ಕೊಳ್ಳೇಗಾಲ: ತಾಲ್ಲೂಕಿನ ಗುಂಡಾಲ್ ಜಲಾಶಯದ ಅಚ್ಚುಕಟ್ಟು ವ್ಯಾಪ್ತಿಯ ಜಮೀನಿನಲ್ಲಿ ಕಾಡು ಪ್ರಾಣಿಗಳು ದಾಳಿ ನಡೆಸಿ ಲಕ್ಷಾಂತರ ರೂಪಾಯಿ ಮೌಲ್ಯದ ಭತ್ತದ ಫಸಲನ್ನು ಬುಧವಾರ ರಾತ್ರಿ ನಾಶ ಮಾಡಿವೆ.
ತಾಲ್ಲೂಕಿನ ದೊಡ್ಡಿಂದುವಾಡಿ ಗ್ರಾಮದ ಸಣ್ಣಮ್ಮ ಅವರು ಗುಂಡಾಲ್ ಜಲಾಶಯದ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಒಂದು ಎಕರೆ ಜಮೀನಿನಲ್ಲಿ ಬೆಳೆದಿದ್ದ ಭತ್ತದ ಫಸಲನ್ನು ಕಾಡು ಪ್ರಾಣಿಗಳು(ಕಾಡು ಹಂದಿ- ಜಿಂಕೆಗಳು) ನುಗ್ಗಿ ಸಂಪೂರ್ಣ ನಾಶಪಡಿಸಿವೆ.
‘ಸಾಲ ಮಾಡಿ ಪ್ರತಿ ವರ್ಷ ಭತ್ತ ಬೆಳೆಯುತ್ತೇವೆ. ಆದರೆ, ಈ ಕಾಡು ಪ್ರಾಣಿಗಳು ನಮ್ಮ ಫಸಲನ್ನು ನಾಶಪಡಿಸುತ್ತಿವೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಬೆಳೆ ನಷ್ಟವಾಗಿರುವ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿ, ಸೂಕ್ತ ಪರಿಹಾರ ಒದಗಿಸಬೇಕು. ಇಲ್ಲದಿದ್ದರೆ ನಮಗೆ ಆತ್ಮಹತ್ಯೆಯೊಂದೇ ದಾರಿ’ ಎಂದು ರೈತ ಮಹಿಳೆ ಸಣ್ಣಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.
ಗುಂಡಾಲ್ ವ್ಯಾಪ್ತಿಯಲ್ಲಿ ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದರೂ ಅರಣ್ಯ ಅಧಿಕಾರಿಗಳು ಇದನ್ನು ತಡೆಗಟ್ಟಲು ಕ್ರಮಕೈಗೊಳ್ಳುತ್ತಿಲ್ಲ. ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟಬೇಕು. ಬೆಳೆ ನಷ್ಟವಾಗಿರುವ ರೈತರಿಗೆ ಪರಿಹಾರ ಕೊಡಬೇಕು. ಇಲ್ಲವಾದಲ್ಲಿ ರೈತ ಸಂಘದ ವತಿಯಿಂದ ಹೋರಾಟ ನಡೆಸಬೇಕಾಗುತ್ತದೆ ಎಂದು ರೈತ ಸಂಘದ ಅಧ್ಯಕ್ಷ ಮಾದೇಶ್ ಹಾಗೂ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.