀಸ್‌ ಇಲಾಖೆ, ಜಿಲ್ಲಾ ವಕೀಲರ ಸಂಘ, ಲಯನ್ಸ್‌, ರೋಟರಿ, ರೆಡ್‌ ಕ್ರಾಸ್‌ ಸಂಸ್ಥೆಗಳ ಸಹಯೋಗದಲ್ಲಿ ಸಂವಿಧಾನ ಜಾಗೃತಿಗಾಗಿ ನಗರದಲ್ಲಿ ಶುಕ್ರವಾರ (ಜ.24) ಬೆಳಿಗ್ಗೆ 7.30ಕ್ಕೆ ಗಂಟೆಗೆ ಬೃಹತ್ ವಾಕ್‌ಥಾನ್ ಹಮ್ಮಿಕೊಳ್ಳಲಾಗಿದೆ.

ಪ್ರಧಾನಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಡಿ.ವಿ.ಪಾಟೀಲ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

‘ಶುಕ್ರವಾರ ಬೆಳಿಗ್ಗೆ 7.30ಕ್ಕೆನ್ಯಾಯಾಲಯದ ಆವರಣದಿಂದ ಜಾಗೃತಿ ನಡಿಗೆ ಆರಂಭವಾಗಲಿದೆ.ಕರಿನಂಜನಪುರ ಮುಖ್ಯರಸ್ತೆಯ ಮೂಲಕ ಸುಲ್ತಾನ್ ಷರೀಫ್ ಸರ್ಕಲ್, ಗುಂಡ್ಲುಪೇಟೆ ವೃತ್ತ, ದೊಡ್ಡ ಮತ್ತು ಚಿಕ್ಕ ಅಂಗಡಿ ಬೀದಿ, ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ, ಭುವನೇಶ್ವರಿ ವೃತ್ತದ ಮೂಲಕ ಹಾದು ಬಿ.ರಾಚಯ್ಯ ಜೋಡಿರಸ್ತೆಯ ಮುಖಾಂತರ ಜಿಲ್ಲಾ ಆಡಳಿತ ಭವನದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಯ ಮುಂಭಾಗ ಮುಕ್ತಾಯವಾಗಲಿದೆ’ ಎಂದು ಅವರು ಹೇಳಿದರು.

ADVERTISEMENT

‘ಈ ಜಾಥಾದಲ್ಲಿ ಜಿಲ್ಲಾ ಕೇಂದ್ರದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜು, ಟಿ.ಸಿ.ಎಚ್, ಐ.ಟಿ.ಐ, ನರ್ಸಿಂಗ್, ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜು, ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಪಿ.ಯು. ಶಿಕ್ಷಣ ಮಂಡಳಿ, ವಿವಿಧ ಸಂಘ-ಸಂಸ್ಥೆಗಳು ಕೈಜೋಡಿಸುತ್ತಿವೆ. ಎಲ್ಲ ಪ್ರಗತಿಪರ ಸಂಘಟನೆಗಳು, ನಾಗರಿಕರು ಈ ಜಾಥಾದಲ್ಲಿ ಪಾಲ್ಗೊಳ್ಳುವ ಮೂಲಕ ಸಂವಿಧಾನ ಕುರಿತ ಅರಿವಿಗೆ ಸಹಕರಿಸಬೇಕು’ ಎಂದು ಡಿ.ವಿ.ಪಾಟೀಲ ಮನವಿ ಮಾಡಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಜಿ.ವಿಶಾಲಾಕ್ಷಿ ಮಾತನಾಡಿ ‘ವರ್ಷವಿಡೀ ಹಮ್ಮಿಕೊಂಡಿರುವ ಸಂವಿಧಾನ ಜಾಗೃತಿ ಕಾರ್ಯಕ್ರಮದ ವಿಶೇಷ ಸಂಪನ್ಮೂಲ ವ್ಯಕ್ತಿಗಳಾಗಿ ವಕೀಲರಾದ ಆರ್. ಅರುಣ್ ಕುಮಾರ್, ಎ.ಎಸ್. ಮಂಜುನಾಥಸ್ವಾಮಿ ನಿಯೋಜಿತರಾಗಿದ್ದಾರೆ’ ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್, ಪ್ರಧಾನ ಕಾರ್ಯದರ್ಶಿ ಎಸ್.ಮಂಜು ಹರವೆ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.