ಡಿಸಿಎಫ್ ವೈ.ಚಕ್ರಪಾಣಿ
ಚಾಮರಾಜನಗರ: ಮಲೆ ಮಹದೇಶ್ವರ ವನ್ಯಜೀವಿ ವಿಭಾಗದಲ್ಲಿ ಈಚೆಗೆ ನಡೆದ ಐದು ಹುಲಿಗಳ ಅಸಹಜ ಸಾವಿನ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿರುವ ಎಂ.ಎಂ ಹಿಲ್ಸ್ ವನ್ಯಜೀವಿ ವಿಭಾಗದ ಡಿಸಿಎಫ್ ವೈ.ಚಕ್ರಪಾಣಿ ಅವರನ್ನು ಸರ್ಕಾರ ಅಮಾನತುಗೊಳಿಸಿದೆ.
ಹುಲಿಗಳ ಸಾವಿನ ಸಂಬಂಧ ಸರ್ಕಾರ ರಚಿಸಿದ್ದ ಉನ್ನತ ಮಟ್ಟದ ತನಿಖಾ ಸಮಿತಿ ನೀಡಿರುವ ಶಿಫಾರಸಿನ ಆಧಾರದ ಮೇಲೆ ವೈ.ಚಕ್ರಪಾಣಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದ್ದು ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಲಾಗಿದೆ.
ಮಲೆ ಮಹದೇಶ್ವರ ವನ್ಯಜೀವಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿಗೆ ಮಾರ್ಚ್‌ನಿಂದ ಮೇ ವರೆಗೆ ವೇತನ ಬಿಡುಗಡೆ ಮಾಡದಿರುವುದು, ವೇತನಕ್ಕಾಗಿ ಆಗ್ರಹಿಸಿ ಜೂನ್ 23ರಂದು ಕಳ್ಳಬೇಟೆ ತಡೆ ಶಿಬಿರದ ವಾಚರ್‌ಗಳು ಕೊಳ್ಳೇಗಾಲದ ವಿಭಾಗೀಯ ಕಚೇರಿ ಎದುರು ಪ್ರತಿಭಟನೆ ಮಾಡಿರುವುದು ತನಿಖೆಯಲ್ಲಿ ದೃಢಪಟ್ಟಿದೆ.
ಹೊರಗುತ್ತಿಗೆ ಸಿಬ್ಬಂದಿಗೆ ವೇತನ ಪಾವತಿಸುವ ಜವಾಬ್ದಾರಿ ಹೊತ್ತಿದ್ದ ಗುತ್ತಿಗೆದಾರ ಸಂಸ್ಥೆಯು ಸಮಯಕ್ಕೆ ಸರಿಯಾಗಿ ವೇತನ ಪಾವತಿ ಮಾಡದಿದ್ದರೂ ಡಿಸಿಎಫ್ ಸರಿಯಾಗಿ ಕರ್ತವ್ಯ ನಿರ್ವಹಿಸದಿರುವುದು ಕಂಡುಬಂದಿದೆ. ವೇತನ ಪಾವತಿಗೆ ಅಗತ್ಯ ಅನುದಾನ ಲಭ್ಯವಿದ್ದರೂ ಸಿಬ್ಬಂದಿಗೆ ಮಾರ್ಚ್ ತಿಂಗಳ ವೇತನ ಪಾವತಿ ಮಾಡಿಲ್ಲ. ಏಪ್ರಿಲ್ ಹಾಗೂ ಮೇ ತಿಂಗಳ ವೇತನ ಪಾವತಿ ಕೋರಿ ಖಜಾನೆಗೆ ಬಿಲ್ ಸಲ್ಲಿಸಲು ವಿಳಂಬ ತೋರಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಅಮಾನತುಗೊಂಡಿರುವ ವೈ.ಚಕ್ರಪಾಣಿ ಸರ್ಕಾರದ ಅನುಮತಿ ಇಲ್ಲದೆ ಕೇಂದ್ರಸ್ಥಾನ ತೊರೆಯುವಂತಿಲ್ಲ ಎಂದೂ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.