ADVERTISEMENT

ಸಾಲು ರಜೆ; ಕೋವಿಡ್‌ ಮುನ್ನೆಚ್ಚರಿಕೆಗೆ ಡಿ.ಸಿ ಸೂಚನೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2020, 8:29 IST
Last Updated 21 ಅಕ್ಟೋಬರ್ 2020, 8:29 IST
ಡಾ.ಎಂ.ಆರ್‌.ರವಿ
ಡಾ.ಎಂ.ಆರ್‌.ರವಿ   

ಚಾಮರಾಜನಗರ: ಇದೇ 24ರಿಂದ ಸಾಲು ಸಾಲು ಸರ್ಕಾರಿ ರಜೆಗಳು ಇರುವುದರಿಂದ ಜಿಲ್ಲೆಯ ಪ್ರವಾಸಿ ತಾಣಗಳು, ದೇವಾಲಯಗಳಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದ್ದು, ಕೋವಿಡ್-19 ಹರಡುವಿಕೆ ತಡೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

24ರಿಂದ 31ವರೆಗೆ ಗುಂಡ್ಲುಪೇಟೆ ತಾಲ್ಲೂಕು ಬಂಡೀಪುರ ರಾಷ್ಟ್ರೀಯ ಉದ್ಯಾನವನ, ಕೊಳ್ಳೇಗಾಲ ತಾಲ್ಲೂಕಿನ ಭರಚುಕ್ಕಿ ಜಲಪಾತ ಹಾಗೂ ಚಾಮರಾಜನಗರ ತಾಲ್ಲೂಕು ಕೆ.ಗುಡಿಗೆ ಮತ್ತು ಮುಜಾರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಸ್ಥಾನಗಳಲ್ಲಿ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು ಎಂದುಅರಣ್ಯ ಅಧಿಕಾರಿಗಳು, ತಹಶೀಲ್ದಾರರು, ದೇವಾಲಯಗಳ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದ್ದಾರೆ.

ಪ್ರವಾಸಿ ತಾಣ ಹಾಗೂ ದೇವಾಲಯದಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸಿಬ್ಬಂದಿ, ಪ್ರವಾಸಿಗರು ಹಾಗೂ ಭಕ್ತರೆಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪ್ರತಿಯೊಬ್ಬರು ಕನಿಷ್ಠ ಎರಡು ಮೀಟರ್ ಭೌತಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸುವಂತೆ ವ್ಯವಸ್ಥೆ ಮಾಡಬೇಕು. ಥರ್ಮಲ್ ಸ್ಕ್ಯಾನರ್‌ನಿಂದ ಭಕ್ತಾದಿಗಳ, ಪ್ರವಾಸಿಗರ ತಪಾಸಣೆ ನಡೆಸಬೇಕು. ಕೈಗಳನ್ನು ಸ್ವಚ್ಛಗೊಳಿಸಲು ಸ್ಯಾನಿಟೈಜರ್ ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಿದ್ದಾರೆ.

ADVERTISEMENT

ಜನದಟ್ಟಣೆ ತಡೆಯಲು ನಿರ್ದಿಷ್ಟ ಸಮಯ ನಿಗದಿ ಪಡಿಸಬೇಕು. ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ, ಆಗಮನ ಹಾಗೂ ನಿರ್ಗಮನಕ್ಕೆ ಪ್ರತ್ಯೇಕ ದ್ವಾರಗಳ ವ್ಯವಸ್ಥೆ ಮಾಡಬೇಕು. ಶೌಚಾಲಯಗಳು, ಕುಡಿಯುವ ನೀರಿನ ಜಾಗಗಳನ್ನು ಶುಚಿಯಾಗಿಡುವುದು ಮತ್ತು ಸ್ಯಾನಿಟೈಸ್ ಮಾಡಬೇಕು. ಉಗುಳುವುದನ್ನು ನಿರ್ಬಂಧಿಸಬೇಕು.

’ಪ್ರವಾಸಿ ತಾಣ ಹಾಗೂ ದೇವಾಲಯಕ್ಕೆ 10 ವರ್ಷದೊಳಗಿನ ಮಕ್ಕಳು ಮತ್ತು 70 ವರ್ಷ ಮೇಲ್ಪಟ್ಟ ಹಾಗೂ ಗರ್ಭಿಣಿ ಮಹಿಳೆಯರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಕೋವಿಡ್-19ರ ಬಗ್ಗೆ ಎಚ್ಚರಿಕಾ ಕ್ರಮಗಳಿಗೆ ಸಂಬಂಧಿಸಿದಂತೆ ಕಣ್ಣು, ಮೂಗು, ಬಾಯಿ ನೈರ್ಮಲ್ಯ, ಕೈಗಳಿಗೆ ಸ್ವಚ್ಚತೆ ಇತ್ಯಾದಿ ಕುರಿತಂತೆ ಅರಿವು ಮೂಡಿಸುವ ಸೂಚನಾಫಲಕಲಗಳನ್ನು ಅಳವಡಿಸುವುದು ಹಾಗೂ ಧ್ವನಿವರ್ಧಕಗಳ ಮೂಲಕ ಪ್ರಚಾರ ಪಡಿಸಬೇಕು. ಪ್ಯಾಕ್ ಮಾಡಿದ ಆಹಾರ ಮತ್ತು ಪಾನೀಯಗಳಿಗೆ ಮಾತ್ರ ಅವಕಾಶ ನೀಡಬೇಕು. ತ್ಯಾಜ್ಯದ ಸುರಕ್ಷಿತ ವಿಲೇವಾರಿಯನ್ನು ಅಯಾಯ ಜಾಗದಲ್ಲಿರುವ ನಿರ್ವಾಹಕರು ಖಾತರಿಪಡಿಸಿಕೊಳ್ಳಬೇಕು’ ಎಂದು ಡಾ.ಎಂ.ಆರ್‌.ರವಿ ಅವರು ತಿಳಿಸಿದ್ದಾರೆ.

ಸುರಕ್ಷತಾ ನಿಯಮ ಉಲ್ಲಂಘಿಸಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.