ADVERTISEMENT

ಕೇರಳ ಗಡಿಯಲ್ಲಿ ತಪಾಸಣೆ, ಪರೀಕ್ಷೆ ಇನ್ನೂ ತಡ

ಕೋವಿಡ್‌: ಇನ್ನೆರಡು ದಿನಗಳಲ್ಲಿ ಜಿಲ್ಲೆಯಲ್ಲಿ ಪರೀಕ್ಷೆ ಆರಂಭ– ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2023, 15:53 IST
Last Updated 20 ಡಿಸೆಂಬರ್ 2023, 15:53 IST
ಗುಂಡ್ಲುಪೇಟೆ ತಾಲ್ಲೂಕಿನ ಮೂಲೆಹೊಳೆ ಚೆಕ್‌ಪೋಸ್ಟ್‌ನಲ್ಲಿ ಕೇರಳದಿಂದ ಬಂದವರ ವಿವರಗಳನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಪಡೆದರು
ಗುಂಡ್ಲುಪೇಟೆ ತಾಲ್ಲೂಕಿನ ಮೂಲೆಹೊಳೆ ಚೆಕ್‌ಪೋಸ್ಟ್‌ನಲ್ಲಿ ಕೇರಳದಿಂದ ಬಂದವರ ವಿವರಗಳನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಪಡೆದರು   

ಚಾಮರಾಜನಗರ/ಗುಂಡ್ಲುಪೇಟೆ: ಕೇರಳದಲ್ಲಿ ಕೊರೊನಾ ವೈರಸ್‌ ರೂಪಾಂತರಿ ತಳಿ ಜೆಎನ್‌.1 ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಮತ್ತು ಕೋವಿಡ್‌ ಪರೀಕ್ಷೆ ನಡೆಸುವಂತೆ ಆರೋಗ್ಯ ಇಲಾಖೆ ಸೂಚಿಸಿದ ಬೆನ್ನಲ್ಲೇ ಜಿಲ್ಲೆಯ ಮೂಲೆಹೊಳೆ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ಆರಂಭವಾಗಿದೆ. ಕೋವಿಡ್‌ ಪರೀಕ್ಷೆ ಇನ್ನೂ ಆರಂಭವಾಗಿಲ್ಲ. 

‘ನಗರದ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಸಿಮ್ಸ್‌) ಕೋವಿಡ್‌ ಪರೀಕ್ಷೆ ನಡೆಸುವ ಪ್ರಯೋಗಾಲಯ ಇದ್ದು, ಪರೀಕ್ಷೆಗೆ ಬೇಕಾದ ಏಜೆಂಟ್‌ ಹಾಗೂ ಇನ್ನಿತರ ಸಲಕರಣೆಗಳು ಇನ್ನೆರಡು ದಿನಗಳಲ್ಲಿ ಬರಲಿದ್ದು, ತಕ್ಷಣವೇ ಪರೀಕ್ಷೆ ಆರಂಭವಾಗಲಿದೆ’ ಎಂದು ಜಿಲ್ಲಾ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಸ್‌.ಚಿದಂಬರ ಹೇಳಿದ್ದಾರೆ. 

ಜಿಲ್ಲೆಯಲ್ಲಿ ಕೋವಿಡ್‌ನ ಮೊದಲ ಮತ್ತು ಎರಡನೇ ಅಲೆ ತೀವ್ರವಾಗಿತ್ತು. ಮೂರನೇ ಮತ್ತು ನಾಲ್ಕನೇ ಅಲೆ ಗಂಭೀರವಾಗಿರಲಿಲ್ಲ. ಸತತವಾಗಿ ಪ್ರಕರಣಗಳು ದಾಖಲಾಗದೇ ಇದ್ದುದರಿಂದ ವರ್ಷದ ಹಿಂದೆಯೇ ಪರೀಕ್ಷೆಗಳನ್ನು ನಿಲ್ಲಿಸಲಾಗಿತ್ತು. 

ADVERTISEMENT

ಗಡಿಯಲ್ಲಿ ತಪಾಸಣೆ: ಗುಂಡ್ಲುಪೇಟೆ ತಾಲ್ಲೂಕಿನ ಕೇರಳ ಗಡಿಯಲ್ಲಿರುವ ಮೂಲೆಹೊಳೆ ಚೆಕ್‌ಪೋಸ್ಟ್‌ನಲ್ಲಿ ಬುಧವಾರದಿಂದ ಪ್ರಯಾಣಿಕರ ಆರೋಗ್ಯ ತಪಾಸಣೆ ಆರಂಭವಾಗಿದೆ.

ಮೂಲೆಹೊಳೆ ಚೆಕ್ ಪೋಸ್ಟ್ ಮೂಲಕ ರಾಜ್ಯ ಪ್ರವೇಶಿಸುವ ಪ್ರತಿಯೊಂದು ವಾಹನ ಚಾಲಕರು, ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಲಾಗುತ್ತಿದ್ದು, ಆರೋಗ್ಯ ಇಲಾಖೆಯ ವತಿಯಿಂದ ಇಬ್ಬರು ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

ತಪಾಸಣೆ ವೇಳೆ ಜ್ವರ, ನೆಗಡಿ, ಕೆಮ್ಮು ಕಂಡುಬಂದರೆ ಅಂತಹವರ ಹೆಸರು, ವಿಳಾಸ ಮತ್ತು ಮೊಬೈಲ್ ನಂಬರ್ ಪಡೆದು, ಪ್ರಯಾಣಿಕರು ಎಲ್ಲಿಗೆ ತೆರಳುತ್ತಾರೋ ಆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಾಹಿತಿ ರವಾನಿಸಲಾಗುತ್ತಿದೆ.

ಶಬರಿಮಲೆಗೆ ಯಾತ್ರಿಗಳ ಮೇಲೆ ನಿಗಾ: ‘ರಾಜ್ಯದಿಂದ ಸಾವಿರಾರು ಭಕ್ತರು ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ. ಅವರು ಮೂಲೆ ಹೊಳೆ ಚೆಕ್ ಪೋಸ್ಟ್ ಮೂಲಕ ವಾಪಸ್ ಆಗುತ್ತಿದ್ದಾರೆ. ಇವರ ಮೇಲೆ ಗಮನ ಕೇಂದ್ರೀಕರಿಸಲಾಗಿತ್ತು. ಪ್ರತಿಯೊಬ್ಬರನ್ನೂ ಕಟ್ಟುನಿಟ್ಟಾಗಿ ತಪಾಸಣೆ ನಡೆಸಲಾಗುತ್ತಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅಲೀಂ ಪಾಷಾ ‘ಪ್ರಜಾವಾಣಿ’ಗೆ ತಿಳಿಸಿದರು. 

ಡಾ.ಚಿದಂಬರ ಎಸ್‌.

ಕೋವಿಡ್‌ ಪರಿಸ್ಥಿತಿ ಎದುರಿಸಲು ಸಿದ್ಧತೆ ನಡೆಸಲಾಗುತ್ತಿದೆ. ಜಿಲ್ಲೆಯಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಜನರು ಆತಂಕ ಪಡಬೇಕಾಗಿಲ್ಲ‌

– ಡಾ.ಎಸ್‌.ಚಿದಂಬರ

ಗಡಿಭಾಗದಲ್ಲಿ ನಿಗಾ:ಡಿಎಚ್‌ಒ

60 ವರ್ಷಕ್ಕಿಂತ ಹೆಚ್ಚು ವಯಸ್ಸಿನವರು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಕೇರಳಕ್ಕೆ ಹೊಂದಿಕೊಂಡಿರುವ ಗಡಿ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲು ಸರ್ಕಾರ ಸೂಚಿಸಿದೆ. ಅದರಂತೆ ಮೂಲೆಹೊಳೆ ಚೆಕ್‌ಪೋಸ್ಟ್‌ನಲ್ಲಿ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಸಂಚಾರಕ್ಕೆ ನಿರ್ಬಂಧ ಇಲ್ಲ. ಗಡಿ ಗ್ರಾಮಗಳ ಜನರ ಆರೋಗ್ಯ ಸ್ಥಿತಿಯ ಬಗ್ಗೆ ನಿಗಾ ಇಡಲಾಗಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಸ್‌.ಚಿದಂಬರ ‘ಪ್ರಜಾವಾಣಿ’ಗೆ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.