
ಚಾಮರಾಜನಗರ: ಹನೂರು ತಾಲ್ಲೂಕು ಬೈರನತ್ತ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ಸ್ಮಶಾನ ದಾರಿಯನ್ನು ಮುಚ್ಚಿದ್ದು, ತೆರವಿಗೆ ಆಗ್ರಹಿಸಿ ಡಾ.ಬಾಬು ಜಗಜೀವನರಾಂ ಸಂಘಟನೆಗಳ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿ ಶ್ರೀರೂಪಾ ಅವರಿಗೆ ಮನವಿ ಸಲ್ಲಿಸಲಾಯಿತು.
‘ಬೈರನತ್ತ ಗ್ರಾಮದ ಡಿ.ಎಂ.ಸಮುದ್ರ ಸರ್ವೆ ನಂಬರ್ 75ರಲ್ಲಿ 1996-97ರಲ್ಲಿ ಸ್ಮಶಾನ ಜಾಗ ಮಂಜೂರು ಮಾಡಲಾಗಿದೆ. ಅಂದಿನಿಂದಲೂ ಸಮುದಾಯದವರು ಶವ ಸಂಸ್ಕಾರ ಮಾಡಿಕೊಂಡು ಬಂದಿದ್ದಾರೆ. ಈಚೆಗೆ ಅಕ್ಕಪಕ್ಕದ ಜಮೀನಿನ ಮಾಲೀಕರು ಸ್ಮಶಾನದ ದಾರಿ ಮುಚ್ಚಿದ್ದಾರೆ. ಇದರಿಂದ ಪರಿಶಿಷ್ಟ ಜಾತಿಯವರು ಮೃತಪಟ್ಟಾಗ ಸ್ಮಶಾನಕ್ಕೆ ಕೊಂಡೊಯ್ಯಲು ಅಡ್ಡಿಯಾಗಿದೆ’ ಎಂದು ಜಿಲ್ಲಾ ಡಾ.ಬಾಬು ಜಗಜೀವನರಾಂ ಸಂಘಟನೆಗಳ ಒಕ್ಕೂಟದ ಮುಖಂಡರು ಆರೋಪಿಸಿದ್ದಾರೆ.
ಮೇಲ್ವರ್ಗಕ್ಕೆ ಸೇರಿದವರು ರಸ್ತೆಯನ್ನು ಅಕ್ರಮವಾಗಿ ಅತಿಕ್ರಮಿಸಿಕೊಂಡು ತೊಂದರೆ ನೀಡುತ್ತಿದ್ದು, ಈ ಸಂಬಂಧ ಹನೂರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರೂ ಸ್ಪಂದನೆ ದೊರೆತಿಲ್ಲ. ಕೊಳ್ಳೇಗಾಲ ಉಪವಿಭಾಗಾಧಿಕಾರಿಗೆ ದೂರು ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ. ಪರಿಶಿಷ್ಟ ಜಾತಿಯ ಸ್ಮಶಾನದ ರಸ್ತೆಯನ್ನು ಆಕ್ರಮಿಸಿಕೊಂಡಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಿಒತ್ತುವರಿಯಾಗಿರುವ ರಸ್ತೆಯನ್ನು ತ್ವರಿತವಾಗಿ ತೆರವುಗೊಳಿಸಬೇಕು’ ಎಂದು ಮುಖಂಡರು ಒತ್ತಾಯಿಸಿದರು.
ಒಕ್ಕೂಟದ ಗೌರವ ಅಧ್ಯಕ್ಷ ಬಸವನಪುರ ರಾಜಶೇಖರ್, ಅಧ್ಯಕ್ಷ ಎಚ್.ಎಚ್.ನಾಗರಾಜು, ಅರುಂಧತಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಅರಕಲವಾಡಿ ಜವರಯ್ಯ, ಸಂಘಟನೆಯ ಕಾರ್ಯದರ್ಶಿ ಶಿವಕುಮಾರ್ ರಾಮಸಮುದ್ರ, ತಾಲ್ಲೂಕು ಅಧ್ಯಕ್ಷ ಕೆಸ್ತೂರು ಮರಪ್ಪ, ಮುಖಂಡರಾದ ವೆಲ್ಡಿಂಗ್ ಲಿಂಗರಾಜು, ರಾಮಣ್ಣ, ಕರವೇ ತಾಲ್ಲೂಕು ಉಪಾಧ್ಯಕ್ಷ ಸುಂದರ್, ಡೈರಿ ಲಿಂಗರಾಜು, ಸೋಮು ಆರ್, ಜಯರಾಜ್, ಲಿಂಗರಾಜು.ಡಿ, ಮಹದೇವಸ್ವಾಮಿ, ಯಜಮಾನ್ ಮಹದೇವಯ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.