ADVERTISEMENT

ಎರಡನೇ ದಿನ 198 ಮಂದಿಗೆ ಕೋವಿಡ್‌ ಲಸಿಕೆ

337 ಮಂದಿಗೆ ಹಾಕುವ ಗುರಿ, ಶೇ 59ರಷ್ಟು ಸಾಧನೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2021, 14:08 IST
Last Updated 18 ಜನವರಿ 2021, 14:08 IST
ಜಿಲ್ಲಾಸ್ಪತ್ರೆಯ ಸಿಬ್ಬಂದಿ ಸೋಮವಾರ ಕೋವಿಡ್‌ ಲಸಿಕೆ ಹಾಕಿಸಿಕೊಂಡರು
ಜಿಲ್ಲಾಸ್ಪತ್ರೆಯ ಸಿಬ್ಬಂದಿ ಸೋಮವಾರ ಕೋವಿಡ್‌ ಲಸಿಕೆ ಹಾಕಿಸಿಕೊಂಡರು   

ಚಾಮರಾಜನಗರ: ಜಿಲ್ಲೆಯಲ್ಲಿ ಸೋಮವಾರ ಎರಡನೇ ದಿನದ ಕೋವಿಡ್‌ ಲಸಿಕೆ ಅಭಿಯಾನ ನಡೆದಿದ್ದು, 198 ಮಂದಿ ಕೋವಿಶೀಲ್ಡ್‌ ಲಸಿಕೆ ಹಾಕಿಸಿಕೊಂಡಿದ್ದಾರೆ.

ಜಿಲ್ಲಾಸ್ಪತ್ರೆ ಸೇರಿದಂತೆ ಆರು ಕಡೆಗಳಲ್ಲಿ 337 ಮಂದಿಗೆ ಲಸಿಕೆ ಹಾಕಲು ಆರೋಗ್ಯ ಇಲಾಖೆ ವ್ಯವಸ್ಥೆ ಮಾಡಿತ್ತು. 198 ಮಾತ್ರ ಪಡೆದುಕೊಳ್ಳುವ ಮೂಲಕ ಶೇ 59ರಷ್ಟು ಪ್ರಗತಿಯಾಗಿದೆ. ಮೊದಲ ದಿನವಾದ ಶನಿವಾರ ಶೇ 64ರಷ್ಟು ಮಂದಿ ಲಸಿಕೆ ಹಾಕಿಸಿಕೊಂಡಿದ್ದರು.

ಸೋಮವಾರ ಯಡಬೆಟ್ಟದಲ್ಲಿರುವ ವೈದ್ಯಕೀಯ ಕಾಲೇಜಿನ ಬದಲಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಲಸಿಕೆ ಕೇಂದ್ರ ತೆರೆಯಲಾಗಿತ್ತು. 100 ಮಂದಿಗೆ ಲಸಿಕೆ ಕೊಡುವ ಗುರಿ ಹೊಂದಲಾಗಿತ್ತು. 60 ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ. ವೈದ್ಯರು ಸೇರಿದಂತೆ ಆಸ್ಪತ್ರೆಯ ವಿವಿಧ ಸಿಬ್ಬಂದಿ ಚುಚ್ಚುಮದ್ದು ಪಡೆದರು.

ADVERTISEMENT

ಯಳಂದೂರಿನಲ್ಲಿ ಶೇ 100 ಸಾಧನೆ:ಗುಂಡ್ಲುಪೇಟೆ ತಾಲ್ಲೂಕು ಆಸ್ಪತ್ರೆಯಲ್ಲಿ ನಿಗದಿ ಪಡಿಸಿದ್ದ 44 ಮಂದಿಯ ಪೈಕಿ 10 ಜನರು ಮಾತ್ರ ಲಸಿಕೆ ತೆಗೆದುಕೊಂಡರು. ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯಲ್ಲಿ 97 ಜನರ ಪೈಕಿ 42, ಕೊಳ್ಳೇಗಾಲ ನಗರ ಆರೋಗ್ಯ ಕೇಂದ್ರದಲ್ಲಿ 36 ಕೊರೊನಾ ವಾರಿಯರ್‌ಗಳ ಪೈಕಿ 28, ಹನೂರು ತಾಲ್ಲೂಕಿನ ರಾಮಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 40 ಜನರಲ್ಲಿ 37 ಮಂದಿ ಹಾಗೂ ಯಳಂದೂರು ತಾಲ್ಲೂಕು ಕೇಂದ್ರದಲ್ಲಿ ನಿಗದಿ ಎಲ್ಲ 20 ಮಂದಿ ಲಸಿಕೆ ಹಾಕಿಸಿಕೊಂಡರು.

‘ಸೋಮವಾರವೂ ಎಲ್ಲೂ ತೊಂದರೆಯಾಗಿಲ್ಲ. ಯಾರಿಗೂ ಆರೋಗ್ಯ ಸಮಸ್ಯೆ ಕಾಡಿಲ್ಲ. ಶನಿವಾರ ಲಸಿಕೆ ತೆಗೆದುಕೊಂಡವರೂ ಆರೋಗ್ಯದಿಂದ ಇದ್ದಾರೆ. ಮಂಗಳವಾರ ಇನ್ನೂ ನಾಲ್ಕು ಕೇಂದ್ರಗಳಲ್ಲಿ ಲಸಿಕೆ ನೀಡಲಾಗುವುದು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಎಂ.ಸಿ.ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

30ಕ್ಕೆ ಇಳಿದ ಸಕ್ರಿಯ ಪ್ರಕರಣಗಳು

ಈ ಮಧ್ಯೆ, ಜಿಲ್ಲೆಯಲ್ಲಿ ಸೋಮವಾರ ಕೇವಲ ಎರಡು ಕೋವಿಡ್‌ ಪ್ರಕರಣಗಳು ದೃಢಪಟ್ಟಿದ್ದು, ಆರು ಮಂದಿ ಗುಣಮುಖರಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 30ಕ್ಕೆ ಇಳಿದಿದೆ. ಸಾವು ಸಂಭವಿಸಿಲ್ಲ.

ಚಿಕಿತ್ಸೆ ಪಡೆಯುತ್ತಿರುವ 30 ಸೋಂಕಿತರಲ್ಲಿ 22 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. ಒಬ್ಬರು ಐಸಿಯುನಲ್ಲಿದ್ದಾರೆ. ಉಳಿದವರು ಕೋವಿಡ್‌ ಕೇರ್‌ ಕೇಂದ್ರಗಳಲ್ಲಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೆ 6,862 ಪ್ರಕರಣಗಳು ದೃಢಪಟ್ಟಿವೆ. 6,701 ಮಂದಿ ಗುಣಮುಖರಾಗಿದ್ದಾರೆ. 111 ಮಂದಿ ಕೋವಿಡ್‌ನಿಂದ ಹಾಗೂ 20 ಮಂದಿ ಇತರೆ ಅನಾರೋಗ್ಯಗಳಿಂದ ಮೃತಪಟ್ಟಿದ್ದಾರೆ.

ಸೋಮವಾರ 362 ಮಂದಿಯ ಕೋವಿಡ್‌ ಪರೀಕ್ಷಾ ವರದಿ ಬಂದಿದ್ದು, 360 ವರದಿಗಳು ನೆಗೆಟಿವ್‌ ಬಂದಿವೆ. ಹನೂರು ಹಾಗೂ ಯಳಂದೂರಿನ ತಲಾ ಒಬ್ಬರಲ್ಲಿ ಸೋಂಕು ಕಂಡು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.