ADVERTISEMENT

ಗುಂಬಳ್ಳಿಯಲ್ಲಿ ಕಲುಷಿತ ನೀರು ಸೇವನೆ: 9 ಜನ ಅಸ್ವಸ್ಥ

ತೊಂಬೆ ನೀರಿನಲ್ಲಿ ಕೊಳೆತ ಹಾವು: ನೀರು ಸೇವಿಸಿದ ಮಂದಿಗೆ ವಾಂತಿ ಬೇಧಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2024, 14:22 IST
Last Updated 4 ಜನವರಿ 2024, 14:22 IST
ಗುಂಬಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದ ತಹಶೀಲ್ದಾರ್, ‘ಕಲುಷಿತ ನೀರು ಸೇವನೆಯಿಂದ ಅಸ್ವಸ್ಥಗೊಂಡಿದ್ದ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು’.
ಗುಂಬಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದ ತಹಶೀಲ್ದಾರ್, ‘ಕಲುಷಿತ ನೀರು ಸೇವನೆಯಿಂದ ಅಸ್ವಸ್ಥಗೊಂಡಿದ್ದ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು’.   

ಯಳಂದೂರು: ತಾಲ್ಲೂಕಿನ ಗುಂಬಳ್ಳಿಯಲ್ಲಿ ಬುಧವಾರ ಹಾಗೂ ಗುರುವಾರ ಕಲುಷಿತ ನೀರು ಸೇವಿಸಿ ಇಬ್ಬರು ಬಾಲಕರು ಸೇರಿ 9 ಜನ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.

ಗ್ರಾಮದ ಬಡಾವಣೆಯೊಂದರ ತೊಂಬೆಯಿಂದ ಪೂರೈಕೆಯಾದ ನೀರಿನಲ್ಲಿ ಹಾವು ಕೊಳೆತು, ನೀರು ಕಲುಷಿತಗೊಂಡಿತ್ತು ಎನ್ನಲಾಗಿದೆ. ಈ ವಿಷಯವನ್ನು ಪಂಚಾಯಿತಿ ಮುಚ್ಚಿಟ್ಟು, ನೀರು ಪೂರೈಸಿದ ಪರಿಣಾಮ ಅಸ್ವಸ್ಥಗೊಳ್ಳುವಂತಾಗಿದೆ ಎಂದು ಹೆಸರು ಹೇಳಲಿಚ್ಚಿಸದ ಗ್ರಾಮಸ್ಥರು ತಿಳಿಸಿದರು.

ಬುಧವಾರ ಇಬ್ಬರು ಇದೇ ನೀರು ಸೇವಿಸಿ ವಾಂತಿ ಮಾಡಿಕೊಂಡಿದ್ದರು. ಇವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಗುರುವಾರ ಮತ್ತೆ ವಾಂತಿ, ಬೇದಿಯಾಗಿ ಎರಡನೆ ಬಾರಿಗೆ ಚಿಕಿತ್ಸೆ ಪಡೆದರು.

ADVERTISEMENT

ಸತೀಶ್, ಪುಟ್ಟತಾಯಮ್ಮ, ಪರಶಿವ, ಶರತ್, ಕುಮಾರ್, ಗೀತಾ, ಮಹೇಶ್, ನಿಖಿಲ್ ಮತ್ತು ಶಾರದ ಅಸ್ವಸ್ಥಗೊಂಡವರು.

‘ಇವರಲ್ಲಿ ನಿಖಿಲ್, ಶರತ್  ತಾಲ್ಲೂಕು ಆಸ್ಪತ್ರೆಯಲ್ಲಿ, ಸತೀಶ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ 5 ಮಂದಿ ಗುಣಮುಖರಾಗಿದ್ದಾರೆ. ಎಲ್ಲರೂ ಆರೋಗ್ಯದಿಂದ ಇದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ’ ಎಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಡಾ.ನಾಗೇಂದ್ರಪ್ರಸಾದ್ ತಿಳಿಸಿದರು.

ತಹಶೀಲ್ದಾರ್ ಭೇಟಿ: ‘ಕುಡಿಯುವ ನೀರು ಪೂರೈಕೆಯಾಗುವ ಮೂಲಗಳನ್ನು ಪರಿಶೀಲಿಸಿ ಸ್ವಚ್ಛಗೊಳಿಸುವಂತೆ ಗ್ರಾಮ ಪಂಚಾಯಿತಿ ನೌಕರರಿಗೆ ಸೂಚಿಸಲಾಗಿದೆ’ ಎಂದು ತಹಶೀಲ್ದಾರ್ ಹೇಳೀದರು. ರಾಜಸ್ವ ನಿರೀಕ್ಷಕ ಯದುಗಿರಿ.ಎಂ.ಎಸ್. ಮತ್ತು ಗ್ರಾಮಲೆಕ್ಕಿಗ ಶರತ್ ಹಾಗೂ ಗ್ರಾಮಸ್ಥರು ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.