ADVERTISEMENT

ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸಿ: ಶಿಕ್ಷಕರಿಗೆ ಜಿಲ್ಲಾಧಿಕಾರಿ ಸಲಹೆ

ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 15:22 IST
Last Updated 13 ಫೆಬ್ರುವರಿ 2020, 15:22 IST
ಜಿಲ್ಲಾಧಿಕಾರಿ ಎಂ.ಆರ್‌.ರವಿ ಅವರು ಗಿಡಕ್ಕೆ ನೀರು ಎರೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು
ಜಿಲ್ಲಾಧಿಕಾರಿ ಎಂ.ಆರ್‌.ರವಿ ಅವರು ಗಿಡಕ್ಕೆ ನೀರು ಎರೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು   

ಚಾಮರಾಜನಗರ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇಕಡವಾರು ಹೆಚ್ಚು ಸಾಧನೆ, ಸ್ಥಾನ ಪಡೆಯುವುದಕ್ಕಿಂತ ಅನುತ್ತೀರ್ಣರಾಗುವ ವಿದ್ಯಾರ್ಥಿಗಳ ಪ್ರಮಾಣವನ್ನು ಕಡಿಮೆಮಾಡುವುದರ ಬಗ್ಗೆ ವಿಶೇಷ ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ. ಎಂ. ಆರ್.ರವಿ ಅವರು ಅಭಿಪ್ರಾಯಪಟ್ಟರು.

2019–20ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಸುಧಾರಣಾ ಸಂಬಂಧ ಪ್ರಗತಿ ಪರಿಶೀಲನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯ ಶಿಕ್ಷಕರ ಅನುಭವ, ವಿವೇಕ ಹಾಗೂ ಪರಿಶ್ರಮದ ಮೇಲೆ ನಂಬಿಕೆ ಇದೆ. ಈ ಎಲ್ಲವೂ ಒಗ್ಗೂಡಿದರೆ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಿದೆ.ವಿದ್ಯಾರ್ಥಿಯು ಒಂದು ವರ್ಷ ವ್ಯಾಸಂಗ ಮಾಡಿರುವುದನ್ನು ಮೂರು ಗಂಟೆಯ ಕಾಲಾವಧಿಯಲ್ಲಿ ಬಹಳ ಆತ್ಮವಿಶ್ವಾಸದಿಂದ ಪರೀಕ್ಷೆ ಮೂಲಕ ಎದುರಿಸಬೇಕಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ತನ್ನದೇ ಆದ ಸಾಮರ್ಥ್ಯ ಇರುತ್ತದೆ. ಶಿಕ್ಷಕ ಹಾಗೂ ಸಮಾಜವು ವಿದ್ಯಾರ್ಥಿಗಳಿಗೆ ಆತ್ಮ ವಿಶ್ವಾಸವನ್ನು ತುಂಬುವ ಮೂಲಕ ಅವರ ಯಶಸ್ಸಿಗೆ ಉತ್ತೇಜಿಸಬೇಕು’ ಎಂದರು.

ADVERTISEMENT

‘ಪರೀಕ್ಷೆಯ ಸಂದರ್ಭದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಭಯ, ಆತಂಕ ಇರುವುದು ಸಹಜ. ಭಯ ವಿದ್ಯಾರ್ಥಿಯ ನಿಯಂತ್ರಣದಲ್ಲಿರಬೇಕೆ ವಿನಾ ಭಯವೇ ವಿದ್ಯಾರ್ಥಿಯನ್ನು ನಿಯಂತ್ರಿಸುವಂತಾಗಬಾರದು. ಶಿಕ್ಷಕರು ಪರೀಕ್ಷಾ ಸಿದ್ಧತೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸಿದರೆ ಭಯ ತಾನಾಗಿಯೇ ಹೋಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಡಿಡಿಪಿಐ) ಜವರೇಗೌಡ ಅವರು ಮಾತನಾಡಿ, ‘ವಿದ್ಯಾರ್ಥಿಯು ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಯಾವ ವಿಷಯದಲ್ಲಿ ಕಡಿಮೆ ಅಂಕಗಳನ್ನು ಗಳಿಸಿರುತ್ತಾರೊ ಅಂತಹ ವಿಷಯಗಳ ಬಗ್ಗೆ ಹೆಚ್ಚಿನ ಗಮನಹರಿಸಿ ಮುಖ್ಯ ಪರೀಕ್ಷೆಗೆ ತಯಾರಿ ನಡೆಸಲು ಆದ್ಯತೆ ನೀಡಲಾಗುತ್ತಿದೆ’ ಎಂದರು.

ಡಯಟ್ ಪ್ರಾಂಶುಪಾಲರಾದ ಭಾರತಿ, ಎಲ್ಲಾ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು, ವಿವಿಧ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಇದ್ದರು.

‘ಪೋಷಕರ ಪಾತ್ರವೂ ಮುಖ್ಯ’
‘ಫಲಿತಾಂಶ ಸುಧಾರಣೆ, ಕಲಿಕೆ ವಿಷಯದಲ್ಲಿ ಪೊಷಕರ ಪಾತ್ರವೂ ಬಹಳ ಮುಖ್ಯ. ಆದರೆ, ಇದನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿಲ್ಲ. ಪ್ರೇರಣೆ, ಪ್ರೋತ್ಸಾಹ ಮನೆಯಿಂದಲೂ ಇರಬೇಕು. ಸಣ್ಣ ವಿಷಯಗಳಿಗೂ ಮಹತ್ವ ನೀಡಬೇಕು. ಗ್ರಾಮೀಣ ವಿದ್ಯಾರ್ಥಿಗಳ ಬಗ್ಗೆಯೂ ಗಮನ ಇರಬೇಕು. ಎಲ್ಲ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಉತ್ತಮ ಪ್ರಯತ್ನ ಮಾಡಿದಾಗ ಆರೋಗ್ಯಕರ ಫಲಿತಾಂಶ ಹೊರಬರಲಿದೆ’ ಎಂದು ಎಂ.ಆರ್‌.ರವಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಶಾಲೆಗಳಲ್ಲಿ ಶಿಕ್ಷಕರು ರೂಪಿಸಿರುವಂತಹ ಗುಂಪು ಅಧ್ಯಯನ, ಪೋಷಕರ ಸಭೆ, ವಿಶೇಷ ಬೋಧನೆ, ಪೂರ್ವ ಸಿದ್ಧತಾ ಪರೀಕ್ಷೆ, ಶಾಲಾ ದತ್ತು ಯೋಜನೆ, ಪ್ರತಿಭಾ ಪೋಷಣೆ, ಕಲಿಕಾ ಪ್ರೇರಣೆ ಹಾಗೂ ವಿದ್ಯಾರ್ಥಿಗಳಿಗೆ ಬೆಂಬಲ ಎಂಬ ಅನೇಕ ಯೋಜನೆಗಳನ್ನು ಶಿಕ್ಷಣ ಇಲಾಖೆಯು ಕಾರ್ಯರೂಪಕ್ಕೆ ತಂದು ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚಿನ ಫಲಿತಾಂಶಕ್ಕೆ ಇಲಾಖೆಯು ಶ್ರಮಿಸುತ್ತಿರುವ ಬಗ್ಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.