ADVERTISEMENT

ಚಾಮರಾಜನಗರ: ಹಳ್ಳಿ ಹಳ್ಳಿಗಳಲ್ಲೂ ಕೊರೊನಾ ಸೈನಿಕರು

ಎಲ್ಲ ಗ್ರಾಮಗಳಲ್ಲೂ ಇಬ್ಬರ ಆಯ್ಕೆ , ಕೊರೊನಾ ಜಾಗೃತಿ ಮೂಡಿಸುವ ಕೆಲಸ

ಸೂರ್ಯನಾರಾಯಣ ವಿ
Published 15 ಏಪ್ರಿಲ್ 2020, 2:13 IST
Last Updated 15 ಏಪ್ರಿಲ್ 2020, 2:13 IST
ಹರ್ಷಲ್‌ ಭೋಯರ್‌ ನಾರಾಯಣ ರಾವ್‌
ಹರ್ಷಲ್‌ ಭೋಯರ್‌ ನಾರಾಯಣ ರಾವ್‌   

ಚಾಮರಾಜನಗರ: ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಕೊರೊನಾ ವೈರಸ್‌ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಹಳ್ಳಿಗಳಲ್ಲಿ ‘ಕೊರೊನಾ ಗ್ರಾಮ ಸೈನಿಕರರನ್ನು’ ಆಯ್ಕೆ ಮಾಡಲಾಗುತ್ತಿದೆ.

ರಾಜ್ಯದಲ್ಲಿ ಒಟ್ಟು 27 ಸಾವಿರ ಹಳ್ಳಿಗಳಿದ್ದು, ಪ್ರತಿ ಗ್ರಾಮಗಳಲ್ಲೂ ಇಬ್ಬರು ಕೊರೊನಾ ಸೈನಿಕರನ್ನು ನೇಮಕ ಮಾಡಬೇಕು ಎಂದು ಪಂಚಾಯತ್‌ ರಾಜ್‌ ಇಲಾಖೆ ಎಲ್ಲ ಜಿಲ್ಲಾ ಪ‍ಂಚಾಯಿತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದೆ. ಪ್ರತಿ ಗ್ರಾಮಕ್ಕೆ ಒಬ್ಬ ಪುರುಷ ಮತ್ತು ಒಬ್ಬ ಮಹಿಳೆ ಸೇರಿದಂತೆ ಇಬ್ಬರು ಕೊರೊನಾ ಸೈನಿಕರನ್ನು ಆಯ್ಕೆ ಮಾಡಬೇಕಾಗಿದ್ದು, ಅವರ ವಿವರಗಳನ್ನು ಪಂಚತಂತ್ರದಲ್ಲಿ (ತಂತ್ರಾಂಶ) ಅಳವಡಿಸಲು ಸೂಚನೆ ನೀಡಲಾಗಿದೆ.

‘ಇಲಾಖೆಯ ಸೂಚನೆಯಂತೆ ಜಿಲ್ಲೆಯ ಎಲ್ಲ 130 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ತಲಾ ಇಬ್ಬರು ಕೊರೊನಾ ಸೈನಿಕರನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಕೆಲವು ಗ್ರಾಮಗಳಲ್ಲಿ ಈಗಾಗಲೇ ಅವರು ಕೆಲಸ ಆರಂಭಿಸಿದ್ದಾರೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್‌ ಭೋಯರ್‌ ನಾರಾಯಣ‌ರಾವ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಕೆಲಸ ಏನು?: ಕೋವಿಡ್‌–19 ಹರಡುವುದನ್ನು ತಡೆಯುವುದಕ್ಕಾಗಿ ಹಾಗೂ ಸೋಂಕಿತರ ಸರಪಣಿ ಕಡಿಯುವುದಕ್ಕಾಗಿ ಎಲ್ಲ ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿ ಕಾರ್ಯ ಪಡೆ (ಜಿಪಿಟಿಎಫ್‌) ಹಾಗೂ ಹಳ್ಳಿ ಕಾರ್ಯಪಡೆ (ವಿಟಿಎಫ್‌)‌ ನೇಮಕ ಮಾಡಲಾಗಿದೆ. ಈ ಕಾರ್ಯಪಡೆಗಳಿಗೆ ಪೂರಕವಾಗಿ ಗ್ರಾಮ ಕೊರೊನಾ ಸೈನಿಕರು ಕಾರ್ಯನಿರ್ವಹಿಸಲಿದ್ದಾರೆ.

ಪಂಚಾಯತ್‌ ರಾಜ್‌ ಇಲಾಖೆ ಹೇಳುವ ಪ್ರಕಾರ, ಈ ಕೊರೊನಾ ಸೈನಿಕರು ಗ್ರಾಮ ಪಂಚಾಯಿತಿ ಕಾರ್ಯ ಪಡೆಯ ‘ಕಣ್ಣು ಮತ್ತು ಕಿವಿ’ಗಳು. ಹಳ್ಳಿಗಳಲ್ಲಿ ಕೊರೊನಾ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವುದು, ಸ್ವಚ್ಛತೆ ಕಾಪಾಡಿಕೊಳ್ಳುವಂತೆ ನೋಡಿಕೊಳ್ಳುವುದು ಹಾಗೂ ಗ್ರಾಮಗಳಲ್ಲಿ ಕೊರೊನಾ ತಡೆಗಟ್ಟಲು ಕೈಗೊಂಡಿರುವ ಕ್ರಮಗಳು ಹಾಗೂ ಇದಕ್ಕೆ ಸಂಬಂಧಿಸಿದ ವರದಿಗಳನ್ನು ಗ್ರಾಮ ಪಂಚಾಯಿತಿ ಕಾರ್ಯ ಪಡೆಗೆ ನೀಡುವುದು ಇವರ ಕೆಲಸ.

ಇದಕ್ಕೆ ಯಾವುದೇ ವೇತನ ನೀಡುವುದಿಲ್ಲ. ಸೇವಾ ರೂಪದಲ್ಲಿ ಅವರು ಕಾರ್ಯನಿರ್ವಹಿಸಬೇಕು.

ಆಯ್ಕೆ ಹೇಗೆ?, ಯಾರಾಗಬಹುದು?

ಕೊರೊನಾ ಗ್ರಾಮ ಸೈನಿಕರ ಆಯ್ಕೆಗೆ ಪಂಚಾಯತ್‌ ರಾಜ್‌ ಇಲಾಖೆ ಕೆಲವು ಮಾನದಂಡಗಳನ್ನು ರೂಪಿಸಿದೆ. ಅವು ಇಂತಿವೆ.

* ಪ್ರತಿಯೊಂದು ಗ್ರಾಮ ಪಂಚಾಯಿತಿ ಕಾರ್ಯಪಡೆಯು ತನ್ನ ವ್ಯಾಪ್ತಿಯಲ್ಲಿ ಒಬ್ಬ ಪುರುಷ ಹಾಗೂ ಒಬ್ಬ ಮಹಿಳೆಯನ್ನು ಆಯ್ಕೆ ಮಾಡಬೇಕು.

* ಕರೊನಾ ಸೈನಿಕರು 18ರಿಂದ 35 ವರ್ಷ ವಯಸ್ಸಿನವರಾಗಿರಬೇಕು.

* ಜವಾಬ್ದಾರಿಯುತ ಹಾಗೂ ಉತ್ತಮ ಚಾರಿತ್ರ್ಯವನ್ನು ಹೊಂದಿರುವವರನ್ನೇ ಆಯ್ಕೆ ಮಾಡಬೇಕು.

* ಕರೊನಾ ಸೈನಿಕರಾಗಿ ಗುರುತಿಸಿಕೊಂಡಿರುವವರು ಸ್ಮಾರ್ಟ್‌ ಫೋನ್‌ ಹೊಂದಿರುವುದು ಕಡ್ಡಾಯ.

* ಎನ್‌ಸಿಸಿ, ಎನ್ಎಸ್‌ಎಸ್‌ ಹಿನ್ನಲೆಯುಳ್ಳ ಯುವಕರಿಗೆ ಆದ್ಯತೆ ನೀಡಬೇಕು.

***

ಕೊರೊನಾ ಗ್ರಾಮ ಸೈನಿಕರ ಆಯ್ಕೆ ನಡೆಯುತ್ತಿದ್ದು, ಅವರ ವಿವರಗಳನ್ನು ಪಂಚತಂತ್ರ ತಂತ್ರಾಂಶದಲ್ಲಿ ದಾಖಲು ಮಾಡುವಂತೆ ಪಿಡಿಒಗಳಿಗೆ ಸೂಚಿಸಲಾಗಿದೆ

- -ಹರ್ಷಲ್‌ ಭೋಯರ್‌ ನಾರಾಯಣ ರಾವ್‌, ಜಿ.ಪಂ., ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.