ADVERTISEMENT

ಗ್ರಾಮಗಳಿಗೆ ಡಿಸಿ ಭೇಟಿ, ಕೋವಿಡ್‌ ಜಾಗೃತಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2020, 15:31 IST
Last Updated 19 ಏಪ್ರಿಲ್ 2020, 15:31 IST
ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು ವೃದ್ಧರೊಬ್ಬರೊಂದಿಗೆ ಮಾತುಕತೆ ನಡೆಸಿದರು
ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು ವೃದ್ಧರೊಬ್ಬರೊಂದಿಗೆ ಮಾತುಕತೆ ನಡೆಸಿದರು   

ಚಾಮರಾಜನಗರ: ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಭಾನುವಾರ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರಲ್ಲಿ ಕೋವಿಡ್‌–19ರ ಬಗ್ಗೆ ಅರಿವು ಮೂಡಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ‌ಯೂ ವಿವರಿಸಿದರು.

ಹರವೆ ಹಾಗೂ ನಂಜದೇವನಪುರಗಳಲ್ಲಿ ನಡೆಸಲಾಗುತ್ತಿರುವ ಆರೋಗ್ಯ ಸಮೀಕ್ಷೆ ಕಾರ್ಯವನ್ನು ಪರಿಶೀಲನೆ ಮಾಡುತ್ತಿದ್ದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅವರು ಖುದ್ದು ಮನೆ ಮನೆಗೆ ಭೇಟಿ ನೀಡಿ ಜನರ ಆರೋಗ್ಯ ವಿಚಾರಿಸಿದರು.

‘ಪ್ರಸ್ತುತ ನಿಮಗೆ ಶೀತ, ಜ್ವರ, ಕೆಮ್ಮು ಇನ್ನಿತರ ಅನಾರೋಗ್ಯದಿಂದ ಬಳಲುತ್ತಿರುವಿರಾ? ಮತ್ತೆ ಏನಾದರೂ ಆರೋಗ್ಯದಲ್ಲಿ ಏರುಪೇರಾಗಿದೆಯೇ’ ಎಂದು ಪ್ರಶ್ನಿಸಿದರು.

ADVERTISEMENT

‘ಭೇಟಿ ಸಂದರ್ಭದಲ್ಲಿ ಆರೋಗ್ಯ ಪಾಲನೆ ಬಗ್ಗೆ ಸಲಹೆ ಮಾಡಿದ ಅವರು ಅಂತರ ಕಾಪಾಡಿಕೊಳ್ಳಬೇಕು. ಕೃಷಿ ಇತರೆ ದಿನನಿತ್ಯದ ಉದ್ಯೋಗ ಚಟುವಟಿಕೆಗಳನ್ನು ಮುಂದುವರೆಸುವಾಗ ಅಂತರಕ್ಕೆ ಆದ್ಯತೆ ಕೊಡಬೇಕು. ಮುಖಗವಸು ಕಡ್ಡಾಯವಾಗಿ ಧರಿಸಬೇಕು. ಸೋಪು, ಇತರೆ ವಿಧಾನಗಳ ಮೂಲಕ ಕೈ ತೊಳೆದುಕೊಳ್ಳಬೇಕು. ವೈಯಕ್ತಿಕ ಶುಚಿತ್ವಕ್ಕೆ ಗಮನ ನೀಡಬೇಕು’ ಎಂದರು.

‘ಜ್ವರ, ಶೀತ, ನೆಗಡಿ, ಕೆಮ್ಮು ಲಕ್ಷಣಗಳಿದ್ದಾಗ ಕೂಡಲೇ ಹತ್ತಿರದ ಆಶಾ ಕಾರ್ಯಕರ್ತೆಯರ ಗಮನಕ್ಕೆ ತನ್ನಿ. ವೈದ್ಯರ ಬಳಿ ತೆರಳಿ ಆರೋಗ್ಯ ಪರೀಕ್ಷಿಸಿಕೊಳ್ಳಿ. ಅನಗತ್ಯವಾಗಿ ಹೊರಗೆ ಓಡಾಡಬೇಡಿ. ಆರೋಗ್ಯ ದೃಷ್ಠಿಯಿಂದ ಮನೆಯಲ್ಲೇ ಇರಿ’ ಎಂದು ಅವರು ಮನವಿ ಮಾಡಿದರು.

‘ಗ್ರಾಮಕ್ಕೆ ಯಾರೇ ಅಪರಿಚಿತರಾಗಲಿ ಅಥವಾ ಸಂಬಂಧಿಗಳಾಗಲಿ ದೂರದ ಜಿಲ್ಲೆ, ರಾಜ್ಯದಿಂದ ಬಂದಾಗ ಮಾಹಿತಿ ನೀಡಿ. ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ತಿಳಿವಳಿಕೆ ನೀಡಿ. ಊರಿನ ಸುರಕ್ಷತೆ ಹಾಗೂ ಆರೋಗ್ಯ ಕಾಳಜಿ ಪ್ರತಿಯೊಬ್ಬರಲ್ಲೂ ಇರಲಿ. ಯಾವುದೇ ಗೊಂದಲ, ತೊಂದರೆಗಳು ಇದ್ದಲ್ಲಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ. ತಾಲ್ಲೂಕು ಆರೋಗ್ಯ ಅಧಿಕಾರಿಗಳು ಅಥವಾ ಉಚಿತ ಸಹಾಯವಾಣಿ 1077ಕ್ಕೆ ಕರೆ ಮಾಡಿ ಸಮಸ್ಯೆ ಪರಿಹರಿಸಿಕೊಳ್ಳಿ’ ಎಂದು ಅವರು ತಿಳಿಸಿದರು.

‘ಆತಂಕಕ್ಕೆ ಒಳಗಾಗಬಾರದು. ಜಿಲ್ಲಾಡಳಿತ ನೀಡುವ ಸೂಚನೆಗಳನ್ನು ಪಾಲಿಸಬೇಕು. ಈಗಾಗಲೇ 2.10 ಲಕ್ಷ ಕುಟುಂಬಗಳ ಆರೋಗ್ಯ ಸಮೀಕ್ಷೆಯನ್ನು ಮಾಡಲಾಗಿದೆ. ಇನ್ನೂ ಕೆಲ ಭಾಗಗಳಲ್ಲಿ ಮುಂದುವರೆದಿದೆ. ಜಿಲ್ಲೆಯ ಜನರ ಆರೋಗ್ಯಕ್ಕೆ ಆದ್ಯತೆ ನೀಡಲಾಗಿದೆ. ಆಹಾರ ಪದಾರ್ಥಗಳ ಪೂರೈಕೆ ಸೇರಿದಂತೆ ಅವಶ್ಯವಿರುವ ಸೌಲಭ್ಯಗಳನ್ನು ಒದಗಿಸಲು ಕ್ರಮ ತೆಗೆದುಕೊಳ್ಳಲಾಗುತ್ತದೆ’ ಎಂದರು.

ಜಿಲ್ಲಾ ಸರ್ವೇಲೆನ್ಸ್ ಅಧಿಕಾರಿ ಡಾ. ನಾಗರಾಜು, ತಹಶೀಲ್ದಾರ್ ಜೆ. ಮಹೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಬಿ. ಬಸವರಾಜು, ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.