ADVERTISEMENT

ಹನೂರು: ಸಂಪಾದನೆ ಇಲ್ಲದೇ ನೇಕಾರರ ಬದುಕು ದುಸ್ತರ

ಕೋವಿಡ್‌–19 ಪರಿಣಾಮ: ಕಷ್ಟಕ್ಕೆ ಸಿಲುಕಿನ ನೇಕಾರರ ಕುಟುಂಬಗಳು

ಬಿ.ಬಸವರಾಜು
Published 13 ಮೇ 2020, 19:45 IST
Last Updated 13 ಮೇ 2020, 19:45 IST
ಲಾಕ್‌ಡೌನ್‌ ನಂತರ ಸ್ಥಗಿತಗೊಂಡಿರುವ ಕೈಮಗ್ಗ
ಲಾಕ್‌ಡೌನ್‌ ನಂತರ ಸ್ಥಗಿತಗೊಂಡಿರುವ ಕೈಮಗ್ಗ   

ಹನೂರು: ಜಗತ್ತನ್ನೇ ತಲ್ಲಣಗೊಳಿಸಿರುವ ಕೋವಿಡ್–19ನಿಂದಾಗಿ ತಲೆಮಾರುಗಳಿಂದ ನೇಕಾರಿಕೆಯನ್ನೇ ನಂಬಿ ಬದುಕುತ್ತಿದ್ದ ತಾಲ್ಲೂಕಿನ ಅಜ್ಜೀಪುರ ಗ್ರಾಮದಲ್ಲಿರುವ ದೇವಾಂಗ ಬಡಾವಣೆಯ ನೇಕಾರರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಕೈಯಲ್ಲಿ ಕೆಲಸವಿಲ್ಲದೇ, ಸೀರೆಗಳು ಮಾರಾಟವಾಗದೇ ಸಂಪಾದನೆ ಇಲ್ಲದೆ, ಜೀವನ ನಿರ್ವಹಣೆಯೇ ಕಷ್ಟವಾಗಿದೆ.

ಗ್ರಾಮದ ಕಾವೇರಿ ನೀರಾವರಿ ನಿಗಮ ವಸತಿಗೃಹದ ಹಿಂಭಾಗವಿರುವ 15 ಕುಟುಂಬಗಳು ಹಾಗೂ ಕಾಂಚಳ್ಳಿ ಗ್ರಾಮದ 50 ಕುಟುಂಬಗಳು ಕೈಮಗ್ಗವನ್ನೇ ನಂಬಿ ಬದುಕುತ್ತಿವೆ. ಲಾಕ್‌ಡೌನ್‌ ಜಾರಿಯಾದ ನಂತರ ಒಂದೂವರೆ ತಿಂಗಳಿನಿಂದ ಕೈಮಗ್ಗ ನಿಂತು ಹೋಗಿದೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಇತ್ತೀಚೆಗೆ ಘೋಷಿಸಿದ್ದ ವಿಶೇಷ ಪ್ಯಾಕೇಜ್‌ನಲ್ಲಿ ನೇಕಾರ ಸಮುದಾಯಕ್ಕೂ ಆರ್ಥಿಕ ನೆರವು ನೀಡುವ ಪ್ರಸ್ತಾಪ ಮಾಡಿದ್ದರು. ದುಡಿಯಲು ಕೆಲಸವೂ ಇಲ್ಲದೇ ಸಂಕಷ್ಟಕ್ಕೆ ಸಿಲುಕಿರುವ ಈ ಕುಟುಂಬಗಳು ಸರ್ಕಾರದ ಆರ್ಥಿಕ ನೆರವಿನ ನಿರೀಕ್ಷೆಯಲ್ಲಿವೆ.

ADVERTISEMENT

‘ನಮ್ಮ ಕೈಮಗ್ಗ ನಿಂತುಹೋಗಿ ಒಂದೂವರೆ ತಿಂಗಳಾಯಿತು. ತಲೆಮಾರಿನಿಂದ ಇದನ್ನೇ ನಂಬಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದೆವು. ಈಗ ನಡೆಯುತ್ತಿಲ್ಲ. ಮುಂದೆ ನಮ್ಮ ಗತಿಯೇನು ಎಂಬುದೇ ಚಿಂತೆಯಾಗಿದೆ. ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಅಕ್ಕಿ, ಬೇಳೆ ಕೊಡುತ್ತಿದೆ. ಆದರೆ, ಒಂದು ಕುಟುಂಬ ನಿರ್ವಹಣೆಗೆ ಇಷ್ಟು ಸಾಕೇ? ನಮ್ಮನ್ನೇ ನಂಬಿ ಮನೆಯಲ್ಲಿ ವೃದ್ಧರಿದ್ದಾರೆ. ಅವರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ಏನು ಮಾಡಬೇಕೆಂಬುದೇ ತಿಳಿಯುತ್ತಿಲ್ಲ’ ಎಂದು ಭಾಗ್ಯಾ ಅವರು ‘ಪ್ರಜಾವಾಣಿ’ ಮುಂದೆ ಅಳಲು ತೋಡಿಕೊಂಡರು.

‘ಲಾಕ್‍ಡೌನ್ ಆದ ಮೇಲೆ ಅಂತರರಾಜ್ಯ ಸಾರಿಗೆ ಸಂಚಾರ ನಿಂತ ಮೇಲೆ 65 ಕುಟುಂಬಗಳು ಬೀದಿಗೆ ಬಿದ್ದಿವೆ. ಈ ವೃತ್ತಿಯನ್ನೇ ನಂಬಿ ಅಷ್ಟೂ ಕುಟುಂಬಗಳು ಜೀವನ ಸಾಗಿಸುತ್ತಿದ್ದವು. ಈಗ ಜೀವನ ನಡೆಸುವುದೇ ಕಷ್ಟವಾಗಿದೆ. ಯಾರೂ ಸಾಲ ಕೊಡುತ್ತಿಲ್ಲ. ತಮಿಳುನಾಡಿನ ಮಾಲೀಕರೂ ದುಡ್ಡು ಕೊಡುತ್ತಿಲ್ಲ. ನೇಯ್ಗೆ ಬಿಟ್ಟು ನಮಗೆ ಬೇರೆ ಕೆಲಸ ಗೊತ್ತಿಲ್ಲ’ ಎ‌ಂದು ಕಾಂತಾಮಣಿ ಹೇಳಿದರು.

ಕುಟುಂಬ ನಿರ್ವಹಣೆ ಕಷ್ಟ

ಮನೆಯ ಹಿರಿಯರಿಂದ ಬಂದ ಕಸುಬನ್ನೇ ನಂಬಿ ಸಾಕಷ್ಟು ಕುಟುಂಬಗಳು ಬದುಕುತ್ತಿವೆ. ಕಚ್ಚಾವಸ್ತುಗಳನ್ನು ಖರೀದಿಸಿ ತಾವೇ ಸೀರೆ ನೇಯ್ದು ಮಾರಾಟ ಮಾಡುವಷ್ಟು ಇಲ್ಲಿನ ಕುಟುಂಬಗಳು ಆರ್ಥಿಕವಾಗಿ ಸಬಲರಾಗಿಲ್ಲ. ತಮಿಳುನಾಡಿನ ಬಟ್ಟೆ ಅಂಗಡಿ ಮಾಲೀಕರು ಕಚ್ಚಾ ಸರಕುಗಳನ್ನು ತಂದು ಕೊಡುತ್ತಾರೆ. ಅದರಲ್ಲಿ ಸೀರೆ ನೇಯ್ದು ಕೊಟ್ಟರೆ ಒಂದು ಸೀರೆಗೆ ₹700 ಕೊಡುತ್ತಾರೆ. ಇದರಲ್ಲೇ ಕುಟುಂಬ ನಿರ್ವಹಣೆ ಮಾಡಬೇಕು. ಇಲ್ಲಿನ ಪ್ರತಿ ಮನೆಯಲ್ಲೂ ಎರಡು ಕೈ ಮಗ್ಗಗಳಿವೆ. ಒಂದು ಮಗ್ಗದಿಂದ ಇಬ್ಬರಿಗೆ ಕೆಲಸ ಸಿಗುತ್ತದೆ. ಮಗ್ಗದಲ್ಲಿ ಒಂದು ಸೀರೆ ನೇಯಲು ಒಂದು ವಾರ ಬೇಕು. ಈಗ ಅದು ನಿಂತಿರುವುದರಿಂದ ನೇಕಾರರಿಗೆ ತಮ್ಮ ಕುಟುಂಬ ನಿರ್ವಹಣೆಯೇ ಕಷ್ಟವಾಗಿದೆ.

***

ನಮಗೆ ಕೆಲಸವಿಲ್ಲ, ನೇಯ್ಗೆ ಮಾಡಿರುವ ಸೀರೆಗಳೂ ಮಾರಾಟವಾಗಿಲ್ಲ. ಸಂಘದವರು ಸಾಲ ಕಟ್ಟಿ ಎನ್ನುತ್ತಿದ್ದಾರೆ. ನಮಗೆ ಏನು ಮಾಡಬೇಕೆಂಬುದೇ ತೋಚುತ್ತಿಲ್ಲ.

- ವೆಂಕಟಮ್ಮ, ಅಜ್ಜೀಪುರ

***

ನೇಯ್ಗೆಯನ್ನೇ ನಂಬಿ ಬದುಕುತ್ತಿರುವ ಕುಟುಂಬ ನಮ್ಮದು. ಲಾಕ್‍ಡೌನ್‍ ನಮ್ಮ ಸಂಪಾದನೆಗೆ ಭಾರಿ ಹೊಡೆದ ನೀಡಿದೆ. ಈಗ ಜೀವನ ನಡೆಸುವುದೇ ದುಸ್ತರವಾಗಿದೆ.

- ಗುಣಶೇಖರ್, ಅಜ್ಜೀಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.