ADVERTISEMENT

ದೀನ ದಯಾಳ್‌ ಮಹಾ ಮಾನವತಾವಾದಿ: ಪ್ರದೀಪ್‌ಕುಮಾರ್‌

ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರದಲ್ಲಿ ಉಪಾಧ್ಯಾಯರ ಜನ್ಮದಿನಾಚರಣೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2022, 15:54 IST
Last Updated 24 ಸೆಪ್ಟೆಂಬರ್ 2022, 15:54 IST
ಪಂಡಿತ್‌ ದೀನ ದಯಾಳ್‌ ಉಪಾಧ್ಯಾಯರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಮೈಸೂರು ವಿವಿ ಸಿಂಡಿಕೇಟ್‌ ಸದಸ್ಯ ಪ್ರದೀಪ್‌ ಕುಮಾರ್‌ ದೀಕ್ಷಿತ್‌ ಉದ್ಘಾಟಿಸಿದರು. ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಆರ್‌.ಮಹೇಶ್‌, ಸುರೇಶ್‌ಕುಮಾರ್‌ ಇತರರು ಇದ್ದರು
ಪಂಡಿತ್‌ ದೀನ ದಯಾಳ್‌ ಉಪಾಧ್ಯಾಯರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಮೈಸೂರು ವಿವಿ ಸಿಂಡಿಕೇಟ್‌ ಸದಸ್ಯ ಪ್ರದೀಪ್‌ ಕುಮಾರ್‌ ದೀಕ್ಷಿತ್‌ ಉದ್ಘಾಟಿಸಿದರು. ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಆರ್‌.ಮಹೇಶ್‌, ಸುರೇಶ್‌ಕುಮಾರ್‌ ಇತರರು ಇದ್ದರು   

ಚಾಮರಾಜನಗರ: ‘ದೇಶದಲ್ಲಿ ಉಂಟಾಗುತ್ತಿದ್ದ ಸೈದ್ದಾಂತಿಕ ಭಿನ್ನಾಭಿಪ್ರಾಯಗಳ ನಡುವೆಯೇ ಅಪ್ರತಿಮ ರಾಷ್ಟ್ರಪ್ರೇಮಿಯಾಗಿದ್ದ ಪಂಡಿತ್‌ ದೀನ ದಯಾಳ್‌ ಉಪಾಧ್ಯಾಯ ಅವರು ಮಾನವತಾವಾದವನ್ನು ಪ್ರತಿಪಾದಿಸುತ್ತಿದ್ದರು’ ಎಂದು ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಪ್ರದೀಪ್‌ಕುಮಾರ್ ದೀಕ್ಷಿತ್ ಶನಿವಾರ ಅಭಿಪ್ರಾಯಪಟ್ಟರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದಲ್ಲಿ ನೆಹರು ಯುವ ಕೇಂದ್ರ, ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ಸ್ನಾತಕೋತ್ತರ ಕೇಂದ್ರದ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಜೈ ಭುವನೇಶ್ವರಿ ಕನ್ನಡ ವೇದಿಕೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪಂಡಿತ್ ದೀನದಯಾಳ್ ಉಪಾಧ್ಯಾಯ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಾನವತಾವಾದದ ಪ್ರತಿಪಾದಕರಲ್ಲಿ ಬಹುದೊಡ್ಡ ಹೆಸರು ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರದ್ದು. ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತದ ಅಂದಿನ ರಾಷ್ಟ್ರನಾಯಕರಲ್ಲಿ ನಡೆಯುತ್ತಿದ್ದ ಸೈದ್ಧಾಂತಿಕ ವಾದ-ವಿವಾದಗಳು, ಸಮಾಜವಾದ, ವಿಮರ್ಶಾವಾದಗಳ ನಡುವೆಯೇ ರಾಷ್ಟ್ರಸೇವಾ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಯುವಕರಲ್ಲಿ ದೇಶಪ್ರೇಮವನ್ನು ತುಂಬಿದ ದೀನದಯಾಳ್ ಅವರು ಗಾಂಧೀಜಿಯವರ ಕನಸಿನ ರಾಷ್ಟ್ರೀಯ ಸೇವಾ ಯೋಜನೆಯನ್ನು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತಂದರು’ ಎಂದರು.

ADVERTISEMENT

‘ತಾನು ಬೆಳೆಯುವ ಜೊತೆಗೆ ಇತರರನ್ನು ಬೆಳಸುವ ನಾಯಕತ್ವ ಗುಣ ಮೈಗೂಡಿಸಿಕೊಂಡಿದ್ದ ಉಪಾಧ್ಯಾಯರು ಸರಳ ಜೀವಿಯಾಗಿದ್ದರು. ದೀನರ ಬಗ್ಗೆ ದಯೆ, ಕಾಳಜಿ ಹೊಂದಿ ಅವರ ಏಳಿಗೆಗಾಗಿ ತನ್ನ ಸರ್ವಸ್ವವನ್ನು ಮುಡಿಪಾಗಿಟ್ಟರು. ಭಾರತೀಯ ಪರಂಪರೆಯ ಮೂಲತತ್ವವನ್ನು ಜನರಿಗೆ ತಿಳಿಸಲು ರಾಷ್ಟ್ರಧರ್ಮ, ಪಾಂಚಜನ್ಯ, ಸ್ವದೇಶಿ ಪತ್ರಿಕೆಗಳನ್ನು ಹುಟ್ಟುಹಾಕಿದರು. ಪಂಡಿತ್ ದೀನದಯಾಳರ ಆದರ್ಶ ಜೀವನ, ತಾತ್ವಿಕ ಚಿಂತನೆ, ಉದಾರ ವಿಚಾರಧಾರೆಗಳನ್ನು ಇಂದಿನ ಯುವಪೀಳೆಗೆ ಅಳವಡಿಸಿಕೊಳ್ಳಬೇಕು’ ಎಂದು ಪ್ರದೀಪ್‌ಕುಮಾರ್ ತಿಳಿಸಿದರು.

ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಆರ್.ಮಹೇಶ್ ಮಾತನಾಡಿ, ‘ಮಹಾತ್ಮ ಗಾಂಧಿ ಹಾಗೂ ಸ್ವಾಮಿ ವಿವೇಕಾನಂದರ ಅವರ ಮುಂದುವರೆದ ವ್ಯಕ್ತಿತ್ವವೇ ಪಂಡಿತ್ ದೀನ ದಯಾಳ್ ಉಪಾಧ್ಯಾಯ. ಗ್ರಾಮ ಸ್ವರಾಜ್ಯ ಹಾಗೂ ಸ್ವದೇಶಿ ಚಳವಳಿ ಪರಿಕಲ್ಪನೆಗೆ ರೂಪಕೊಟ್ಟ ಪಂಡಿತ್ ಜೀ ಅವರು ಪ್ರತಿಯೊಂದು ಗ್ರಾಮಗಳು ಸ್ವಯಂಸೇವಾ ಗ್ರಾಮಗಳಾಗಿ ಸ್ವಾವಲಂಬನೆ ಸಾಧಿಸುವುದು ಅತ್ಮನಿರ್ಭರ ಯೋಜನೆಯ ಹಿಂದಿನ ಪ್ರೇರಕಶಕ್ತಿಯಾಗಿದೆ’ ಎಂದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಸಹಾಯಕ ಸಿ. ಸುರೇಶ್‌ಕುಮಾರ್, ಸ್ನಾತಕೋತ್ತರ ಕೇಂದ್ರದ ಎನ್.ಎಸ್.ಎಸ್. ಅಧಿಕಾರಿ ಮಹೇಶ್, ಜೈ ಭುವನೇಶ್ವರಿ ಕನ್ನಡ ವೇದಿಕೆ ಅಧ್ಯಕ್ಷ ಜಿ. ಬಂಗಾರು, ನೆಹರು ಯುವ ಕೇಂದ್ರದ ಶಂಕರ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.