ADVERTISEMENT

328 ಕುಟುಂಬಕ್ಕೆ ತಲಾ ₹1 ಲಕ್ಷ ಪರಿಹಾರ

ಕೋವಿಡ್‌ ಸಾವು; ಕೇಂದ್ರದಿಂದ 449 ಫಲಾನುಭವಿಗಳಿಗೆ ತಲಾ ₹50 ಸಾವಿರ ನೇರ ವರ್ಗಾವಣೆ

ಸೂರ್ಯನಾರಾಯಣ ವಿ
Published 2 ಜನವರಿ 2022, 3:04 IST
Last Updated 2 ಜನವರಿ 2022, 3:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ಕೋವಿಡ್‌ನಿಂದಾಗಿ ಮೃತಪಟ್ಟ ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್‌) ಕುಟುಂಬದ ವ್ಯಕ್ತಿಯ ವಾರಸುದಾರರಿಗೆ ₹1 ಲಕ್ಷ ಪರಿಹಾರ ನೀಡುವ ಯೋಜನೆ ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿದ್ದು, 328 ಮಂದಿಯ ಕುಟುಂಬಗಳಿಗೆ ಪರಿಹಾರ ಸಿಗಲಿದೆ.

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ಭಾನುವಾರ ಫಲಾನುಭವಿಗಳಿಗೆ ಪರಿಹಾರ ಚೆಕ್‌ ವಿತರಿಸಲಿದ್ದಾರೆ.

ಎರಡನೇ ಅಲೆ ತೀವ್ರವಾಗಿದ್ದ ಸಂದರ್ಭದಲ್ಲಿ ಹಿಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು, ಸೋಂಕಿನಿಂದಾಗಿ ದುಡಿಯುವ ವ್ಯಕ್ತಿಯನ್ನು ಕಳೆದುಕೊಂಡ ಬಡ ಕುಟುಂಬಗಳಿಗೆ ತಲಾ ₹1 ಲಕ್ಷ ಪರಿಹಾರ ನೀಡಲಾಗುವುದು ಎಂದು ಘೋಷಿಸಿದ್ದರು.

ADVERTISEMENT

ಬಿಪಿಎಲ್‌ ಕುಟುಂಬದ ದುಡಿಯುವ ವ್ಯಕ್ತಿ ಮೃತಪಟ್ಟಿದ್ದರೆ ಮಾತ್ರ ಪರಿಹಾರ ನೀಡಲಾಗುವುದು ಎಂದು ಮೊದಲಿನ ಆದೇಶದಲ್ಲಿ ಹೇಳಲಾಗಿತ್ತು. ತಿಂಗಳ ಹಿಂದೆ ಈ ಆದೇಶಕ್ಕೆ ತಿದ್ದುಪಡಿ ಮಾಡಿರುವ ರಾಜ್ಯ ಸರ್ಕಾರ, ‘ದುಡಿಯುವ’ ಎನ್ನುವ ಪದ ಕೈಬಿಟ್ಟು ವಯಸ್ಸಿನ ಭೇದವಿಲ್ಲದೆ‌, ಸೋಂಕಿನಿಂದಾಗಿ ಮೃತಪಟ್ಟ ಬಿ‍ಪಿಎಲ್‌ ಕುಟುಂಬದ ವ್ಯಕ್ತಿಯ ಅರ್ಹ ವಾರಸುದಾರರಿಗೆ ಆರ್ಥಿಕ ನೆರವು ನೀಡಲಾಗುವುದು ಎಂದು ಹೇಳಿತ್ತು.

ಜಿಲ್ಲೆಯಲ್ಲಿ ಇದುವರೆಗೆ ₹1 ಲಕ್ಷದ ಪರಿಹಾರಕ್ಕಾಗಿ 449 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ 328 ಮಂದಿ ಬಿಪಿಎಲ್‌ ಕಾರ್ಡ್‌ದಾರರು. 121 ಮಂದಿ ಎಪಿಎಲ್‌ ಕಾರ್ಡ್‌ದಾರರು ಎಂದು ‌ಜಿಲ್ಲಾಧಿಕಾರಿ ಕಚೇರಿ ಮಾಹಿತಿ ನೀಡಿದೆ.

ಸರ್ಕಾರದ ₹1 ಲಕ್ಷ ಪರಿಹಾರ 328 ಮಂದಿಯ ಕುಟುಂಬಗಳಿಗೆ ನೀಡಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಅರ್ಜಿ ಹಾಕಲು ಗಡುವು ಇಲ್ಲದಿರುವುದರಿಂದ, ಇನ್ನು ಕೂಡ ಅರ್ಹ ಕುಟುಂಬದವರು ಅರ್ಜಿ ಹಾಕಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

502 ಸಾವು: ಆರೋಗ್ಯ ಇಲಾಖೆಯು ಜಿಲ್ಲಾಧಿಕಾರಿ ಕಚೇರಿಗೆ ಕೋವಿಡ್‌ನಿಂದಾಗಿ 502 ಮಂದಿ ಮೃತಪಟ್ಟಿದ್ದಾರೆ (ಸೋಂಕಿದ್ದರೂ. ಬೇರೆ ಕಾರಣಗಳಿಂದ ಮೃತಪಟ್ಟವರು, ಆರ್‌ಟಿಪಿಸಿಆರ್‌ ವರದಿ ನೆಗೆಟಿವ್‌ ಬಂದು ಉಸಿರಾಟ ಹಾಗೂ ಇನ್ನಿತರ ಕಾರಣಗಳಿಂದ ಕೊನೆಯುಸಿರೆಳೆದರು ಇದರಲ್ಲಿ ಸೇರಿಲ್ಲ) ಎಂಬ ಮಾಹಿತಿ ನೀಡಿದೆ.ಈ ಪೈಕಿ, 468 ಮಂದಿ ಜಿಲ್ಲೆಯವರು ಉಳಿದ 34 ಮಂದಿ ಹೊರ ಜಿಲ್ಲೆ ಹಾಗೂ ರಾಜ್ಯದವರು. ಬೇರೆ ಜಿಲ್ಲೆ ಹಾಗೂ ರಾಜ್ಯಗಳಲ್ಲಿ ಮೃತಪಟ್ಟ ಜಿಲ್ಲೆಯವರ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

ಕೇಂದ್ರದಿಂದಲೂ ಪರಿಹಾರ: ಕೇಂದ್ರ ಸರ್ಕಾರ ಕೂಡ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ ಎಲ್ಲರಿಗೂ ತಲಾ ₹50 ಸಾವಿರ ಪರಿಹಾರ ಮೊತ್ತವನ್ನು ನೇರವಾಗಿ ಅವರ ಖಾತೆಗೆ ಹಾಕಲಿದೆ.

‘ಕೇಂದ್ರದ ಸಾಮಾಜಿಕ ಭದ್ರತಾ ಯೋಜನೆಗಳು ಹಾಗೂ ಪಿಂಚಣಿಗಳ ನಿರ್ದೇಶನಾಲಯವು (ಡಿಎಸ್‌ಎಸ್‌ಪಿ) ಪರಿಹಾರಕ್ಕಾಗಿ ಅರ್ಜಿ ಹಾಕಿದ ಬಿಪಿಎಲ್‌, ಎಪಿಎಲ್‌ ಕುಟುಂಬಗಳ ಫಲಾನುಭವಿಗಳಿಗೂ ತಲಾ ₹50 ಸಾವಿರ ಪರಿಹಾರ ನೀಡಲಿದೆ. ಈಗಾಗಲೇ ಕೆಲವರ ಖಾತೆಗೆ ಈ ಮೊತ್ತ ನೇರವಾಗಿ ಜಮೆ ಆಗಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿದೇವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಒಂದು ಕುಟುಂಬದಲ್ಲಿ ಎಷ್ಟು ಜನರು ಮೃತಪಟ್ಟಿದ್ದರೂ, ಒಬ್ಬರಿಗೆ ಮಾತ್ರ ರಾಜ್ಯ ಸರ್ಕಾರದಿಂದ ₹1 ಲಕ್ಷ ಸಿಗಲಿದೆ. ಆದರೆ, ಕೇಂದ್ರವು ಕುಟುಂಬದಲ್ಲಿ ಮೃತಪಟ್ಟ ಎಲ್ಲರ ವಾರಸುದಾರರಿಗೂ ₹50 ಸಾವಿರ ನೀಡಲಿದೆ. ಉದಾಹರಣೆಗೆ, ಒಂದು ಬಿಪಿಎಲ್‌ ಕುಟುಂಬದಲ್ಲಿ ಕೋವಿಡ್‌ನಿಂದಾಗಿ ಒಬ್ಬರು ಮೃತಪಟ್ಟಿದ್ದ‌ರೆ, ಆ ಕುಟುಂಬಕ್ಕೆ ₹1.5 ಲಕ್ಷ ಪರಿಹಾರ ಸಿಗುತ್ತದೆ. ಮೂವರು ಮೃತಪಟ್ಟಿದ್ದರೆ ರಾಜ್ಯದಿಂದ ₹1 ಲಕ್ಷ ಹಾಗೂ ಕೇಂದ್ರದಿಂದ ತಲಾ ₹50 ಸಾವಿರದಂತೆ ₹1.5 ಲಕ್ಷ ಪರಿಹಾರ ಸಿಗಲಿದೆ’ ಎಂದು ಅಧಿಕಾರಿಗಳು ವಿವರಿಸಿದರು.

ಅರ್ಜಿ ಹಾಕದವರ ಹುಡುಕಾಟ

ಕೋವಿಡ್‌ನಿಂದಾಗಿ ಸದಸ್ಯರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ಬಡ ಕುಟುಂಬಗಳನ್ನು ಗುರುತಿಸಿ, ಆ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂಬ ಸೂಚನೆ ಸರ್ಕಾರದಿಂದ ಬಂದಿರುವುದರಿಂದ, ಜಿಲ್ಲಾಡಳಿತವು ಇದುವರೆಗೆ ಅರ್ಜಿ ಸಲ್ಲಿಸಿದ ಕುಟುಂಬಗಳನ್ನು ಗುರುತಿಸಿ, ಗ್ರಾಮ ಪಂಚಾಯಿತಿಯ ಅಧಿಕಾರಿಗಳನ್ನು ಮನೆಗೆ ಕಳುಹಿಸಿ ಅವರಿಂದ ಅರ್ಜಿ ಹಾಕಿಸಲು ಕ್ರಮ ಕೈಗೊಳ್ಳುತ್ತಿದೆ.

‘ಈ ಯೋಜನೆಯ ಬಗ್ಗೆ ಮಾಹಿತಿ ಇಲ್ಲದಿರುವ ಕುಟುಂಬಗಳು ಇರುವ ಸಾಧ್ಯತೆ ಇದೆ. ಅಂತಹ ಕುಟುಂಬಗಳನ್ನು ಗುರುತಿಸಿ, ಗ್ರಾಮ ಲೆಕ್ಕಾಧಿಕಾರಿಗಳು ಅವರ ಮನೆಗೆ ಭೇಟಿ ನೀಡಿ ಅರ್ಜಿ ಹಾಕಿಸುವ ಕೆಲಸವನ್ನೂ ಮಾಡಲಾಗುತ್ತಿದೆ. ಗರಿಷ್ಠ ಫಲಾನುಭವಿಗಳಿಗೆ ಯೋಜನೆಯ ಲಾಭ ಸಿಗಬೇಕು ಎಂಬ ದೃಷ್ಟಿಯಿಂದ ಈ ಕ್ರಮಕ್ಕೆ ಮುಂದಾಗಿದ್ದೇವೆ’ ಎಂದು ಕಾತ್ಯಾಯಿನಿದೇವಿ ಅವರು ಹೇಳಿದರು.

--

ಕೋವಿಡ್‌ನಿಂದ ಮೃತಪಟ್ಟ ಬಿಪಿಎಲ್‌ ಕುಟುಂಬ‌ಗಳ 328 ಮಂದಿಯ ವಾರಸುದಾರರಿಗೆ ತಲಾ ₹1 ಲಕ್ಷ ನೀಡಲು ಸಿದ್ಧತೆ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವರು ಭಾನುವಾರ ಚೆಕ್‌ ಹಸ್ತಾಂತರಿಸಲಿದ್ದಾರೆ.
ಎಸ್‌.ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.