ADVERTISEMENT

ಚಾಮರಾಜನಗರ | ಪರೀಕ್ಷಾ ಕೇಂದ್ರದಿಂದ ಸೋಂಕು ಹರಡಿಲ್ಲ: ಸುರೇಶ್‌ ಕುಮಾರ್‌

​ಪ್ರಜಾವಾಣಿ ವಾರ್ತೆ
Published 28 ಜೂನ್ 2020, 19:32 IST
Last Updated 28 ಜೂನ್ 2020, 19:32 IST
ಎಸ್‌. ಸುರೇಶ್‌ ಕುಮಾರ್
ಎಸ್‌. ಸುರೇಶ್‌ ಕುಮಾರ್   

ಚಾಮರಾಜನಗರ: ‘ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿರುವ ಮಕ್ಕಳು ಕೋವಿಡ್‌–19ಗೆ ತುತ್ತಾಗಿರುವ ಮೂರ್ನಾಲ್ಕು ಪ್ರಕರಣಗಳು ನಡೆದಿವೆ. ಆದರೆ, ಇವು ಪರೀಕ್ಷಾ ಕೇಂದ್ರದಿಂದ ಹರಡಿರುವ ಪ‍್ರಕರಣಗಳಲ್ಲ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಹೇಳಿದರು.

ನಗರದಲ್ಲಿ ಮಾತನಾಡಿದ ಅವರು, ‘ಹಾಸನದಲ್ಲಿ ಒಬ್ಬ ವಿದ್ಯಾರ್ಥಿಗೆ ಡೆಂಗಿ ಜ್ವರ ಬಂದಿತ್ತು. ಚಿಕಿತ್ಸೆ ಪಡೆಯುವಾಗ ಗಂಟಲ ದ್ರವ ಸಂಗ್ರಹಿಸಲಾಗಿತ್ತು. ನಿನ್ನೆ ಆತ ಪರೀಕ್ಷೆ ಬರೆಯುತ್ತಿರುವ ಸಂದರ್ಭದಲ್ಲಿ ಸೋಂಕು ದೃಢಪಟ್ಟಿದೆ. ಆತ ಪರೀಕ್ಷೆ ಬರೆದಿದ್ದ ಕೊಠಡಿಯಲ್ಲಿದ್ದ ಉಳಿದ 19 ವಿದ್ಯಾರ್ಥಿಗಳ ಗಂಟಲ ದ್ರವ ಪರೀಕ್ಷೆ ಮಾಡಲಾಗಿದ್ದು, ಎಲ್ಲವೂ ನೆಗೆಟಿವ್‌ ಬಂದಿದೆ’ ಎಂದರು.

‘ಇದುವರೆಗೆ 8.48 ಲಕ್ಷ ಮಕ್ಕಳು ಎಸ್ಸೆಸ್ಸೆಲ್ಸಿ ಬರೆದಿದ್ದಾರೆ.ತಜ್ಞರ ಸಮಿತಿ ಮಾರ್ಗದರ್ಶನ‌, ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ಗೆ ಸರ್ಕಾರ ನೀಡಿರುವ ಮಾಹಿತಿಯಂತೆಯೇ ಪರೀಕ್ಷೆ ನಡೆಸಲಾಗುತ್ತಿದೆ.ಎರಡು ಮೂರು ಘಟನೆಗಳಿಂದ ಆತಂಕಗೊಳ್ಳುವ ಅಗತ್ಯವಿಲ್ಲ.ನಾವು ಕೈಗೊಂಡಿರುವ ಕ್ರಮಗಳನ್ನು ನೋಡಿರುವ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಕ್ಕಳ ಸುರಕ್ಷತೆ ನಮ್ಮ ಆದ್ಯತೆ’ ಎಂದು ಸಚಿವರು ಹೇಳಿದರು.

ADVERTISEMENT

ಮೇಲ್ವಿಚಾರಕಿ, ವಿದ್ಯಾರ್ಥಿಗೆ ಕೋವಿಡ್‌–19 ದೃಢ
ಹುಬ್ಬಳ್ಳಿ:
ಬಾಗಲಕೋಟೆ ನಗರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಮೇಲ್ವಿಚಾರಕಿಯಾಗಿ ಕರ್ತವ್ಯ ನಿರ್ವಹಿಸಿದ ಶಿಕ್ಷಕಿಯೊಬ್ಬರಿಗೆ; ಬಳ್ಳಾರಿಯಲ್ಲಿ ಪರೀಕ್ಷೆ ಬರೆದ ಒಬ್ಬ ವಿದ್ಯಾರ್ಥಿಗೆ ಭಾನುವಾರ ಕೋವಿಡ್‌–19 ದೃಢಪಟ್ಟಿದೆ.

ಬಾಗಲಕೋಟೆಯ ನವನಗರದ ಸೆಕ್ಟರ್ ನಂ 43ರಲ್ಲಿನ ಆರ್‌ಎಂಎಸ್‌ಎ ಶಾಲೆಯ ಬಾಹ್ಯ ಪರೀಕ್ಷಾ ಕೇಂದ್ರದಲ್ಲಿ ಶಿಕ್ಷಕಿ ಜೂನ್ 25 ಹಾಗೂ 27ರಂದು ಮೇಲ್ವಿಚಾರಕಿಯಾಗಿ ಕೆಲಸ ಮಾಡಿದ್ದಾರೆ. ಹೀಗಾಗಿ ಪರೀಕ್ಷಾ ಕೇಂದ್ರದ 20 ಸಿಬ್ಬಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಬಳ್ಳಾರಿ ನಗರದ ವಿಸ್ಡಮ್ ಲ್ಯಾಂಡ್ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದ ಒಬ್ಬ ವಿದ್ಯಾರ್ಥಿಗೆ ಕೋವಿಡ್‌–19 ದೃಢಪಟ್ಟಿದ್ದರಿಂದ ಕೇಂದ್ರವನ್ನು ಸಂಪೂರ್ಣ ‌ಸ್ಯಾನಿಟೈಸ್ ಮಾಡಲಾಗಿದೆ. ಪೋಷಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ತಿಳಿಸಿದ್ದಾರೆ.

ವಿದ್ಯಾರ್ಥಿನಿಗೆ ಕೋವಿಡ್‌(ಉಡುಪಿ ವರದಿ): ಕಾಪು ತಾಲ್ಲೂಕಿನ ಪರೀಕ್ಷಾ ಕೇಂದ್ರವೊಂದರಲ್ಲಿ ಶನಿವಾರ ಪರೀಕ್ಷೆ ಬರೆದ ವಿದ್ಯಾರ್ಥಿನಿಗೆ ಕೋವಿಡ್‌–19 ದೃಢಪಟ್ಟಿದೆ.

ವಿದ್ಯಾರ್ಥಿನಿಯ ಕುಟುಂಬದ ಇಬ್ಬರು ಸದಸ್ಯರಲ್ಲಿ ಶನಿವಾರ ಕೋವಿಡ್‌ ಸೋಂಕು ಪತ್ತೆಯಾಗಿತ್ತು. ಪರೀಕ್ಷೆ ಮುಗಿದ ತಕ್ಷಣ ವಿದ್ಯಾರ್ಥಿನಿಯ ಗಂಟಲ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಭಾನುವಾರ ವರದಿ ಬಂದಿದ್ದು ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ತಿಳಿಸಿದರು.

ಸೋಂಕಿತ ವಿದ್ಯಾರ್ಥಿನಿಗೆ ಪೂರಕ ಪರೀಕ್ಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. ಮುಂದಿನ ಪರೀಕ್ಷೆಗಳಿಗೆ ಕೊಠಡಿಯನ್ನು ಬಳಸದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.