ADVERTISEMENT

ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆ; ಲಕ್ಷಾಂತರ ಭಕ್ತರ ನಿರೀಕ್ಷೆ

ನಾಳೆಯಿಂದ ಆರಂಭ, 26ಕ್ಕೆ ರಥೋತ್ಸವದೊಂದಿಗೆ ತೆರೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2022, 6:36 IST
Last Updated 21 ಅಕ್ಟೋಬರ್ 2022, 6:36 IST
ದೀಪಾವಳಿ ಜಾತ್ರೆ ಸಂದರ್ಭದಲ್ಲಿ ಮಹದೇಶ್ವರನ ಭಕ್ತರು ನಡೆಸುವ ಕಡಲೆ ಸೇವೆಯ ಸಂಗ್ರಹ ಚಿತ್ರ
ದೀಪಾವಳಿ ಜಾತ್ರೆ ಸಂದರ್ಭದಲ್ಲಿ ಮಹದೇಶ್ವರನ ಭಕ್ತರು ನಡೆಸುವ ಕಡಲೆ ಸೇವೆಯ ಸಂಗ್ರಹ ಚಿತ್ರ   

ಮಹದೇಶ್ವರ ಬೆಟ್ಟ: ಪ್ರಸಿದ್ಧ ಯಾತ್ರಾಸ್ಥಳ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರಾ ಮಹೋತ್ಸವ ಶನಿವಾರದಿಂದ (ಅ.22) ಆರಂಭವಾಗಲಿದ್ದು, ಸಾಲು ರಜೆಗಳಿರುವುದರಿಂದ ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ.

ಕೋವಿಡ್‌ ಕಾರಣಕ್ಕೆ ಎರಡು ವರ್ಷಗಳಿಂದ ಭಕ್ತರಿಗೆ ನಿರ್ಬಂಧ ವಿಧಿಸಲಾಗಿತ್ತು. ಈ ಬಾರಿ ವಿಜೃಂಭಣೆಯಿಂದ ಜಾತ್ರೋತ್ಸವ ನಡೆಸಲು ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸಕಲ ಸಿದ್ಧತೆಗಳನ್ನು ನಡೆಸಿದೆ.

ಶನಿವಾರದಿಂದ ಜಾತ್ರೆ ಪ್ರಯುಕ್ತ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಆರಂಭವಾಗಲಿದೆ.

ADVERTISEMENT

ಅ.23ರಂದು ಮಹದೇಶ್ವರಸ್ವಾಮಿಗೆ ಎಣ್ಣೆಮಜ್ಜನ ಸೇವೆ ಹಾಗೂ ಉತ್ಸವ ನರೇವೇರಲಿದೆ. 24ರಂದು ನರಕ ಚತುರ್ಥಿ ದಿನವಾಗಿದ್ದು, ವಿಶೇಷ ಉತ್ಸವಾದಿಗಳು, ಅಮಾವಾಸ್ಯೆ ಸೇವೆ ಮತ್ತು ಉತ್ಸವ ಪೂಜೆ ಸಲ್ಲಿಕೆಯಾಗಲಿದೆ. ಅ 25ರಂದು ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಅಮಾವಾಸ್ಯೆ ಪೂಜಾ ಕಾರ್ಯಕ್ರಮಗಳು ನೆರವೇರಲಿವೆ. ಬೇಡಗಂಪಣ ಸಮುದಾಯದ 108 ಹೆಣ್ಣು ಮಕ್ಕಳಿಂದ ಹಾಲರವಿ ಉತ್ಸವ, ಕತ್ತಿಪಾವಡ ಸೇವೆ, ಅನ್ನದಾಸೋಹ ಸೇವೆ ನೆಡೆಯಲಿದೆ.

ಅ.26ರಂದು ಭಾನುವಾರ ಬೆಳಿಗ್ಗೆ 9.15ಕ್ಕೆ ಮಹಾ ರಥೋತ್ಸವ ಜರಗಲಿದೆ. ಆ ಮೂಲಕ ಜಾತ್ರೆಗೆ ತೆರೆಬೀಳಲಿದೆ.

25ರಂದು ಸೂರ್ಯಗ್ರಹಣ ಇದ್ದು, ಆ ದಿನ ಎಲ್ಲ ಪೂಜೆ ಪುನಸ್ಕಾರಗಳು ನಿಗದಿಯಂತೆ ನಡೆಯಲಿದ್ದು ಹಾಗೂ ದೇವರ ದರ್ಶನಕ್ಕೂ ಅವಕಾಶ ಇದೆ ಎಂದು ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದಾರೆ.

ತೆಪ್ಪೋತ್ಸವ ರದ್ದು: ದೀಪಾವಳಿ ಜಾತ್ರೆಯು ರಥೋತ್ಸವದ ದಿನ ರಾತ್ರಿ ತೆಪ್ಪೋತ್ಸವದ ಮೂಲಕ ಕೊನೆಯಾಗುವುದು ಬಾಡಿಕೆ. ಬೆಟ್ಟದ ದೊಡ್ಡಕೆರೆಯ ಅಭಿವೃದ್ಧಿ ಕಾರ್ಯ ಇನ್ನೂ ಪೂರ್ಣಗೊಳ್ಳದಿರುವುದರಿಂದ ತೆಪ್ಪೋತ್ಸವವನ್ನು ರದ್ದು ಮಾಡಲಾಗಿದೆ.

ಸಿದ್ಧತೆ: ಜಾತ್ರೆಯನ್ನು ಯಶಸ್ವಿಯಾಗಿ ನಡೆಸುವುದಕ್ಕಾಗಿ ಪ್ರಾಧಿಕಾರ ಸಿದ್ಧತೆಗಳನ್ನು ಕೈಗೊಂಡಿದ್ದು, ಅಂತಿಮ ಹಂತ ತಲುಪಿದೆ.

ಎರಡು ವರ್ಷಗಳಿಂದ ಕೋವಿಡ್‌ ಕಾರಣಕ್ಕೆ ದೀಪಾವಳಿ ಜಾತ್ರೆ ಸೇರಿದಂತೆ ಎಲ್ಲ ಜಾತ್ರೆಗಳು ಹಾಗೂ ಉತ್ಸವಗಳು ಸರಳವಾಗಿ ಸ್ಥಳೀಯರ ಉಪಸ್ಥಿತಿಯಲ್ಲಿ ಸಾಂಪ್ರದಾಯಿಕ ಆಚರಣೆಗೆ ಸೀಮಿತವಾಗಿತ್ತು. ಇದರಿಂದ ಲಕ್ಷಾಂತರ ಭಕ್ತರಿಗೆ ನಿರಾಸೆಯಾಗಿತ್ತು. ಈ ಭಾರಿ ಮಹಾಲಯ ಅಮಾವಾಸ್ಯೆ ಹಾಗೂ ದಸರಾ ಜಾತ್ರೆಗಳು ಅದ್ದೂರಿಯಾಗಿ ಮುಕ್ತಾಯ ಕಂಡಿದೆ.

ದೀಪಾವಳಿ ಜಾತ್ರೆಯೂ ವಿಜೃಂಭಣೆಯಿಂದ ನಡೆಯುವುದು ನಿಶ್ಚಿತ. ವಾರಾಂತ್ಯ ಹಾಗೂ ದೀಪಾವಳಿ ರಜೆಗಳು ಒಟ್ಟೊಟ್ಟಿಗೆ ಬಂದಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆಯನ್ನು ಪ್ರಾಧಿಕಾರದ ಅಧಿಕಾರಿಗಳು ಹೊಂದಿದ್ದಾರೆ.

ಅಗತ್ಯಕ್ಕೆ ತಕ್ಕಂತೆ ಅನುಕೂಲ: ದೇವರ ದರ್ಶನ ಮಾಡುವ ವೇಳೆ ನೂಕು ನುಗ್ಗಲು ತಡೆಗಟ್ಟಲು ಸರತಿಸಾಲು, ನೆರಳಿನ ವ್ಯವಸ್ಥೆ, ಕುಡಿಯುವ ನೀರು ಒದಗಿಸಲು ಘಟಕ, ಅಂತರಗಂಗೆ, ದಾಸೋಹ ವ್ಯವಸ್ಥೆ ಸೇರಿದಂತೆ ತೊಂಬೆಗಳು ಹಾಗೂ ಅಲ್ಲಲ್ಲಿ ನಲ್ಲಿಗಳ ವ್ಯವಸ್ಥೆ ಮಾಡಲಾಗುತ್ತಿದೆ. ವಿವಿಧ ಕಡೆಗಳಲ್ಲಿ ಸ್ವಚ್ಛತೆ ಕಾಪಾಡಲು ಶೌಚಾಲಯ ಹಾಗೂ ಕಸದಬುಟ್ಟಿ ವ್ಯವಸ್ಥೆ. ಹೆಚ್ಚುವರಿಯಾಗಿ ಲಾಡು ಕೌಂಟರ್ ತೆರಯಲಾಗುತ್ತಿದ್ದು ದಿನದ 24 ತಾಸು ಕಾರ್ಯನಿವಹಿಸಲಿವೆ.

ಕೆಎಸ್‌ಆರ್‌ಟಿಸಿ ಕೂಡ ಹೆಚ್ಚುವರಿ ಬಸ್‌ಗಳನ್ನು ಹಾಕಲು ಸಿದ್ಧತೆ ಮಾಡಿಕೊಂಡಿದೆ. ಬೆಟ್ಟದಲ್ಲಿ ವಾಹನ ದಟ್ಟಣೆ ತಪ್ಪಿಸಲು ಹಳೆ ದಾಸೋಹ ಭವನದ ಬಳಿ ಪಾರ್ಕಿಂಗ್ ಜಾಗ ಗುರುತಿಸಲಾಗಿದೆ. ಪೊಲೀಸ್‌ ಇಲಾಖೆ ಬಿಗಿ ಬಂದೋಬಸ್ತ್‌ ಕೈಗೊಳ್ಳಲಿದೆ.

‘ಭದ್ರತೆಗೆ ಹೆಚ್ಚುವರಿ ಸಿಬ್ಬಂದಿ, ಸ್ವಚ್ಛತೆಗೆ ಒತ್ತು’

ಜಾತ್ರೆ ಸಿದ್ಧತೆಗೆ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಸ್‌.ಕಾತ್ಯಾಯಿನಿದೇವಿ, ‘ಈ ಬಾರಿ ದಾಖಲೆ ಪ್ರಮಾಣದ ಭಕ್ತರು ದೇವಾಲಯಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಅವರಿಗೆ ಸೌಲಭ್ಯ ಕಲ್ಪಿಸಲು ಎಲ್ಲ ವ್ಯವಸ್ಥೆ ಮಾಡಲಾಗಿದೆ. ಭದ್ರತೆ, ಸ್ವಚ್ಛತೆಗೆ ಹೆಚ್ಚು ನೀಡಲಾಗಿದೆ’ ಎಂದರು.

‘ಪೊಲೀಸ್‌ ಇಲಾಖೆಯ ಸಿಬ್ಬಂದಿ ಅಲ್ಲದೇ, ಭದ್ರತೆಗಾಗಿ ಹೆಚ್ಚುವರಿಯಾಗಿ ಗೃಹರಕ್ಷಕ ದಳದ 300 ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. 40 ತಾತ್ಕಾಲಿಕ ಶೌಚಾಲಯಗಳನ್ನು ಅಳವಡಿಸಲಾಗಿದೆ. ಬೆಟ್ಟದಲ್ಲಿ 125 ಪೌರ ಕಾರ್ಮಿಕರಿದ್ದು, ಹೆಚ್ಚುವರಿಯಾಗಿ ಹನೂರು, ಕೊಳ್ಳೇಗಾಲದಿಂದ 25 ಪೌರಕಾರ್ಮಿಕರನ್ನು ಸ್ವಚ್ಛತೆ ಕಾಪಾಡಲು ನಿಯೋಜಿಸಲಾಗಿದೆ. ಉಳಿದಂತೆ ಕುಡಿಯುವ ನೀರು, ವಿಶೇಷ ದಾಸೋಹಕ್ಕೆ ವ್ಯವಸ್ಥೆ ಮಾಡಲಾಗಿದೆ. ಎಲ್ಲೆಂದರಲ್ಲಿ ಪರು ಸೇವೆ (ಅಡುಗೆ)ಮಾಡುವುದಕ್ಕೆ ಅವಕಾಶ ಇಲ್ಲ. ಅದಕ್ಕಾಗಿ ಸ್ಥಳವನ್ನು ಗುರುತಿಸಲಾಗಿದ್ದು, ಭಕ್ತರು ಅಲ್ಲಿಯೇ ಪರು ಸೇವಾ ಹರಿಕೆ ಸಲ್ಲಿಸಬೇಕು ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.