ಚಾಮರಾಜನಗರ: ‘ಚಾಮರಾಜನಗರದಲ್ಲಿ ಈ ವರ್ಷ ದಸರಾ ಉತ್ಸವ ಆಚರಿಸುವುದಿಲ್ಲ’ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ವಿರೋಧಿಸಿ ಜಿಲ್ಲಾ ಕಲಾವಿದರ ಒಕ್ಕೂಟದಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರದ ಎದುರು ನೂರಾರು ಕಲಾವಿದರು ಜಮಾಯಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ವೇಷತೊಟ್ಟು ಜನಪದ ನೃತ್ಯ ಪ್ರದರ್ಶಿಸಿ ಸರ್ಕಾರದ ವಿರುದ್ಧ ಸಿಟ್ಟು ಹೊರಹಾಕಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್‌ಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಮಾತನಾಡಿದ ಜನಪದ ಸಾಹಿತಿ ಬಿಸಲವಾಡಿ ಸೋಮಶೇಖರ್, ‘ಚಾಮರಾಜನಗರಕ್ಕೂ ದಸರಾ ಉತ್ಸವಕ್ಕೂ ಸಂಬಂಧವಿಲ್ಲ ಎಂಬ ಮುಖ್ಯಮಂತ್ರಿ ಹೇಳಿಕೆ ಸರಿಯಲ್ಲ. 2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಚಾಮರಾಜನಗರ ದಸರಾ ಉತ್ಸವ ಆರಂಭವಾಗಿದ್ದು, ನಿರಂತರವಾಗಿ ಆಯೋಜಿಸಿಕೊಂಡು ಬರಲಾಗಿದೆ. ಬಿಜೆಪಿ ಅವಧಿಯಲ್ಲೂ ಗ್ರಾಮೀಣ ದಸರಾ ನಡೆದಿದೆ ಎಂದು ತಿಳಿಸಿದರು.
ಹೀಗಿರುವಾಗ ಚಾಮರಾಜಗರದಲ್ಲಿ ದಸರಾ ನಡೆದಿಲ್ಲ, ಅರಸರ ಜೊತೆಗೆ ಸಂಬಂಧವಿಲ್ಲ ಎಂಬ ಮುಖ್ಯಮಂತ್ರಿ ಹೇಳಿಕೆ ಜಿಲ್ಲೆಯ ಜನರಿಗೆ ಹಾಗೂ ಜಾನಪದ ಕಲಾವಿದರಿಗೆ ಅತೀವ ನೋವುಂಟು ಮಾಡಿದೆ. ಚಾಮರಾಜನಗರಕ್ಕೂ ಮೈಸೂರು ಒಡೆಯರಿಗೂ 550 ವರ್ಷಗಳ ಸಂಬಂಧವಿದೆ. ಗಂಗವಾಡಿ, ಹರದನಳ್ಳಿ, ಉಮ್ಮತ್ತೂರು, ಸತ್ತೇಗಾಲ, ತೆರಕಣಾಂಬಿಯಲ್ಲಿ ಅರಸರ ಆಡಳಿತದ ಕುರುಹು ಕಾಣಬಹುದು ಎಂದರು.
ಚಾಮರಾಜ ಒಡೆಯರ್ ಜನಿಸಿದ ಜನನ ಮಂಟಪ ನಗರದಲ್ಲಿದ್ದು, ಸ್ಮಾರಕವಾಗಿ ಘೋಷಿಸಲಾಗಿದೆ. ಚಾಮರಾಜ ಒಡೆಯರ್ ಸ್ಮರಣಾರ್ಥ ಅರಿಕುಟಾರ ಎಂಬ ಹೆಸರನ್ನು ಚಾಮರಾಜನಗರ ಎಂದು ಮರುನಾಮಕರಣ ಮಾಡಲಾಗಿದೆ. ಈ ಭಾಗ ಮೈಸೂರು ಅರಸರ ಆಳ್ವಿಕೆಗೆ ಒಳಪಟ್ಟಿತ್ತು ಎಂದು ಇತಿಹಾಸ ಹೇಳುತ್ತದೆ ಎಂದು ತಿಳಿಸಿದರು.
ಅವಿಭಜಿತ ಮೈಸೂರು ಜಿಲ್ಲೆಯೊಂದಿಗೆ ಇಂದಿಗೂ ಇಲ್ಲಿನ ಜನರು ಭಾವನಾತ್ಮಕ ಸಂಬಂಧ ಹೊಂದಿದ್ದು, ಮೈಸೂರು ದಸರಾದಲ್ಲಿ ಭಾಗವಹಿಸಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ; ಜಿಲ್ಲೆಯ ಎಲ್ಲ ಜನಪದ ಕಲಾವಿದರಿಗೆ ಅವಕಾಶ ದೊರೆಯುವುದಿಲ್ಲ ಎಂಬ ಕಾರಣಕ್ಕೆ ಚಾಮರಾಜನಗರ ದಸರಾ ಆಯೋಜಿಸಿಕೊಂಡು ಬರಲಾಗುತ್ತಿದ್ದು, ಸಂಪ್ರದಾಯವನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ಜನಪದ ಕಲೆಗಳ ತವರೂರಾಗಿರುವ ಚಾಮರಾಜನಗರದಲ್ಲಿ ಸಾವಿರಾರು ಬಡ ಜನಪದ ಕಲಾವಿದರು ಇದ್ದಾರೆ. ದಸರಾ ಉತ್ಸವ ಮುಂದುವರಿಸಿದರೆ ಕಲಾವಿದರ ಕಲಾ ಪ್ರದರ್ಶನಕ್ಕೆ ವೇದಿಕೆ ದೊರೆತಂತಾಗುತ್ತದೆ, ಅಲ್ಪ ಆರ್ಥಿಕ ಸಹಾಯವೂ ಸಿಕ್ಕಂತಾಗುತ್ತದೆ. ಮುಖ್ಯಮಂತ್ರಿ ಮೇಲೆ ಒತ್ತಡ ತಂದು ಹಿಂದಿನಂತೆ ದಸರಾ ಉತ್ಸವ ಆಯೋಜಿಸಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ‘ಜಿಲ್ಲೆಯ ಎಲ್ಲ ಶಾಸಕರ ನಿಯೋಗದೊಂದಿಗೆ ಮುಖ್ಯಮಂತ್ರಿ ಭೇಟಿ ಮಾಡಿ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.
ಕಲಾವಿದರಾದ ಸಿ.ಎಂ.ನರಸಿಂಹಮೂರ್ತಿ, ಜನಪದ ಮಹೇಶ್, ನಟರಾಜ್, ಸುರೇಶ್, ಉಮ್ಮತ್ತೂರು ಚಂದ್ರು, ಶಿವಣ್ಣ, ಮೋಹನ್, ಸದ್ದಾಂ, ಮಂಗಲ ಶಿವಣ್ಣ, ಶಿವರುದ್ರ ಸ್ವಾಮಿ, ತಂಬೂರಿ ತುಳಸಮ್ಮ, ಶಿವು ಚೆಟ್ಟು ಇದ್ದರು.
ಪ್ರತಿಭಟನಾ ಮೆರವಣಿಗೆ
ಸರ್ಕಾರದ ನಿರ್ಧಾರ ಖಂಡಿಸಿ ನೂರಾರು ಜಾನಪದ ಕಲಾವಿದರು ಚಾಮರಾಜೇಶ್ವರ ದೇವಸ್ಥಾನದಿಂದ ಜಿಲ್ಲಾ ರಂಗಮಂದಿರದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು. ವೀರಭದ್ರ ಕುಣಿತ ವೇಷಧಾರಿಗಳು ಕುಣಿತದ ಮೂಲಕ ಮಂಟೇಸ್ವಾಮಿ ಮಲೆ ಮಹದೇಶ್ವರನ ತತ್ವಪದಕಾರರು ಜಾನಪದ ಹಾಡುಗಾರಿಕೆಯ ಮೂಲಕ ಪ್ರತಿರೋಧ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.