ADVERTISEMENT

ಚಾಮರಾಜನಗರ | ಜಿಲ್ಲೆಯಲ್ಲಿ ಕೋವಿಡ್‌–19 ತ್ಯಾಜ್ಯ ಹೆಚ್ಚಿಲ್ಲ

ಎಚ್ಚರಿಕೆಯಿಂದ ಸಂಗ್ರಹ, ಪ್ರತ್ಯೇಕ ವ್ಯವಸ್ಥೆ, ಖಾಸಗಿ ಸಂಸ್ಥೆಗೆ ವಿಲೇವಾರಿ ಹೊಣೆ

ಸೂರ್ಯನಾರಾಯಣ ವಿ
Published 17 ಮೇ 2020, 19:45 IST
Last Updated 17 ಮೇ 2020, 19:45 IST
ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್‌–19 ತ್ಯಾಜ್ಯ ಸಾಗಿಸುವ ಟ್ರಾಲಿಗೆ ಸಿಬ್ಬಂದಿ ಸೋಂಕು ನಿವಾರಕ ಸಿಂಪಡಿಸುತ್ತಿರುವುದು
ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್‌–19 ತ್ಯಾಜ್ಯ ಸಾಗಿಸುವ ಟ್ರಾಲಿಗೆ ಸಿಬ್ಬಂದಿ ಸೋಂಕು ನಿವಾರಕ ಸಿಂಪಡಿಸುತ್ತಿರುವುದು   

ಚಾಮರಾಜನಗರ: ಜಿಲ್ಲೆಯಲ್ಲಿ ಇದುವರೆಗೆ ಕೋವಿಡ್‌–19 ಪ್ರಕರಣಗಳು ವರದಿಯಾಗಿಲ್ಲ.ಹಾಗಿದ್ದರೂ, ಜಿಲ್ಲಾ ಕೇಂದ್ರದಲ್ಲಿರುವ ಕೋವಿಡ್‌ ಆಸ್ಪತ್ರೆ ಹಾಗೂ ತಾಲ್ಲೂಕು ಆಸ್ಪತ್ರೆಗಳ ಫಿವರ್‌ ಕ್ಲಿನಿಕ್‌ಗಳಲ್ಲಿ ಉತ್ಪತ್ತಿಯಾಗುವ ವೈದ್ಯಕೀಯ ತ್ಯಾಜ್ಯಗಳನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡಲು ಒತ್ತು ನೀಡಲಾಗುತ್ತಿದೆ.

ಕೋವಿಡ್‌–19 ಕರ್ತವ್ಯದಲ್ಲಿರುವ ವೈದ್ಯರು ಹಾಗೂ ನರ್ಸ್‌ಗಳು, ರೋಗಿಗಳ ಗಂಟಲ ಮಾದರಿಗಳನ್ನು ಸಂಗ್ರಹಿಸುವ ಸಿಬ್ಬಂದಿ ವೈಯಕ್ತಿಕ ರಕ್ಷಣಾ ಸಾಧನ (ಪಿಪಿಇ), ಕೈಗವಸು, ಮುಖಗವಸು ಸೇರಿದಂತೆ ಹಲವು ರಕ್ಷಣಾ ಸಾಮಗ್ರಿಗಳನ್ನು ಧರಿಸಿರುತ್ತಾರೆ. ವಿವಿಧ ವೈದ್ಯಕೀಯ ಸಲಕರಣೆಗಳನ್ನೂ ಬಳಸುತ್ತಾರೆ. ಇವುಗಳಿಂದಲೂ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಅವುಗಳನ್ನು ಅತ್ಯಂತ ಜಾಗರೂಕತೆಯಿಂದ ವಿಲೇವಾರಿ ಮಾಡಬೇಕಾಗುತ್ತದೆ. ಕೋವಿಡ್‌–19 ತ್ಯಾಜ್ಯಗಳ ವಿಲೇವಾರಿಗೆ ಸಂಬಂಧಿಸಿದಂತೆ ಸರ್ಕಾರ ಮಾರ್ಗಸೂಚಿಯನ್ನೂ ಪ್ರಕಟಿಸಿದೆ.

ಹೆಚ್ಚು ತ್ಯಾಜ್ಯ ಇಲ್ಲ: ಜಿಲ್ಲೆಯಲ್ಲಿ ಇದುವರೆಗೂ ಕೋವಿಡ್‌ ಪ್ರಕರಣಗಳು ದಾಖಲಾಗದಿರುವುದರಿಂದ ಜಿಲ್ಲೆಯಲ್ಲಿ ಈ ಸೋಂಕಿಗೆ ಸಂಬಂಧಿಸಿದ ತ್ಯಾಜ್ಯ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತಿಲ್ಲ. ಚಾಮರಾಜನಗರದಲ್ಲಿರುವ ಕೋವಿಡ್‌ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆಗಳಲ್ಲಿರುವ ಫೀವರ್‌ ಕ್ಲಿನಿಕ್‌ಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಬಳಸುವ ವಸ್ತುಗಳು ಮಾತ್ರ ತ್ಯಾಜ್ಯಗಳಾಗುತ್ತವೆ.

ADVERTISEMENT

‘ಫೀವರ್‌ ಕ್ಲಿನಿಕ್‌ಗಳು, ಕೋವಿಡ್‌–19ರಲ್ಲಿರುವ ಪ್ರತ್ಯೇಕ ವಾರ್ಡ್‌ನಲ್ಲಿರುವ ವೈದ್ಯರು ಹಾಗೂ ಸಿಬ್ಬಂದಿ ಮಾತ್ರ ಪಿಪಿಇ ಧರಿಸುತ್ತಾರೆ. ಮೂರು ಪಾಳಿಯಲ್ಲಿ ಅವರು ಕೆಲಸ ಮಾಡುತ್ತಾರೆ. ದಿನಕ್ಕೆ ಗರಿಷ್ಠ ಎಂದರೆ 15 ಪಿಪಿಇ ಕಿಟ್‌ಗಳು ನಮ್ಮಲ್ಲಿ ಬಳಕೆಯಾಗುತ್ತವೆ. ಇದಲ್ಲದೇ ಅವರು ಕೈವಸುಗಳು, ಮುಖಗವಸುಗಳನ್ನು ಧರಿಸುತ್ತಾರೆ. ಇದು ಕೂಡ ಸದ್ಯಕ್ಕೆ ಹೆಚ್ಚು ಪ್ರಮಾಣದಲ್ಲಿ ಬಳಕೆಯಾಗುತ್ತಿಲ್ಲ. ಕೋವಿಡ್‌–19 ರೋಗಿಗಳಿದ್ದರೆ ತ್ಯಾಜ್ಯ ಹೆಚ್ಚು ಉತ್ಪತ್ತಿಯಾಗುತ್ತದೆ’ ಎಂದು ಜಿಲ್ಲಾ ಸರ್ಜನ್‌ಡಾ.ಕೃಷ್ಣಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ತ್ಯಾಜ್ಯಗಳ ವಿಲೇವಾರಿ ಮಾಡುವ ಸಂಬಂಧ ಸರ್ಕಾರದ ಮಾರ್ಗಸೂಚಿಗಳಿವೆ. ಅವುಗಳನ್ನು ಕಡ್ಡಾಯವಾಗಿ ಪಾಲನೆ ಮಾಡಲಾಗುತ್ತಿದೆ. ಈ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ಇರಿಸಲಾಗುತ್ತಿದೆ. ತ್ಯಾಜ್ಯವನ್ನು ದಪ್ಪವಾಗಿರುವ ಚೀಲದಲ್ಲಿ ಇರಿಸಿ, ಪ್ರತ್ಯೇಕವಾದ ಟ್ರಾಲಿಯಲ್ಲಿ ಸಾಗಿಸಿ, ಅದಕ್ಕಾಗಿ ಮೀಸಲಾಗಿರುವ ಕೊಠಡಿಯಲ್ಲಿ ಇರಿಸಲಾಗುತ್ತದೆ. ಇಡೀ ಕೊಠಡಿಯನ್ನು ಹೈಪೊಕ್ಲೋರೈಟ್‌ ದ್ರಾವಣ ಸಿಂಪಡಿಸಿ ಸ್ವಚ್ಛಗೊಳಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಮೈಸೂರಿನಲ್ಲಿ ವಿಲೇವಾರಿ
‘ಮೈಸೂರಿನ ಶ್ರೀ ಕನ್ಸಲ್ಟೆನ್ಸಿ ಸಂಸ್ಥೆಯು ತ್ಯಾಜ್ಯ ವಿಲೇವಾರಿ ಹೊಣೆ ಹೊತ್ತಿದೆ. ಆಸ್ಪತ್ರೆಯಿಂದ ತ್ಯಾಜ್ಯವನ್ನು ಮೈಸೂರಿಗೆ ಸಾಗಿಸಿ, ಅಲ್ಲಿ ಸಂಸ್ಥೆಯ ಘಟಕದಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ತ್ಯಾಜ್ಯವನ್ನು 48 ಗಂಟೆಗಳ ಒಳಗೆ ವಿಲೇವಾರಿ ಮಾಡಬೇಕು ಎಂಬ ನಿಯಮ ಇದೆ. ಪ್ರತಿ ಮಂಗಳವಾರ, ಗುರುವಾರ ಮತ್ತು ಶನಿವಾರಗಳಂದು ಮೈಸೂರಿಗೆ ತೆಗೆದುಕೊಂಡು ಹೋಗಲಾಗುತ್ತದೆ’ ಎಂದು ಡಾ.ಕೃಷ್ಣಪ್ರಸಾದ್‌ ಹೇಳಿದರು.

ಕೊಳ್ಳೇಗಾಲದ ಉಪವಿಭಾಗದ ಆಸ್ಪತ್ರೆಯಲ್ಲೂ ಇದೇ ವ್ಯವಸ್ಥೆ ಜಾರಿಯಲ್ಲಿದೆ. ಅಲ್ಲಿಂದಲೂ ಶ್ರೀ ಕನ್ಸೆಲ್ಟೆನ್ಸಿ ಸಂಗ್ರಹಿಸಿ ಮೈಸೂರಿಗೆ ಸಾಗಿಸುತ್ತದೆ.

**
ತ್ಯಾಜ್ಯ ವಿಲೇವಾರಿಯನ್ನು ಎಚ್ಚರಿಕೆಯಿಂದ ಮಾಡಲಾಗುತ್ತಿದೆ. ಶ್ರೀ ಕನ್ಸಲ್ಟೆನ್ಸಿಯವರು ಎರಡು ದಿನಗಳಿಗೊಮ್ಮೆ ಕಸವನ್ನು ತೆಗೆದುಕೊಂಡು ಹೋಗುತ್ತಾರೆ.
-ಡಾ.ಕೃಷ್ಣಪ್ರಸಾದ್‌, ಜಿಲ್ಲಾ ಸರ್ಜನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.