ADVERTISEMENT

ಮಹದೇಶ್ವರ ಬೆಟ್ಟ: ಮಳೆರಾಯನ ಕಾಟ, ಪೊಲೀಸರ ಕಿರಿಕಿರಿ, ರಂಗ ಮಂದಿರ ಖಾಲಿ ಖಾಲಿ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2020, 15:19 IST
Last Updated 26 ನವೆಂಬರ್ 2020, 15:19 IST
ಕಾರ್ಯಕ್ರಮ ಆರಂಭವಾಗಿದ್ದರೂ ಸಭಿಕರು ಬಾರದೇ ಇದ್ದುದರಿಂದ ರಂಗ ಮಂದಿರ ಖಾಲಿ ಖಾಲಿಯಾಗಿತ್ತು
ಕಾರ್ಯಕ್ರಮ ಆರಂಭವಾಗಿದ್ದರೂ ಸಭಿಕರು ಬಾರದೇ ಇದ್ದುದರಿಂದ ರಂಗ ಮಂದಿರ ಖಾಲಿ ಖಾಲಿಯಾಗಿತ್ತು   

ಮಹದೇಶ್ವರ ಬೆಟ್ಟ: ಚೆನ್ನೈ ಕರಾವಳಿಗೆ ಅಪ್ಪಳಿಸಿರುವ ‘ನಿವಾರ್‌’ ಚಂಡಮಾರುತದ ಕಾರಣದಿಂದಾಗಿ ಗಡಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಗುರುವಾರ ಮಳೆಯಾಯಿತು.

ಮಹದೇಶ್ವರ ಬೆಟ್ಟದಲ್ಲಿ ಬೆಳಿಗ್ಗೆಯಿಂದಲೂ ಜಿಟಿ ಜಿಟಿ ಮಳೆಯಾಗಿದ್ದರಿಂದ ಭಕ್ತರಿಗೆ, ಗಣ್ಯರಿಗೆ ತೊಂದರೆಯಾಯಿತು. ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮ ಮುಗಿಯುವವರೆಗೂ ಮಳೆಯಾಗುತ್ತಲೇ ಇತ್ತು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಬೆಳಿಗ್ಗೆ ದೇವರ ದರ್ಶನ ಪಡೆಯಲು ಬಂದಾಗಲೂ ಮಳೆ ಸುರಿಯುತ್ತಿತ್ತು. ರಕ್ಷಣೆ ಪಡೆಯಲು ಛತ್ರಿಯ ಮೊರೆ ಹೋದರು. ಮುಖ್ಯಮಂತ್ರಿ ಹಾಗೂ ಗಣ್ಯರು ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಹಾಗಾಗಿ ಮಳೆಯಲ್ಲಿ ನೆನೆದುಕೊಂಡು ಹಾಗೂ ಸಿಕ್ಕ ಸಿಕ್ಕಲ್ಲಿ ರಕ್ಷಣೆ ಪಡೆದು ಸರತಿಗಾಗಿ ಕಾದರು.

ADVERTISEMENT

ಕೋವಿಡ್‌–19 ಮುಂಜಾಗ್ರತಾ ನಿಯಮಗಳನ್ನು ಪಾಲಿಸಬೇಕಾದ ಕಾರಣಕ್ಕೆ ಆರಂಭದಲ್ಲಿ 200 ಮಂದಿಗೆ ಮಾತ್ರ ಆಹ್ವಾನ ಎಂದು ಹೇಳಲಾಗಿತ್ತು. ಆದರೆ, ನಂತರ ಬೆಟ್ಟದ ರಂಗ ಮಂದಿರದಲ್ಲಿ ಸಾಕಷ್ಟು ಸ್ಥಳಾವಕಾಶ ಇರುವುದರಿಂದ ಈ ಮಿತಿಯನ್ನು ತೆಗೆದು ಹಾಕಲಾಗಿತ್ತು. ಗಣ್ಯರಿಗೆ, ಸಾರ್ವಜನಿಕರಿಗಾಗಿ ಎಲ್ಲರಿಗೂ ವೈಯಕ್ತಿಕ ಅಂತರ ಕಾಪಾಡಿಕೊಳ್ಳುವಷ್ಟು ಜಾಗ ಇರಿಸಿ ಕುರ್ಚಿಗಳನ್ನು ಹಾಕಲಾಗಿತ್ತು. ಇಡೀ ರಂಗ ಮಂದಿರಕ್ಕೆ ಒಂದೇ ಪ್ರವೇಶದ್ವಾರವನ್ನು ಇಡಲಾಗಿತ್ತು.

ಥರ್ಮಲ್‌ ಸ್ಕ್ಯಾನರ್‌, ಸ್ಯಾನಿಟೈಸರ್‌ ಎಲ್ಲ ವ್ಯವಸ್ಥೆ ಮಾಡಲಾಗಿತ್ತು. ರಂಗ ಮಂದಿರಕ್ಕೆ ಪ್ರವೇಶಿಸಲು ಪಾಸ್‌ ಹೊಂದಿರುವುದು ಕಡ್ಡಾಯ ಮಾಡಲಾಗಿತ್ತು. ಮಾಧ್ಯಮದವರು, ಕರ್ತವ್ಯ ನಿರತ ಸಿಬ್ಬಂದಿ ಪಾಸ್‌ ಹೊಂದಿದ್ದರು. ಸ್ಥಳೀಯರು ಹಾಗೂ ಭಕ್ತರ ಬಳಿ ಪಾಸ್‌ ಇರಲಿಲ್ಲ. ಮಳೆಯಿಂದ ರಕ್ಷಣೆ ಪಡೆಯಲು ಕೆಲವರು ರಂಗಮಂದಿರ ಪ್ರವೇಶಿಸಿದರೆ ಪೊಲೀಸರು ಅವರನ್ನು ತಡೆದು, ಗದರಿಸಿ ಹೊರಗಡೆ ಕಳುಹಿಸಿದರು. ಕಾರ್ಯಕ್ರಮ ವೀಕ್ಷಣೆಗೆ ಬಂದ ಸಾರ್ವಜನಿಕರನ್ನು ತಡೆದು ಪಾಸ್‌ ತೋರಿಸಿ ಒಳಗಡೆ ಹೋಗಿ ಎಂದು ಹೇಳುತ್ತಿದ್ದರು. ಪೊಲೀಸರ ಕಿರಿ ಕಿರಿಯಿಂದ ಬೇಸತ್ತ ಜನರು ರಂಗ ಮಂದಿರದ ಒಳಗಡೆ ಬರಲೇ ಇಲ್ಲ.

ಇದರಿಂದಾಗಿ ಹಾಕಿದ್ದ ಕುರ್ಚಿಗಳು ಭರ್ತಿಯಾಗಲೇ ಇಲ್ಲ. ರಂಗ ಮಂದಿರ ಖಾಲಿ ಖಾಲಿಯಾಗಿತ್ತು. ಅಧಿಕಾರಿಗಳು, ಮಾಧ್ಯಮದವರು ಹಾಗೂ ದೂರದಲ್ಲಿ ಕೆಲವೇ ಕೆಲವು ಮಂದಿ ಇದ್ದರು. ಮುಖ್ಯಮಂತ್ರಿ ಹಾಗೂ ಗಣ್ಯರು ವೇದಿಕೆಗೆ ಬಂದರೂ ಸಭಿಕರು ಇರಲಿಲ್ಲ. ಕಾರ್ಯಕ್ರಮ ಆರಂಭವಾದ ನಂತರ ದೂರದಲ್ಲಿರುವವರು ಮುಂದಕ್ಕೆ ಬರಲು ಸೂಚಿಸಲಾಯಿತು. ರಂಗ ಮಂದಿರದ ಹೊರಗಡೆ ಇದ್ದವರನ್ನೂ ಒಳಗಡೆ ಕಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.