ADVERTISEMENT

ಪಾರದರ್ಶಕ ಚುನಾವಣೆಗೆ ಸಿದ್ಧತೆ: ಜಿಲ್ಲಾಧಿಕಾರಿ

ಇವಿಎಂ, ವಿವಿಪ್ಯಾಟ್‌ ಬಳಕೆ ಬಗ್ಗೆ ಜಿಲ್ಲೆಯಾದ್ಯಂತ ಜಾಗೃತಿ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2023, 16:54 IST
Last Updated 6 ಮಾರ್ಚ್ 2023, 16:54 IST
ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌ ಅವರು ಇವಿಎಂ ಬಗ್ಗೆ ಮಾಹಿತಿ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿದೇವಿ, ಚುನಾವಣಾ ವಿಭಾಗದ ಬಸವಣ್ಣ ಇದ್ದರು
ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌ ಅವರು ಇವಿಎಂ ಬಗ್ಗೆ ಮಾಹಿತಿ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿದೇವಿ, ಚುನಾವಣಾ ವಿಭಾಗದ ಬಸವಣ್ಣ ಇದ್ದರು   

ಚಾಮರಾಜನಗರ: ಮುಂಬರುವ ವಿಧಾನಸಭಾ ಚುನಾವಣೆಯನ್ನು ಜಿಲ್ಲೆಯಲ್ಲಿ ಅತ್ಯಂತ ಪಾರದರ್ಶಕವಾಗಿ ನಡೆಸಲು ಅಗತ್ಯವಾದ ಎಲ್ಲ ಸಿದ್ಧತೆಗಳನ್ನು ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌ ಸೋಮವಾರ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇವಿಎಂ, ವಿವಿ ಪ್ಯಾಟ್‌ಗಳ ಬಳಕೆ ಬಗ್ಗೆ ಮಾಧ್ಯಮ ಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಏರ್ಪಡಿಸಲಾಗಿದ್ದ ಪ್ರಾತ್ಯಕ್ಷಿಕೆ ಕಾರ್ಯಗಾರದಲ್ಲಿ ಮಾತನಾಡಿದ ಅವರು, ‘ಇವಿಎಂ, ವಿವಿಪ್ಯಾಟ್‌ಗಳು ತಾಂತ್ರಿಕವಾಗಿ ಹೆಚ್ಚು ಸುರಕ್ಷಿತವಾಗಿವೆ. ಅದರ ಕಾರ್ಯನಿರ್ವಹಣೆಯನ್ನು ತಿರುಚಲು ಸಾಧ್ಯವಿಲ್ಲ. ಜಿಲ್ಲೆಯಲ್ಲಿ 982 ಮತಗಟ್ಟೆಗಳಿದ್ದು, ಶೇ 125ರಷ್ಟು ಇವಿಎಂಗಳನ್ನು ಇಟ್ಟುಕೊಳ್ಳಲಾಗಿದೆ. ಮತದಾರರು ಮತದಾನ ಮಾಡಿದ ಬಳಿಕ, ವಿವಿಪ್ಯಾಟ್‌ನಲ್ಲಿ ಬರುವ ರಸೀದಿ ಮೂಲಕ ತಾವು ಹಾಕಿರುವ ಮತವನ್ನು ದೃಢೀಕರಣ ಮಾಡಬಹುದು’ ಎಂದರು.

‘ಈಗಾಗಲೇ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಇದರ ಎಲ್ಲ ವಿವರಗಳನ್ನು ನೀಡಲಾಗಿದೆ. ಇವಿಎಂಗಳು, ಕಂಟ್ರೋಲ್‌ ಯುನಿಟ್‌ಗಳು ಮತ್ತು ವಿವಿಪ್ಯಾಟ್‌ಗಳನ್ನು ಕಂಪ್ಯೂಟರ್‌ ಆಧಾರಿತ ರ‍್ಯಾಂಡಮೈಸೇಷನ್‌ ಮೂಲಕ ವಿಧಾನ ಸಭಾ ಕ್ಷೇತ್ರಗಳಿಗೆ, ನಂತರ ಮತ್ತೆ ಅದೇ ವಿಧಾನದ ಮೂಲಕ ಮತಗಟ್ಟೆಗಳಿಗೆ ಕಳುಹಿಸಲಾಗುತ್ತದೆ. ಮತಗಟ್ಟೆ ಅಧಿಕಾರಿಗಳನ್ನು ಕೂಡ ಇದೇ ವಿಧಾನದಲ್ಲಿ ಆಯ್ಕೆ ಮಾಡಲಾಗುತ್ತದೆ. ಹಾಗಾಗಿ, ಮತದಾನ ನಡೆಯುವ ಮುನ್ನಾದಿನದವರೆಗೆ ಯಾವ ಇವಿಎಂ ಯಾವ ಮತಗಟ್ಟೆಗೆ ಹೋಗುತ್ತದೆ ಮತ್ತು ಚುನಾವಣಾ ಸಿಬ್ಬಂದಿ ಯಾವ ಮತಗಟ್ಟೆಗೆ ನಿಯೋಜಿತರಾಗುತ್ತಾರೆ ಎಂದು ಹೇಳಲು ಸಾಧ್ಯವಾಗುವುದಿಲ್ಲ’ ಎಂದರು.

ADVERTISEMENT

ಜಾಗೃತಿ ಕಾರ್ಯಕ್ರಮ: ಚುನಾವಣೆಯಲ್ಲಿ ಬಳಸಲಾಗುತ್ತಿರುವ ವಿದ್ಯುನ್ಮಾನ ಮತಯಂತ್ರಗಳು, ಕಂಟ್ರೋಲ್ ಯೂನಿಟ್, ಬ್ಯಾಲೆಟ್ ಯೂನಿಟ್, ವಿವಿ ಪ್ಯಾಟ್‌ಗ‌ಳ ಕಾರ್ಯ ಹಾಗೂ ಬಳಕೆ ಬಗ್ಗೆ ಮತದಾರರಲ್ಲಿ ಅರಿವು ಮೂಡಿಸಲಾಗುತ್ತಿದೆ. ಮತಗಟ್ಟೆ ಮಟ್ಟದಲ್ಲಿಯೂ ಈಗಾಗಲೇ ಜಾಗೃತಿ ಮೂಡಿಸುವ ಕಾರ್ಯ ಆರಂಭವಾಗಿದೆ. ಅರಿವು ಕಾರ್ಯಕ್ರಮ ಮುಂದುವರಿಯಲಿದೆ’ ಎಂದು ರಮೇಶ್‌ ಹೇಳಿದರು.

ಚುನಾವಣೆ ಪೂರ್ವಭಾವಿಯಾಗಿ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಜಿಲ್ಲೆಯು ಕೇರಳ, ತಮಿಳುನಾಡು ರಾಜ್ಯದೊಂದಿಗೆ ಗಡಿ ಸಂಪರ್ಕ ಹೊಂದಿದೆ. ಅಂತರಾಜ್ಯ ಜಿಲ್ಲೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದ್ದು, ಜಂಟಿ ಸಮಿತಿಗಳನ್ನು ರಚಿಸಲಾಗುತ್ತದೆ. ಚುನಾವಣೆ ವೇಳೆ ನೀತಿ ಸಂಹಿತೆ ಕಟ್ಟುನಿಟ್ಟಿನ ಪಾಲನೆಗೆ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

ಸುದ್ದಿಗಾಗಿ ಕಾಸಿನ ಮೇಲೆ ನಿಗಾ: ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಾದ ಮೇಲೆ ಮಾಧ್ಯಮಗಳಲ್ಲಿ ಬರುವ ಸುದ್ದಿಗಳ ಮೇಲೂ ನಿಗಾ ಇಡಲಾಗುತ್ತದೆ. ಸುದ್ದಿಗಾಗಿ ಕಾಸಿನಂತಹ ಪ್ರಕರಣಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ರಮೇಶ್‌ ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಮಾಸ್ಟರ್ ಟ್ರೈನರ್‌ಗಳಾಗಿ ನಿಯೋಜನೆಗೊಂಡಿರುವ ಹೇಮಂತ್ ಕುಮಾರ್, ಡಾ.ತುಳಸಿರಾಮ್, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಇದ್ದರು.

ಚುನಾವಣಾ ಆಯೋಗದ ನಿರ್ದೇಶನ ಹಾಗೂ ಆದೇಶಗಳನ್ನು ಚಾಚೂ ತಪ್ಪದೆ ಪಾಲನೆ ಮಾಡುತ್ತಾ ಚುನಾವಣೆ ನಡೆಸಲಾಗುವುದು

-ಡಿ.ಎಸ್‌.ರಮೇಶ್‌, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.