ADVERTISEMENT

‘ಸಂಸ್ಕೃತಿ ಉಳಿಸಲು ಯುವಜನರು ಮುಂದಾಗಿ’: ಎ.ಇ.ರಘು

ಗುರುವಂದನಾ ಕಾರ್ಯಕ್ರಮದಲ್ಲಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ರಘು ಸಲಹೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 2:16 IST
Last Updated 22 ಜುಲೈ 2025, 2:16 IST
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನಿಂದ ಮಲೆ ಮಹದೇಶ್ವರಬೆಟ್ಟದ ಸಾಲೂರು ಮಠ ಆವರಣದಲ್ಲಿ ಈಚೆಗೆ ಆಯೋಜಿಸಿದ್ದ ಮಲೆ ಮಹದೇಶ್ವರ ದತ್ತಿ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಮಲೆ ಮಹದೇಶ್ವರಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು ಉದ್ಘಾಟಿಸಿದರು
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನಿಂದ ಮಲೆ ಮಹದೇಶ್ವರಬೆಟ್ಟದ ಸಾಲೂರು ಮಠ ಆವರಣದಲ್ಲಿ ಈಚೆಗೆ ಆಯೋಜಿಸಿದ್ದ ಮಲೆ ಮಹದೇಶ್ವರ ದತ್ತಿ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಮಲೆ ಮಹದೇಶ್ವರಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು ಉದ್ಘಾಟಿಸಿದರು   

ಮಹದೇಶ್ವರ ಬೆಟ್ಟ: ‘ನಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ಪಾಲಿಸಿ ಉಳಿಸಿ ಬೆಳೆಸಿಕೊಂಡು ಹೋಗುವ ಹೊಣೆಗಾರಿಕೆ ಯುವಜನತೆಯ ಮೇಲಿದೆ’ ಎಂದು ಮಲೆ ಮಹದೇಶ್ವರಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು ಹೇಳಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನಿಂದ ಈಚೆಗೆ ಮಲೆ ಮಹದೇಶ್ವರಬೆಟ್ಟದ ಸಾಲೂರು ಮಠದ ಆವರಣದಲ್ಲಿ ಆಯೋಜಿಸಲಾಗಿದ್ದ ಮಲೆ ಮಹದೇಶ್ವರ ದತ್ತಿ ಹಾಗೂ ಸಾಲೂರು ಮಠದ ಪಟ್ಟದ ಗುರುಸ್ವಾಮಿಗಳ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಆಧುನಿಕತೆಯ ಭರಾಟೆಯಲ್ಲಿ ಪಾಶ್ಚಾತ್ಯ ಸಂಸ್ಕೃತಿಯೆಡೆಗೆ ಎಲ್ಲರೂ ಆಕರ್ಷಿತರಾಗುತ್ತಿದ್ದಾರೆ’ ಎಂದರು.

‘ಸ್ಥಳೀಯ ಸಂಸ್ಕೃತಿ, ಭಾಷೆ, ಆಚಾರ, ವಿಚಾರಗಳು ಕಡೆಗಣನೆಗೆ ಒಳಪಡುತ್ತಿರುವುದು ಸಮಾಜಕ್ಕೆ ಮಾರಕವಾಗಲಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಎಲ್ಲರೂ ಸ್ವಂತತನ ಮೈಗೂಡಿಕೊಳ್ಳಬೇಕು. ಪರಿಷತ್ತು ದಾನಿಗಳ ಸಹಾಯದಿಂದ ದತ್ತಿಗಳನ್ನು ಸ್ಥಾಪಿಸಿ ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸುತ್ತಿರುವ ಕಾರ್ಯ ಶ್ಲಾಘನೀಯ’ ಎಂದರು.

ADVERTISEMENT

ನಟ ನಾಗಭೂಷಣ್ ಮಾತನಾಡಿ, ‘ಈ ನೆಲದ ಮಹಾಪುರುಷ ಮಲೆ ಮಹದೇಶ್ವರರು ಎಲ್ಲರಿಗೂ ಆದರ್ಶವಾಗಲಿ. ಯುವಕರು ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಜೀವನದಲ್ಲಿ ಸ್ಪಷ್ಟವಾದ ಗುರಿಯೊಂದಿಗೆ ಸಾಧನೆ ಮಾಡಬೇಕು. ಸಂಸ್ಕೃತಿಯನ್ನು ಉಳಿಸಲು ನಮ್ಮತನ ಕಾಪಾಡಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಸಾಹಿತಿ ಸ್ವಾಮಿ ಪೊನ್ನಾಚಿ ಮಾತನಾಡಿ, ‘ಮೌಢ್ಯದ ಕತ್ತಲಲ್ಲಿದ್ದ ಜನತೆಯಲ್ಲಿ ಜಾಗೃತಿ ಮೂಡಿಸಿ ಬದುಕು ಬದಲಾಯಿಸಿದ ಮಲೆ ಮಹದೇಶ್ವರರು ಲಕ್ಷಾಂತರ ಜನರ ಆರಾಧ್ಯ ಧೈವವಾಗಿದ್ದಾರೆ. ಸಾಲೂರು ಪಟ್ಟದ ಮಠದ ಗುರುಸ್ವಾಮೀಜಿ ಈ ಭಾಗದಲ್ಲಿ ಶಾಲೆಗಳನ್ನು ತೆರೆದು ಶಿಕ್ಷಣ ದಾಸೋಹ ನೀಡಿ ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ದುಗ್ಗಟ್ಟಿ ಮಲ್ಲಿಕಾರ್ಜುನಸ್ವಾಮಿ ಮಾತನಾಡಿ, ಪರಿಷತ್ ವತಿಯಿಂದ ಜಿಲ್ಲೆಯಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು, 32 ದತ್ತಿಗಳನ್ನು ಸ್ಥಾಪಿಸಿ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಬಿ.ಕೆ.ರವಿಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸುತ್ತೂರು ಮಠದ ರಾಜೇಂದ್ರ ಸ್ವಾಮೀಜಿ ಸ್ಥಾಪಿಸಿದ ಶರಣ ಸಾಹಿತ್ಯ ಪರಿಷತ್, ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಮಾರ್ಗದರ್ಶನದಲ್ಲಿ ರಾಜ್ಯ, ದೇಶ ಹಾಗೂ ವಿದೇಶಗಳಲ್ಲೂ ಪಸರಿಸಿದ್ದು ಸಮಾಜ ಸುಧಾರಣೆ, ವಚನ ಸಾಹಿತ್ಯ, ಧರ್ಮ ಚಿಂತನೆಗಳನ್ನು ಪ್ರಚುರಪಡಿಸುತ್ತಿದೆ ಎಂದರು.

ಇದೇ ಸಂದರ್ಭ ಸಾಲೂರು ಮಠ ಮತ್ತು ಶಿಕ್ಷಣ ಸಂಸ್ಥೆಗಳ ವತಿಯಿಂದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿಗೆ ಲಿಂಗೈಕ್ಯ ಪಟ್ಟದ ಗುರುಸ್ವಾಮೀಜಿ ಹೆಸರಲ್ಲಿ ದತ್ತಿ ಸ್ಥಾಪನೆ ಮಾಡಿ 25,000 ದತ್ತಿ ಮೊತ್ತ ನೀಡಲಾಯಿತು.

ದತ್ತಿ ದಾನಿಗಳಾದ ಚಾಮರಾಜನಗರ ಎಂ. ವಿಶ್ವನಾಥ್ ಅವರನ್ನು ಗೌರವಿಸಲಾಯಿತು. ಸಾಲೂರು ಮಠದ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಪ್ರಾಂಶುಪಾಲ ಮಹದೇವಸ್ವಾಮಿ ಪ್ರಭು ವಂದಿಸಿದರು. ಮಹದೇಶ್ವರ ಬೆಟ್ಟದ ಬೇಡಗಂಪಣ ಸಮುದಾಯದ ಮುಖಂಡರು, ಭಕ್ತರು, ವಿದ್ಯಾರ್ಥಿಗಳು ಹಾಜರಿದ್ದರು.

ಮಲೆ ಮಹದೇಶ್ವರರ ಪ್ರೇರಣೆ:

ಮಲೆ ಮಹದೇಶ್ವರರ ಸಾಮಾಜಿಕ ಕ್ರಾಂತಿ ಹಾಗೂ ಬದಲಾವಣೆಯು ಸ್ಪೂರ್ತಿದಾಯಕ ಹಾಗೂ ಪ್ರೇರಣದಾಯಕವಾಗಿದ್ದು  ಅವರ ಆದರ್ಶವನ್ನೇ ಸಾಲೂರು ಮಠದ ಪಟ್ಟದ ಗುರುಸ್ವಾಮಿಗಳು ಅನುಸರಿಸಿ ಮಠವನ್ನು ಕಟ್ಟಿ ಬೆಳೆಸಿದ್ದಾರೆ. ಈ ಭಾಗದಲ್ಲಿ ಶಿಕ್ಷಣ ದಾಸೋಹಕ್ಕೆ ಒತ್ತು ನೀಡಿ ಜನತೆಯಲ್ಲಿ ಅಕ್ಷರದ ಬೀಜ ಬಿತ್ತಿದ್ದಾರೆ ಎಂದು ಸಾಲೂರು ಮಠದ ಶಾಂತಮಲ್ಲಿಕಾರ್ಜುನಸ್ವಾಮಿ ಸ್ಮರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.