ADVERTISEMENT

ಗುಂಡ್ಲುಪೇಟೆ: ಬಾರದ ಮಳೆ; ಒಣಗುತ್ತಿದೆ ಬೆಳೆ

ಗುಂಡ್ಲುಪೇಟೆ: ವಾರದಿಂದ ತಾಪಮಾನ ಗಣನೀಯ ಏರಿಕೆ, ರೈತರಿಗೆ ನಷ್ಟದ ಆತಂಕ

ಮಲ್ಲೇಶ ಎಂ.
Published 19 ಮೇ 2023, 23:54 IST
Last Updated 19 ಮೇ 2023, 23:54 IST
ಗುಂಡ್ಲುಪೇಟೆ ತಾಲ್ಲೂಕಿನ ಚಿಕ್ಕಾಟಿ ಗ್ರಾಮದಲ್ಲಿ ಮಳೆಯಿಲ್ಲದೆ ಒಣಗುತ್ತಿರುವ ಬೆಳೆ
ಗುಂಡ್ಲುಪೇಟೆ ತಾಲ್ಲೂಕಿನ ಚಿಕ್ಕಾಟಿ ಗ್ರಾಮದಲ್ಲಿ ಮಳೆಯಿಲ್ಲದೆ ಒಣಗುತ್ತಿರುವ ಬೆಳೆ   

ಗುಂಡ್ಲುಪೇಟೆ: ವಾರದಿಂದೀಚೆಗೆ ವಾತಾವರಣದ ಉಷ್ಣತೆ ಜಾಸ್ತಿಯಾಗಿರುವುದರಿಂದ, ತಾಲ್ಲೂಕಿನಲ್ಲಿ ಮಳೆಯಾಶ್ರಿತ ಭೂಮಿಯಲ್ಲಿ ಬೆಳೆಯಲಾಗಿರುವ ಬೆಳೆಗಳು ಒಣಗುವ ಸ್ಥಿತಿಗೆ ಬಂದಿವೆ.

ವಾರಕ್ಕೂ ಮೊದಲು ಎರಡು ಮೂರು ಬಾರಿ ಮಳೆಯಾಗಿತ್ತು. ಇದರಿಂದಾಗಿ ಮಳೆ ನಂಬಿ ಬೇಸಾಯ ಮಾಡುವ ರೈತರು ಚೆಂಡು ಹೂ, ಅಲಸಂದೆ, ಜೋಳ, ಸೂರ್ಯಕಾಂತಿ, ಕಡಲೆಕಾಯಿ, ಅವರೆಕಾಯಿ, ಹತ್ತಿ ಮುಂತಾದ ಬೆಳೆಗಳನ್ನು ಬಿತ್ತನೆ ಮಾಡಿದ್ದರು. 

ವಾರದಿಂದೀಚೆಗೆ ತಾಲ್ಲೂಕಿನಲ್ಲಿ ಮಳೆಯಾಗಿಲ್ಲ. ಬಿಸಿಲ ಝಳ ಹೆಚ್ಚಾಗಿದೆ. ಇದರಿಂದ ಪೈರುಗಳೆಲ್ಲಾ ಒಣಗುವ ಸ್ಥಿತಿಗೆ ಬಂದಿದೆ. ಎರಡು ಮೂರು ದಿನದಲ್ಲಿ ಮಳೆಯಾಗದಿದ್ದರೆ, ಬೆಳೆ ಕೈಸೇರುವುದು ಅನುಮಾನ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ. 

ADVERTISEMENT

ಸಾಲ ಮಾಡಿ ಕೃಷಿ ಮಾಡಿರುವ ರೈತರು ಮಳೆಗೆ ಎದುರು ನೋಡುತ್ತಿದ್ದಾರೆ.

‘ಮಳೆಯನ್ನೇ ನಂಬಿ ಚೆಂಡು ಮತ್ತು ಅಲಸಂದೆ ಬಿತ್ತನೆ ಮಾಡಿದ್ದೇವೆ. ಬಿತ್ತನೆ ಮಾಡಿದ ನಂತರ ಮಳೆಯಾಗಿಲ್ಲ’ ಎಂದು ತಾಲ್ಲೂಕಿನ ಮೇಲುಕಾಮನಹಳ್ಳಿ ಬಳಿಯಲ್ಲಿ ಕೃಷಿ ಮಾಡಿರುವ ರೈತರು ಅಸಹಾಯಕತೆ ತೋಡಿಕೊಂಡರು.

‘ಮಳೆ ಇದ್ದಕ್ಕಿಂದ್ದಂತೆ ಹೆಚ್ಚಾಗಿತ್ತು. ಒಂಬತ್ತು ದಿನಗಳಿಂದ ಮಳೆಯಾಗಿಲ್ಲ. ಈಗ ಬೆಳೆಗಳಿಗೆ ನೀರಿನ ಅವಶ್ಯಕತೆ ಇದೆ. ಮಳೆ ಬಾರದಿದ್ದರೆ ತೊಂದರೆ ಹೆಚ್ಚು’ ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ರಾಜು ‘ಪ್ರಜಾವಾಣಿ’ಗೆ ತಿಳಿಸಿದರು. 

‘ತೆರಕಣಾಂಬಿ ಭಾಗದಲ್ಲಿ 10 ದಿನದ ಹಿಂದೆ ಜೋರು ಮಳೆಯಾಗಿ ವಿದ್ಯುತ್ ಕಂಬಗಳಿಗೆ ಸಮಸ್ಯೆ ಆಗಿತ್ತು. ಇದರಿಂದಾಗಿ ವಾರದವರೆಗೆ ವಿದ್ಯುತ್ ಇಲ್ಲವಾದ್ದರಿಂದ ಆ ಭಾಗದಲ್ಲಿ ಕೃಷಿಗೆ ನೀರಿನ ತೊಂದರೆಯಾಗಿತ್ತು’ ಎಂದು ಅವರು ಮಾಹಿತಿ ನೀಡಿದರು. 

ಮಳೆಗಾಲದಲ್ಲಿ ಸರಿಯಾದ ಸಮಯದಲ್ಲಿ ಮಳೆಯಾಗುತ್ತದೆ ಎಂಬ ನಿರೀಕ್ಷೆಯಲ್ಲಿ ಅನೇಕ ರೈತರು ಬೆಳೆ ಬೆಳೆಯುವ ಆಸಕ್ತಿಯಿಂದ ಕೃಷಿ ಮಾಡುತ್ತಾರೆ. ಗೋಪಾಲಸ್ವಾಮಿ ಬೆಟ್ಟದ ತಪ್ಪಲು, ಹಗ್ಗದಹಳ್ಳ, ಮಂಗಲ, ಜಕ್ಕಹಳ್ಳಿ, ಮೇಲುಕಾಮನಹಳ್ಳಿ, ಬೇರಂಬಾಡಿ, ಹೊಂಗಹಳ್ಳಿ, ಚೆನ್ನಮಲ್ಲಿಪುರ, ಕೂತನೂರು, ಭೀಮನಬೀಡು ಸೇರಿದಂತೆ ಹಲವು ಗ್ರಾಮಗಳಲ್ಲಿ ಅನೇಕ ರೈತರು ಕೃಷಿಗೆ ಮಳೆಯನ್ನೇ ನಂಬಿದ್ದಾರೆ. 

ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಜಮೀನಿನಲ್ಲಿ ಚೆಂಡು ಹೂವು ಬೆಳೆದು ಪ್ರವಾಸಿಗರನ್ನು ಆಕರ್ಷಣೆ ಮಾಡಿ ಒಂದಿಷ್ಟು ಹಣ ನೋಡುವ ಕನಸು ಕಂಡಿರುವ ರೈತರಿಗೆ ಮುಂಗಾರುಪೂರ್ವ ಮಳೆಯಾಗದಿರುವುದರಿಂದ ತೊಂದರೆಯಾಗಿದೆ.

9 ದಿನಗಳಿಂದ ಬಾರದ ಮಳೆ 4 ದಿನಗಳಿಂದ ಉಷ್ಣತೆ ಹೆಚ್ಚಳ ಬೆಳೆಗಳಿಗೆ ತುರ್ತಾಗಿ ಬೇಕಿದೆ ನೀರು

‘ಬರಪೀಡಿತ ಎಂದು ಘೋಷಿಸಿ’ ‘ತಾಲ್ಲೂಕಿಗೆ ಈ ವರ್ಷ ಮುಂಗಾರುಪೂರ್ವ ಮಳೆಯಾಗಿಲ್ಲ ಮತ್ತು ಕಳೆದ ವರ್ಷವೂ ಸರಿಯಾದ ಪ್ರಮಾಣದಲ್ಲಿ ಮಳೆಯಾಗಿಲ್ಲ. ಮಳೆ ನಂಬಿ ಕೃಷಿ ಮಾಡಿದ್ದ ಹಲವಾರು ರೈತರು ಸಾಲಗಾರರಾಗಿದ್ದಾರೆ. ಆರಂಭದಲ್ಲಿ ಉತ್ತಮ ಮಳೆಯಾಗಿ ತದನಂತರ ಮಳೆ ಕೈ ಕೊಡುತ್ತಿದೆ. ಇದರಿಂದಾಗಿ ಬೆಜ್ಜಲು ಭೂಮಿಯಲ್ಲಿ ಬೆಳೆದ ಬೆಳೆಗಳೆಲ್ಲಾ ನಾಶವಾಗಿವೆ. ಆದರೆ ಕೃಷಿ ಇಲಾಖೆಯ ಅಧಿಕಾರಿಗಳು ಬೆಳೆ ಕುಂಠಿತ ಎಂದು ವರದಿ ನೀಡಿದ್ದಾರೆ. ತಾಲ್ಲೂಕನ್ನು ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕು’ ಎಂದು ರೈತ ಮಗುವಿನಹಳ್ಳಿ ಚಿನ್ನಸ್ವಾಮಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.