ಚಾಮರಾಜನಗರ: ‘ಚಾಮರಾಜನಗರದಲ್ಲಿ ಈ ವರ್ಷ ದಸರಾ ಮಾಡುವುದಿಲ್ಲ’ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಜಿಲ್ಲೆಯಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಕಲಾವಿದರು, ಸಾಹಿತಿಗಳು, ಸಂಸ್ಕೃತಿ ಚಿಂತಕರು ಹಾಗೂ ಕನ್ನಡಪರ ಸಂಘಟನೆಗಳು ಮುಖ್ಯಮಂತ್ರಿ ನಿಲುವನ್ನು ಖಂಡಿಸಿದ್ದಾರೆ.
ಸಿದ್ದರಾಮಯ್ಯ ಮೊದಲ ಬಾರಿಗೆ ಮುಖ್ಯಮಂತ್ರಿಯಾದ ವರ್ಷ (2013) ಅವರೇ ಚಾಮರಾಜನಗರ ದಸರಾ ಉತ್ಸವಕ್ಕೆ ಅನುಮತಿ ನೀಡಿ ಇದೀಗ ಚಾಮರಾಜನಗರದಲ್ಲಿ ದಸರಾ ಉತ್ಸವವೇ ನಡೆಯುತ್ತಿರಲಿಲ್ಲ ಎಂದು ಹೇಳಿಕೆ ನೀಡಿರುವುದು ವಿಪರ್ಯಾಸ ಎಂದು ಟೀಕಿಸಿದ್ದಾರೆ.
2013ರಲ್ಲಿ ಅಂದಿನ ಸಚಿವರಾಗಿದ್ದ ಮಹದೇವ ಪ್ರಸಾದ್ ಹಾಗೂ ಶ್ರೀನಿವಾಸ ಪ್ರಸಾದ್ ಅವರ ಕಾಳಜಿಯ ಫಲವಾಗಿ ಚಾಮರಾಜನಗರದಲ್ಲಿ ದಸರಾ ಮಹೋತ್ಸವ ಆರಂಭವಾಯಿತು. ಕೋವಿಡ್ ಹಾಗೂ ಬರಗಾಲದ ಸಂದರ್ಭ ಹೊರತಾಗಿ ಜಿಲ್ಲೆಯಲ್ಲಿ ದಸರಾ ಉತ್ಸವ ಅದ್ಧೂರಿಯಾಗಿ, ಅರ್ಥಪೂರ್ಣವಾಗಿ ಅನಾಚೂನವಾಗಿ ಆಚರಿಸಿಕೊಂಡು ಬರಲಾಗಿದೆ.
ಮೈಸೂರು ಅರಸ ಚಾಮರಾಜೇಂದ್ರ ಒಡೆಯರ್ 1776ರಲ್ಲಿ ಚಾಮರಾಜನಗರದಲ್ಲಿ ಜನಿಸಿದ್ದು ಇಂದಿಗೂ ಅವರ ಜನನ ಮಂಟಪವನ್ನು ಕಾಣಬಹುದು. 1818ರಲ್ಲಿ ತಂದೆ ಚಾಮರಾಜೇಂದ್ರ ಒಡೆಯರ್ ಅವರ ನೆನಪಿಗಾಗಿ ಅವರ ಪುತ್ರ ಮುಮ್ಮಡಿ ಕೃಷ್ಣರಾಜೇಂದ್ರ ಒಡೆಯರ್ ಅವರು ಅರಿಕುಠಾರವನ್ನು ಚಾಮರಾಜನಗರ ಎಂದು ನಾಮಕರಣ ಮಾಡಿದರು.
1826ರಲ್ಲಿ ಐತಿಹಾಸಿಕ ಚಾಮರಾಜೇಶ್ವರ ದೇವಸ್ಥಾನವನ್ನು ನಿರ್ಮಿಸಿದರು. ಜಿಲ್ಲೆಯಾದ್ಯಂತ ಮೈಸೂರು ಅರಸರು ನಿರ್ಮಿಸಿರುವ ಹಲವು ಐತಿಹಾಸಿಕ ದೇವಸ್ಥಾನಗಳನ್ನು ಕಾಣಬಹುದು. ಮೈಸೂರು ಜಿಲ್ಲೆಯಿಂದ ಬೇರ್ಪಟ್ಟು ಸ್ವತಂತ್ರ ಜಿಲ್ಲೆಯಾಗಿ ರಚನೆಯಾದರೂ ಇಂದಿಗೂ ಮಾನಸಿಕವಾಗಿ ಜಿಲ್ಲೆ ಬೆಸೆದುಕೊಂಡಿದೆ.
ಮೈಸೂರು, ದಸರಾ ಹಾಗೂ ಅರಸರ ಜೊತೆ ಅವಿನಾಭಾವ ಸಂಬಂಧ ಹೊಂದಿರುವ ಚಾಮರಾಜನಗರದಲ್ಲಿ ದಸರಾ ಮಹೋತ್ಸವ ಮಾಡುವುದಿಲ್ಲ ಎಂಬ ಮುಖ್ಯಮಂತ್ರಿಗಳ ಹಗುರವಾದ ಹೇಳಿಕೆ ಶೋಭೆ ತರುವುದಿಲ್ಲ. ಈ ಭಾಗದ ಅಸ್ಮಿತೆಯ ಪ್ರಶ್ನೆಯಾಗಿರುವ ‘ಚಾಮರಾಜನಗರ ದಸರಾ’ ನಡೆಯಬೇಕು. ಇಲ್ಲವಾದರೆ ಹೋರಾಟದ ಹಾದಿ ಹಿಡಿಯುವುದು ಅನಿವಾರ್ಯ ಎಂದು ಕನ್ನಡಪರ ಸಂಘಟನೆಯ ಮುಖಂಡ ಚಾರಂ ಶ್ರೀನಿವಾಸಗೌಡ ಎಚ್ಚರಿಕೆ ನೀಡಿದ್ದಾರೆ.
ಕಲಾವಿದರಿಗೆ ಪ್ರೋತ್ಸಾಹ
ಚಾಮರಾಜನಗರ ದಸರಾ ಸಾಂಸ್ಕೃತಿಕ ಉತ್ಸವವಾಗಿ ಮಾತ್ರವಲ್ಲ; ಜಿಲ್ಲೆಯ ನೂರಾರು ಬಡ ಜಾನಪದ ಕಲಾವಿದರ ಕಲಾ ಪ್ರದರ್ಶನಕ್ಕೆ ಉತ್ಸವದಲ್ಲಿ ವೇದಿಕೆ ಸಿಗಲಿದೆ. ಮೈಸೂರು ದಸರಾವನ್ನು ನೇರವಾಗಿ ಕಣ್ತುಂಬಿಕೊಳ್ಳಲು ಸಾಧ್ಯವಾಗದವರು, ಅಶಕ್ತರು ಚಾಮರಾಜನಗರ ದಸರಾದಲ್ಲಿ ಮೈಸೂರು ದಸರಾವನ್ನು ಕಣ್ತುಂಬಿಕೊಳ್ಳಲು ಅವಕಾಶ ದೊರೆಯುತ್ತದೆ ಎನ್ನುತ್ತಾರೆ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಸಿ.ಎಂ. ನರಸಿಂಹ ಮೂರ್ತಿ.
‘ನಗರದಲ್ಲಿ ಅರಸರ ಜನನ ಮಂಟಪ’
ಚಾಮರಾಜ ಒಡೆಯರು ಜನಿಸಿದ ಜನನ ಮಂಟಪ ಚಾಮರಾಜೇಶ್ವರ ದೇವಸ್ಥಾನದ ಪಕ್ಕದಲ್ಲಿ ಕಾಣಬಹುದು. ಮೈಸೂರು ದಸರಾದಲ್ಲಿ ಮಹಾರಾಜರು ಖಾಸಗಿ ದರ್ಬಾರ್ ನಡೆಸಿದರೆ ಚಾಮರಾಜನಗರ ದಸರಾದಲ್ಲಿ ಚಾಮರಾಜೇಶ್ವರ ಸ್ವಾಮಿಯ ದರ್ಬಾರ್ ಉತ್ಸವ ನಡೆಯುವುದು ವಿಶೇಷ.– ರಾಮಕೃಷ್ಣ ಉಪಾಧ್ಯಾಯ ಚಾಮರಾಜೇಶ್ವರ ದೇವಸ್ಥಾನ ಅರ್ಚಕ
‘ಅವಿನಾಭಾವ ಸಂಬಂಧ’
‘ಹಲವು ದೇಗುಲಗಳ ನಿರ್ಮಾಣ’
ಹಿಂದೆ ಚಾಮರಾಜನಗರದ ಮಂಗಲ ಗ್ರಾಮದ ಹೆಣ್ಣನ್ನು ಮೈಸೂರು ಅರಸರು ವಿವಾಹವಾಗಿದ್ದಾರೆ. ಅರಸಸು ಜಿಲ್ಲೆಯಲ್ಲಿ ಹಲವು ದೇಗುಲಗಳನ್ನು ನಿರ್ಮಾಣ ಮಾಡಿದ್ದಾರೆ ಸಾವಿರಾರು ಎಕರೆ ಜಮೀನು ಹೊಂದಿದ್ದಾರೆ. ಇಷ್ಟಾದರೂ ಅರಸರ ಜೊತೆಗೆ ಜಿಲ್ಲೆ ನಂಟುಹೊಂದಿಲ್ಲ ಎಂಬ ಹೇಳಿಕೆ ಸರಿಯಲ್ಲ.– ಸಿಎಂ ಕೃಷ್ಣಮೂರ್ತಿ ದಲಿತ ಮುಖಂಡ
‘ಮೈಸೂರು ಅರಸರ ಋಣದಲ್ಲಿದ್ದೇವೆ’
ಚಾಮರಾಜನಗರ ಸ್ವತಂತ್ರ ಜಿಲ್ಲೆಯಾಗಿ ಬೇರ್ಪಟ್ಟಿದ್ದರೂ ಇಂದಿಗೂ ನಾವೆಲ್ಲರೂ ಮೈಸೂರು ಸಂಸ್ಥಾನದ ಮಕ್ಕಳಿದಂತೆ. ನೂರಾರು ವರ್ಷಗಳಿಂದಲೂ ಮೈಸೂರು ಅರಸರೊಂದಿಗೆ ಬಾಂಧವ್ಯ ಹೊಂದಿದ್ದು ಅರಸರ ಋಣ ಜಿಲ್ಲೆಯ ಮೇಲಿದೆ. ಚಾಮರಾಜನಗರ ದಸರಾ ಸಂಸ್ಕೃತಿ ಪರಂಪರೆಯೊಂದಿಗೆ ಬೆಸೆದುಕೊಂಡಿದ್ದು ಸರ್ಕಾರ ಜನರ ಆತ್ಮಸಂತೋಷ ಪಡಿಸುವ ಕೆಲಸ ಮಾಡಿದರೆ ಗೌರವ ಹೆಚ್ಚಾಗುತ್ತದೆ.– ಸುರೇಶ್ ಪಿ.ಋಗ್ವೇದಿ ಸಂಸ್ಕೃತಿ ಚಿಂತಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.