
ಚಾಮರಾಜನಗರ: ರಾಷ್ಟ್ರಗೀತೆ, ನಾಡಗೀತೆಗೆ ಸಿಗುವ ಪ್ರಾಧಾನ್ಯತೆ ಸಂವಿಧಾನ ಗೀತೆಗೂ ಸಿಗಬೇಕು ಎಂದು ಚಲನಚಿತ್ರ ನಟ ಶರತ್ ಲೋಹಿತಾಶ್ವ ಅಭಿಪ್ರಾಯಪಟ್ಟರು.
ನಗರದ ವರನಟ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ರಂಗವಾಹಿನಿ ಜಾನಪದ ಕಾಲೇಜು ಉದ್ಘಾಟನೆ, ರಂಗವಾಹಿನಿ ಪ್ರಶಸ್ತಿ ಪ್ರದಾನ ಹಾಗೂ ಸಂವಿಧಾನ ಅಮೃತಗಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಅಂಬೇಡ್ಕರ್ ಭಾವಚಿತ್ರ, ಪ್ರತಿಮೆಗಳು ನಿರ್ದಿಷ್ಟವಾದ ಕಾಲೊನಿಗಳಿಗೆ ಸೀಮಿತವಾಗಬಾರದು. ಎಲ್ಲರ ಎದೆಯೊಳಗೆ ಅಂಬೇಡ್ಕರ್ ಹಾಗೂ ಸಂವಿಧಾನದ ಆಶಯಗಳು ಇಳಿಯಬೇಕು ಎಂದರು.
ಸಂವಿಧಾನದ ಆಶಯಗಳು, ಕಾನೂನುಗಳು, ಜನಪರ ವಿಚಾರಧಾರೆಗಳು ಇಂದಿಗೂ ಶಿಕ್ಷಣ ವ್ಯವಸ್ಥೆಯಲ್ಲಿ ಮುಂಚೂಣಿಗೆ ಬಾರದಿರುವುದು ಬೇಸರದ ಸಂಗತಿ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಂವಿಧಾನವನ್ನು ಉದ್ದೇಶಪೂರ್ವಕವಾಗಿ ಮರೆಮಾಚುವ ಷಡ್ಯಂತ್ರ ನಡೆಸಿಕೊಂಡು ಬಂದಿವೆ ಎಂದು ಶರತ್ ಲೋಹಿತಾಶ್ವ ಟೀಕಿಸಿದರು.
ಸಂವಿಧಾನ ಅಸಡ್ಡೆಗೆ ಒಳಗಾಗಿರುವಂತೆ ಜಾನಪದಕ್ಕೂ ಸಿಗಬೇಕಾದ ಮಾನ್ಯತೆ ಸಿಗುತ್ತಿಲ್ಲ. ಕಿರುತೆರೆಯಲ್ಲೂ ಜಾನಪದ ಸಂಪೂರ್ಣ ಅವಗಣನೆಗೆ ಒಳಗಾಗಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಸಾಹಿತ್ಯ ಹಾಗೂ ಕಥೆಗಳ ಆಧಾರಿತ ಧಾರಾವಾಹಿಗಳು ನಿರ್ಮಾಣವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
‘ನೆಲ, ಭಾಷೆ, ಜನಪದದ ಬಗ್ಗೆ ಎಲ್ಲರಲ್ಲೂ ಪ್ರೀತಿ ಮೂಡಬೇಕು, ಸಾಹಿತ್ಯ, ಜಾನಪದ, ಸಂಸ್ಕೃತಿಯ ಓದು ಹೆಚ್ಚಾಗಬೇಕು. ನೇಪಥ್ಯಕ್ಕೆ ಸರಿದಿರುವ ಜಾನಪದ ಕಲೆಗಳನ್ನು ಮುಖ್ಯವಾಹಿನಿಗೆ ತರಬೇಕು. ಈ ಕಾರ್ಯಕ್ಕೆ ಕಲಾವಿದರು ಹಾಗೂ ಯುವಜನತೆ ನೇತೃತ್ವ ವಹಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ.ಕವಿತಾ ಮಾತನಾಡಿ, ಜನಪದ ಕಲೆಗಳ ತವರಿನಲ್ಲಿ ರಂಗವಾಹಿನಿ ಜಾನಪದ ಕಾಲೇಜು ಆರಂಭಿಸುವ ಮೂಲಕ ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ. ಜಾನಪದ ಜಗತ್ತಿನ ಉತ್ಕೃಷ್ಟ ಸಂಸ್ಕೃತಿಯಾಗಿದ್ದು ಶಿಷ್ಟ ಸಾಹಿತ್ಯ, ಭಾಷೆಗಿಂತಲೂ ಮಿಗಿಲಾಗಿದೆ ಎಂದರು.
ಕಲಾ, ವಾಣಿಜ್ಯ, ವಿಜ್ಞಾನ, ಎಂಜಿನಿಯರಿಂಗ್, ವೈದ್ಯಕೀಯ ಪದವಿಗಳ ಹೊರತಾಗಿಯೂ ಜಾನಪದ ಕಲೆ, ನೃತ್ಯ ಪ್ರಾಕಾರಗಳ ಮೇಲೂ ಪದವಿ, ಸ್ನಾತಕೋತ್ತರ ಪದವಿ ಪಡೆಯಲು ಅವಕಾಶವಿದ್ದು ಕಲಾಸಕ್ತಿ ಇರುವ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಎಸ್‌ಪಿ ಸಲಹೆ ನೀಡಿದರು.
ರಂಗವಾಹಿನಿ ಸಂಸ್ಥೆಯ ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ ಮಾತನಾಡಿದರು. ಸರ್ಕಾರಿ ಪದವಿ ಕಾಲೇಜು ನಿವೃತ್ತ ಪ್ರಾಧ್ಯಾಪಕ ಶಿವಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮುನಿರಾಜು, ಜಾನಪದ ವಿದ್ವಾಂಸ ಟಿ.ಎಸ್.ನರಸಿಂಹ ಪ್ರಸಾದ್ ಸೇರಿ ಹಲವರು ಇದ್ದರು.
ರಂಗವಾಹಿನಿ ಪ್ರಶಸ್ತಿ
ಡಾ.ಲಕ್ಷ್ಮೀ ನಾರಾಯಣ ಮಾಲೂಜು ವಿಜಿ ಶಾ.ಮುರುಳಿ ಆರ್.ನಂಜುಂಡಯ್ಯ ಮಧುಸೂದನ್ ಶ್ರೀನಿಧಿ ಕುದರ್ ಮನು ಜೆ.ನಂದೀಶ್ ಅವರಿಗೆ ರಂಗವಾಹಿನಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಂವಿಧಾನ ಅಮೃತಗಾಯನ ನಡೆಯಿತು. ರಂಗ ವಿಜಯ ಬೆಂಗಳೂರು ತಂಡದಿಂದ ಗೀತಾ ರಾಘವೇಂದ್ರ ಏಕವ್ಯಕ್ತಿ ರಂಗಪ್ರಯೋಗವಾದ ಪ್ರೇಮಮಯಿ ಹಿಡಿಂಬೆ ನಾಟಕ ಪ್ರದರ್ಶನಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.