ಚಾಮರಾಜನಗರ: ಚಾಮರಾಜನಗರ ಹಾಗೂ ಯಳಂದೂರು ಪಟ್ಟಣ ಠಾಣೆಯಲ್ಲಿ ದಾಖಲಾಗಿದ್ದ ಚಿನ್ನಾಭರಣ, ನಗದು ಹಾಗೂ ವಾಹನಗಳ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ 9 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು 86 ಗ್ರಾಂ ಚಿನ್ನಾಭರಣ, 10 ಬೈಕ್, ಎರಡು ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ.ಕವಿತಾ ಶನಿವಾರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪ್ರಕರಣ 1: ಜುಲೈ 20ರಂದು ಚಾಮರಾಜನಗರದ ಸೋಮವಾರ ಪೇಟೆಯಲ್ಲಿರುವ ಮಾದಲಾಂಬಿಕೆ ಅವರ ಮನೆಯಲ್ಲಿ 46 ಗ್ರಾಂ ಚಿನ್ನಾಭರಣ ₹1 ಲಕ್ಷ ನಗದು ಕಳವು ಮಾಡಲಾಗಿತ್ತು. ಈ ಸಂಬಂಧ ನಗರದ ಇಲಿಯಾಸ್ ನಗರದ ಅರ್ಫಾಜ್ ಖಾನ್ ಎಂಬಾತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ 43 ಗ್ರಾಂ ಚಿನ್ನ, ಬೈಕ್ ಹಾಗೂ ಮೊಬೈಲ್ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಕರಣ 2: ಆ.28ರಂದು ನಗದ ಬಸವರೇಶ್ವರ ಜ್ಯುವೆಲ್ಲರ್ಸ್‌ನಲ್ಲಿ ಮಹಿಳೆಯೊಬ್ಬರು ಆಭರಣ ಖರೀದಿಸುವ ಸೋಗಿನಲ್ಲಿ 8 ಗ್ರಾಂ ಚೈನ್ 2 ಗ್ರಾಂ ಚಿನ್ನದ ಗುಂಡುಗಳನ್ನು ಕಳವು ಮಾಡಿ ಪರಾರಿಯಾಗಿದ್ದರು. ಘಟನೆ ಸಂಬಂಧ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಮೈಸೂರು ನಗರದ ಕೆ.ಜಿ ಕೊಪ್ಪಲಿನ ಮಹಿಳೆ ಲೀಲಾ ಎಂಬಾಕೆಯನ್ನು ಬಂಧಿಸಿ 10 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಪ್ರಕರಣ 3: ಆ.27ರಂದು ನಗರದ ಸೋಮವಾರ ಪೇಟೆಯ ಸತ್ತಿ ರಸ್ತೆಯಲ್ಲಿ ಮನೆಯ ಮುಂಭಾಗ ನಿಲ್ಲಿಸಿದ್ದ ಎರಡು ಕಾರುಗಳನ್ನು ಕಳವು ಮಾಡಿದ ಪ್ರಕರಣದಲ್ಲಿ ತಾಲ್ಲೂಕಿನ ಚಂದಕವಾಡಿ ಗ್ರಾಮದ ರಾಚಪ್ಪಾಜಿ ಹಾಗೂ ತಮಿಳುನಾಡಿನ ಶಿವಕಾಶಿಯ ರಾಬರ್ಟ್‌ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಕಾರು ಹಾಗೂ ಬೈಕ್‌ಗಳನ್ನು ಕಳವು ಮಾಡಿರುವುದು ದೃಢಪಟ್ಟಿದ್ದು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣ 4: ಸೆ.8ರಂದು ನಗರದ ಅಂಬೇಡ್ಕರ್ ಪಾರ್ಕ್ ಹತ್ತಿರದ ಮನೆಯೊಂದರಲ್ಲಿ 30 ಗ್ರಾಂ ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿದ್ದ ಯಳಂತೂರು ಪಟ್ಟಣದ ಸೊಪ್ಪಿನಕೇರಿಯ ಹರೀಶ್ ಎಂಬಾತನನ್ನು ಬಂಧಿಸಿ ಚಿನ್ನಾಭರಣ ಹಾಗೂ ₹ 1.50 ಲಕ್ಷ ನಗದು ಜಪ್ತಿ ಮಾಡಲಾಗಿದೆ.
ಸರಣಿ ಬೈಕ್ ಕಳವು:
ಯಳಂದೂರು ಪಟ್ಟಣದ ಬಳೇಪೇಟೆ ಗಾಣಿಗರ ಬೀದಿಯಲ್ಲಿ ಐಕ್ ಕಳವು ಪ್ರಕರಣ ಸಂಬಂಧ ಬನ್ನೂರು ಹೋಬಳಿಯ ಬಿ.ಬೆಟ್ಟಹಳ್ಳಿಯ ಮದನ್, ಕೆ.ಆರ್.ನಗರ ತಾಲ್ಲೂಕಿನ ಗಂಧನಹಳ್ಳಿಯ ಅರ್ಜುನ, ಟಿ.ನರಸೀಪುರ ತಾಲ್ಲೂಕಿನ ಆಲಗೂಡಿನ ಪ್ರವೀಣ, ನಂಜನಗೂಡು ತಾಲ್ಲೂಕಿನ ಎಡತಲೆ ಗ್ರಾಮದ ಕಾರ್ತಿಕ್ ಎಂಬುವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಸರಣಿ ವಾಹನಗಳ ಕಳವು ಬೆಳಕಿಗೆ ಬಂತು. ಆರೋಪಿಗಳಿಂದ ₹7 ಲಕ್ಷ ಮೌಲ್ಯದ 8 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್‌ಪಿ ಕವಿತಾ ವಿವರ ನೀಡಿದರು.
ಐದು ಪ್ರಕರಣಗಳನ್ನು ಭೇದಿಸುವಲ್ಲಿ ಚಾಮರಾಜನಗರ ಪಟ್ಟಣ ಠಾಣೆಯ ಇನ್‌ಸ್ಪೆಕ್ಟರ್ ಶ್ರೀಕಾಂತ್, ಸೆನ್ ಠಾಣೆ ಇನ್‌ಸ್ಪೆಕ್ಟರ್ ಸಾಗರ್, ನಗರ ಠಾಣೆಯ ಪಿಎಸ್‌ಐ ಮಂಜುನಾಥ್, ಯಳಂದೂರು ಪಿಎಸ್‌ಐ ಆಕಾಶ್, ಹೆಡ್‌ಕಾನ್‌ಸ್ಟೆಬಲ್‌ಗಳಾದ ಲೋಕೇಶ್, ಚಿನ್ನಸ್ವಾಮಿ, ಕಾನ್‌ಸ್ಟೆಬಲ್‌ಗಳಾದ ಮೋಹನ್ ಕುಮಾರ್, ಮಹದೇವ, ನಿಂಗರಾಜು, ಸಿಬ್ಬಂದಿ ಜಗದೀಶ್, ವೆಂಕಟೇಶ್, ಶಂಕರರಾಜ್, ರಾಮಶೆಟ್ಟಿ, ಜಡೇಸ್ವಾಮಿ, ಪ್ರಮೋದ್ , ನಂಜುಂಡಸ್ವಾಮಿ, ಅಭಿಷೇಕ್, ರಂಗಸ್ವಾಮಿ, ಶಶಿಕುಮಾರ್, ವಾಸುದೇವ, ನಾರಾಯಣ ಇದ್ದರು.
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಎಸ್‌ಪಿ ಶಶಿಶರ್, ನಗರ ಡಿವೈಎಸ್‌ಪಿ ಲಕ್ಷ್ಮಯ್ಯ, ಕೊಳ್ಳೇಗಾಲ ಡಿವೈಎಸ್‌ಪಿ ಧರ್ಮೇಂದ್ರ ಇದ್ದರು.
- ‘ಮನೆ ಮನೆ ಪೊಲೀಸ್’ಗೆ ಉತ್ತಮ ಸ್ಪಂದನೆ
ಮನೆ ಮನೆ ಪೊಲೀಸ್ ಕಾರ್ಯಕ್ರಮಕ್ಕೆ ನಾಗರಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಹಿಂದೆ ಪ್ರತಿ ತಿಂಗಳು 700 ರಿಂದ 800 ದೂರುಗಳು ದಾಖಲಾಗುತ್ತಿತ್ತು. ಪ್ರಸ್ತುತ 1000ಕ್ಕಿಂತ ಹೆಚ್ಚಾಗಿದೆ. ನಗರದಲ್ಲಿ ಅಪ್ರಾಪ್ತರ ವಾಹನ ಚಾಲನೆ ಹೆಚ್ಚಾಗಿದ್ದು ಪೋಷಕರು ಮಕ್ಕಳಿಗೆ ವಾಹನಗಳನ್ನು ನೀಡಿದರೆ ದಂಡದ ಜತೆ ಕಾನೂನು ಕ್ರಮ ಜರುಗಿಸಲಾಗುವುದು ವೀಲಿಂಗ್ ಮಾಡುವವರಿಗೂ ಬಿಸಿ ಮುಟ್ಟಿಸಲಾಗುವುದು ಎಂದು ಎಸ್‌ಪಿ ಕವಿತಾ ಹೇಳಿದರು.
- ‘ವೈಯಕ್ತಿಕ ಹಿತಾಸಕ್ತಿ’
ಜಿಲ್ಲೆಯಲ್ಲಿ ಜೂಜಾಟ ಪ್ರಕರಣಗಳು ಹೆಚ್ಚಾಗಿದ್ದರೂ ಕ್ರಮ ಕೈಗೊಳ್ಳುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಬಿಜೆಪಿ ಮುಖಂಡರೊಬ್ಬರ ಆರೋಪದ ಹಿಂದೆ ವೈಯಕ್ತಿಕ ಹಿತಾಸಕ್ತಿ ಇದೆ. ಗಣೇಶೋತ್ಸವ ಸಂದರ್ಭ ಅಹಿತಕರ ಘಟನೆಗಳು ನಡೆಯದಂತೆ ನೋಟಿಸ್ ನೀಡಿದ್ದಕ್ಕೆ ಆರೋಪ ಮಾಡಿದ್ದಾರೆ. ಅಕ್ರಮ ಜೂಜಾಟ ಸಂಬಂಧ 2024ರಲ್ಲಿ 114 ಪ್ರಕರಣ ದಾಖಲಿಸಲಾಗಿತ್ತು. 2025ರ ಆಗಸ್ಟ್ ಅಂತ್ಯದವರೆಗೆ 125 ಪ್ರಕರಣ ದಾಖಲಿಸಲಾಗಿದೆ. ಜೂಜಾಟ ಸಂಬಂಧ ಪೊಲೀಸ್ ಇಲಾಖೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುತ್ತಿದೆ ಕ್ಲಬ್‌ಗಳಲ್ಲಿ ಅನಧಿಕೃತವಾಗಿ ಜೂಜಾಡುವುದು ಕಂಡುಬಂದರೆ ಕ್ರಮ ಜರುಗಿಸಲಾಗುವುದು ಎಂದು ಎಸ್‌ಪಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.