ADVERTISEMENT

ಗುಂಡ್ಲುಪೇಟೆ: ಹೋಟೆಲ್‌ಗಳಲ್ಲಿ ಸ್ವಚ್ಛತೆ, ಕೋವಿಡ್‌–19 ನಿಯಮ ಪಾಲನೆ ಮಾಯ

ಮಲ್ಲೇಶ ಎಂ.
Published 5 ಡಿಸೆಂಬರ್ 2020, 14:03 IST
Last Updated 5 ಡಿಸೆಂಬರ್ 2020, 14:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ ಕೋವಿಡ್‌ ಪ್ರಕರಣಗಳು ಕುಸಿಯುತ್ತಿರುವಂತೆಯೇ, ಸೋಂಕು ತಡೆಗೆ ರೂಪಿಸಲಾಗಿರುವ ನಿಯಮಗಳ ಪಾಲನೆ ಕೂಡ ಕಡಿಮೆಯಾಗುತ್ತಿದೆ.

ಕೆಲವು ವಾರಗಳಿಂದೀಚೆಗೆ ಪಟ್ಟಣದ ಅನೇಕ ಹೋಟೆಲ್‌ಗಳಲ್ಲಿ ಕೋವಿಡ್‌–19 ತಡೆ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆ. ಮಾಲೀಕರು ಸ್ವಚ್ಛತೆಗೂ ಹೆಚ್ಚು ಗಮನ ನೀಡುತ್ತಿಲ್ಲ. ಈ ಬಗ್ಗೆ, ಕೆಲವರು ಪುರಸಭೆ ಆಡಳಿತಕ್ಕೆ ದೂರನ್ನೂ ನೀಡಿದ್ದಾರೆ.

ಅನ್‌ಲಾಕ್‌ ಅವಧಿಯಲ್ಲಿ ಹೋಟೆಲ್‌ನಲ್ಲೇ ಗ್ರಾಹಕರಿಗೆ ಆಹಾರ ಪೂರೈಸಲು ಜಿಲ್ಲಾಡಳಿತ ಅನುಮತಿ ನೀಡಿದ ಬಳಿಕ ಕೆಲವು ದಿನಗಳವರೆಗೆ ಮಾಲೀಕರು ನಿಯಮಗಳನ್ನು ಪಾಲಿಸಿದರು. ಥರ್ಮಲ್‌ ಸ್ಕ್ರೀನಿಂಗ್‌ ಮಾಡುವುದು, ಸ್ಯಾನಿಟೈಸರ್‌ ನೀಡುವುದು, ಎಲ್ಲರಿಗೂ ಬಿಸಿ ನೀರನ್ನೇ ಕುಡಿಯಲು ಕೊಡುವುದು, ಎಸೆಯಬಹುದಾದ ತಟ್ಟೆಗಳಲ್ಲಿ ಆಹಾರ ಪೂರೈಕೆ ಅಥವಾ ಸ್ಟೀಲ್ ತಟ್ಟೆಗೆ ಬಾಳೆ ಎಲೆ (ಪ್ಲಾಸ್ಟಿಕ್‌ ಹಾಕಿ ಕೊಡುವವರು ಇದ್ದಾರೆ) ಹಾಕಿ ಊಟ–ತಿಂಡಿ ಕೊಡುತ್ತಿದ್ದರು. ಈಗ ಎಲ್ಲವೂ ನಿಂತಿದೆ.

ADVERTISEMENT

‘ಬಳಸಿದ ತಟ್ಟೆಗಳನ್ನು ಸರಿಯಾಗಿ ತೊಳೆಯುವುದಿಲ್ಲ. ಮಾಂಸಾಹಾರಿ ಹೋಟೆಲ್‌ಗಳಲ್ಲಿ ತಟ್ಟೆಗಳಲ್ಲಿ ಜಿಡ್ಡಿನ ಅಂಶ ಹಾಗೆಯೇ ಇರುತ್ತದೆ. ಪ್ರಶ್ನೆ ಮಾಡಿದರೆ ಸ್ವಚ್ಛ ಮಾಡಿ ಕೊಡುತ್ತಾರೆ. ಗ್ರಾಮೀಣ ಭಾಗದ ಜನರು ಇದನ್ನೆಲ್ಲ ಪ್ರಶ್ನೆ ಮಾಡುವುದಕ್ಕೆ ಹೋಗುವುದಿಲ್ಲ’ ಎಂಬುದು ಸಾರ್ವಜನಿಕರ ದೂರು.

ರಸ್ತೆಯ ಬದಿಯಲ್ಲಿ ವ್ಯಾಪಾರ ಮಾಡುವ ಪಾನಿಪುರಿ, ಗೋಬಿ, ಆಮ್ಲೆಟ್‌ ಸೇರಿದಂತೆ ಫಾಸ್ಟ್‌ಫುಡ್‌ ಅಂಗಡಿಗಳಲ್ಲೂ ಒಬ್ಬರು ಬಳಸಿದ ತಟ್ಟೆಗಳನ್ನು ಸರಿಯಾದ ತೊಳೆಯದೆ ನೀರಿನಲ್ಲಿ ಮುಳುಗಿಸಿ ಬಳಕೆ ಮಾಡುತ್ತಾರೆ.

‘ಕೋವಿಡ್‌ ಕಾಲದಲ್ಲಿ ಸ್ವಚ್ಛತೆ ಬಹಳ ಮುಖ್ಯ. ಸ್ವಚ್ಛತೆ ಕಾಪಾಡಿದರೆ ಈ ಸೋಂಕಿನಿಂದ ಪಾರಾಗುವುದಕ್ಕೆ ಅವಕಾಶ ಇದೆ. ಪ್ರತಿಯೊಬ್ಬರೂ ಹೆಚ್ಚು ಮುನ್ನೆಚ್ಚರಿಕೆ ವಹಿಸುವ ಅಗತ್ಯವಿರುತ್ತದೆ. ವ್ಯಾಪಾರಿಗಳು ಸಹ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಪುರಸಭೆ ಮತ್ತು ತಾಲ್ಲೂಕು ಆಡಳಿತ ಈ ಬಗ್ಗೆ ಗಮನ ಹರಿಸಿ ನಿಯಮಗಳನ್ನು ಪಾಲನೆ ಮಾಡದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ವಕೀಲ ರಾಜೇಶ್ ಒತ್ತಾಯಿಸಿದರು.

ಪುರಸಭೆ ಅಧಿಕಾರಿಗಳು ಹೋಟೆಲ್‌ಗಳಿಗೆ ಭೇಟಿ ನೀಡಿ ಸರಿಯಾದ ರೀತಿಯಲ್ಲಿ ಪರಿಶೀಲನೆ ನಡೆಸುವುದಿಲ್ಲ ಎಂದು ಅವರು ಆರೋಪಿಸಿದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪುರಸಭೆಯ ಆರೋಗ್ಯ ಅಧಿಕಾರಿ ಗೋಪಿ ಅವರು, ‘ಸ್ವಚ್ಚತೆಯನ್ನು ಕಾಪಾಡುವಂತೆಎಲ್ಲ ಹೋಟೆಲ್ ಮಾಲೀಕರಿಗೆ ಮತ್ತು ವ್ಯಾಪಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಆದರೂ ಕೆಲ ಕಡೆ ನಿಯಮಗಳನ್ನು ಮೀರುತ್ತಿರುವ ಬಗ್ಗೆ ದೂರುಗಳು ಬಂದಿವೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಪಟ್ಟಣದಲ್ಲಿರುವ ಎಲ್ಲ ಹೋಟೆಲ್‌ಗಳ ಮೇಲೆ ನಿಗಾ ಇಡಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.