ADVERTISEMENT

ದೀಪಾವಳಿ: ಶಬ್ದಮಾಲಿನ್ಯ ಕೊಂಚ ಇಳಿಕೆ

ಸೂರ್ಯನಾರಾಯಣ ವಿ
Published 30 ಅಕ್ಟೋಬರ್ 2019, 15:23 IST
Last Updated 30 ಅಕ್ಟೋಬರ್ 2019, 15:23 IST
ಈ ವರ್ಷ ಬೆಳಕಿನ ಹಬ್ಬದಲ್ಲಿ ಭಾರಿ ಶಬ್ದ ಹೊರಸೂಸುವ ಪಟಾಕಿ ಬಳಕೆ ಗಣನೀಯವಾಗಿ ಇಳಿದಿತ್ತು
ಈ ವರ್ಷ ಬೆಳಕಿನ ಹಬ್ಬದಲ್ಲಿ ಭಾರಿ ಶಬ್ದ ಹೊರಸೂಸುವ ಪಟಾಕಿ ಬಳಕೆ ಗಣನೀಯವಾಗಿ ಇಳಿದಿತ್ತು   

ಚಾಮರಾಜನಗರ: ಜಿಲ್ಲಾ ಕೇಂದ್ರದಲ್ಲಿ ಈ ಬಾರಿಯ ದೀಪಾವಳಿಯಲ್ಲಿ ಪಟಾಕಿ ಸದ್ದು ಕಡಿಮೆಯಾಗಿತ್ತು. ಹಾಗಾಗಿ, ಶಬ್ದ ಮಾಲಿನ್ಯದ ಪ್ರಮಾಣದಲ್ಲೂ ಇಳಿಕೆಯಾಗಿದೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿ ಅಂಶಗಳ ಪ್ರಕಾರ, ದೀಪಾವಳಿ ಸಂದರ್ಭದಲ್ಲಿ ನಗರದಲ್ಲಿ ಶಬ್ದಮಾಲಿನ್ಯದ ಪ್ರಮಾಣ 65.81ರಷ್ಟು ದಾಖಲಾಗಿದೆ. ಕಳೆದ ವರ್ಷ 67.4 ಡೆಸಿಬೆಲ್‌ನಷ್ಟಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶಬ್ದಮಾಲಿನ್ಯದ ಪ್ರಮಾಣ 1.59 ಡೆಸಿಬಲ್‌ನಷ್ಟು ಕಡಿಮೆಯಾಗಿದೆ.

ಮಾಲಿನ್ಯ ನಿಯಂತ್ರಣ ಮಂಡಳಿಯು ಚಾಮರಾಜನಗರದಲ್ಲಿ ಮಾತ್ರ ಶಬ್ದಮಾಲಿನ್ಯದ ಬಗ್ಗೆ ಮಾಹಿತಿ ಕಲೆ ಹಾಕಿದೆ. ಬೆಳಕಿನ ಹಬ್ಬದ ನಾಲ್ಕು ದಿನಗಳಲ್ಲಿ ಆಗಿರುವ ವಾಯು ಮಾಲಿನ್ಯದ ಬಗ್ಗೆಯೂ ಅದು ಅಧ್ಯಯನ ನಡೆಸಿದ್ದು, ಮೂರ್ನಾಲ್ಕು ದಿನಗಳಲ್ಲಿ ವರದಿ ಬರಲಿದೆ ಎಂದು ಮಂಡಳಿಯ ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಪಟಾಕಿಗಳಿಂದ ದೂರ ಉಳಿದ ಜನ: ದೀಪಾವಳಿಯ ನಾಲ್ಕು ದಿನಗಳಲ್ಲಿ ಜಿಲ್ಲಾ ಕೇಂದ್ರದಲ್ಲಿ ಪಟಾಕಿ ಸದ್ದು ಕಡಿಮೆಯಾಗಿತ್ತು. ಮೊದಲ ಮೂರು ದಿನಗಳಲ್ಲಿ ಜನರು ಭಾರಿ ಶಬ್ದ ಉಂಟು ಮಾಡುವ ಪಟಾಕಿಗಳಿಂದ ದೂರ ಇದ್ದರು. ಮಂಗಳವಾರ ಬಲಿ ಪಾಡ್ಯಮಿಯ ದಿನ ಮಾತ್ರ ಬಾಣ, ಬಿರುಸು, ಪಟಾಕಿಗಳ ಸದ್ದು ನಗರದಾದ್ಯಂತ ಕೇಳಿ ಬಂತು. ಪಟಾಕಿಗಳನ್ನು ಹೊಡೆದವರಲ್ಲಿ ಯುವಜನರ ಸಂಖ್ಯೆಯೇ ಹೆಚ್ಚಿತ್ತು.

ಶಬ್ದ ಮಾಡದ, ಕೇವಲ ಬೆಳಕು ಸೂಸುವ ಆಕರ್ಷಕ ಪಟಾಕಿಗಳತ್ತ ಮಕ್ಕಳು, ಮಹಿಳೆಯರು ಮುಖ ಮಾಡಿದ್ದರು. ಮನೆ ಮನೆಗಳಲ್ಲಿ ದೀಪ ಬೆಳಗುವುದಕ್ಕೇ ಹೆಚ್ಚಿನ ಆದ್ಯತೆ ನೀಡಿದ್ದರು.

ಪಟಾಕಿಗಳ ಮಾರಾಟ ಕುಸಿತ: ಈ ವರ್ಷ ಪಟಾಕಿಗಳ ಮಾರಾಟದಲ್ಲಿ ಗಣನೀಯ ಕುಸಿತವಾಗಿದೆ. ವ್ಯಾಪಾರಿಗಳ ಪ್ರಕಾರ, ಅರ್ಧಕ್ಕರ್ಧದಷ್ಟು ವ್ಯಾಪಾರ ಕಡಿಮೆಯಾಗಿದೆ. ನಿರಂತರವಾಗಿ ಮಳೆಯಾಗುತ್ತಿದ್ದುದರಿಂದ ಜನರು ಪಟಾಕಿ ಅಂಗಡಿಗಳತ್ತ ಮುಖ ಮಾಡಿಲ್ಲ ಎಂಬುದು ಅವರ ಹೇಳಿಕೆ.

ಮೂಡಿದ ಜಾಗೃತಿ: ‘ಪಟಾಕಿ ಹೊಡೆಯುವುದರಿಂದ ಪರಿಸರದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಮನವರಿಕೆ ಆಗಿದೆ. ಪಟಾಕಿಗಳಿಂದ ದೂರ ಉಳಿದು ಪರಿಸರಸ್ನೇಹಿ ದೀಪಾವಳಿ ಆಚರಿಸಬೇಕು ಎಂಬ ಜಾಗೃತಿ ಮೂಡಿದೆ’ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಎಂ.ಜಿ.ರಘುರಾಮ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಈಗಶಬ್ದಮಾಲಿನ್ಯದ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಜನರಲ್ಲಿ ಜಾಗೃತಿ ಇನ್ನಷ್ಟು ಮೂಡಬೇಕಿದೆ. ಮುಂದಿನ ವರ್ಷಗಳಲ್ಲಿ ಜಾಗೃತಿ ಇನ್ನಷ್ಟು ಹೆಚ್ಚಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಭಾರಿ ಶಬ್ದ ಉಂಟು ಮಾಡುವ ಪಟಾಕಿಗಳನ್ನು ಸರ್ಕಾರ ನಿಷೇಧಿಸಿತ್ತು. ಹಸಿರುವ ದೀಪಾವಳಿ ಆಚರಿಸುವಂತೆ ಜಿಲ್ಲಾಡಳಿತ ಜನತೆಗೆ ಕರೆಯನ್ನೂ ನೀಡಿತ್ತು.

ಸಂಭವಿಸದ ಅನಾಹುತ

ದೀಪಾವಳಿ ಸಂದರ್ಭದಲ್ಲಿ ನಗರ ವ್ಯಾಪ್ತಿಯಲ್ಲಿ ಪಟಾಕಿ ಸಿಡಿತ, ಬೆಂಕಿಯಿಂದಾಗಿ ಯಾವುದೇ ಅನಾಹುತ ಸಂಭವಿಸಿಲ್ಲ. ಕಣ್ಣಿಗೆ ಹಾನಿಯಾಗಿರುವ, ಸುಟ್ಟಗಾಯಗಳಾಗಿರುವ ಪ್ರಕರಣ ವರದಿಯಾಗಿಲ್ಲ.

ಅನಾಹುತ ಸಂಭವಿಸಿದರೆ ತಕ್ಷಣ ಚಿಕಿತ್ಸೆ ನೀಡುವುಕ್ಕಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿತ್ತು.

‘ಮೂರು ದಿನಗಳ ಅವಧಿಯಲ್ಲಿ ಯಾರೊಬ್ಬರೂ ಚಿಕಿತ್ಸೆಗಾಗಿ ಬಂದಿಲ್ಲ’ ಎಂದು ಮುಖ್ಯ ಸರ್ಜನ್‌ ರಘುರಾಮ್‌ ಸರ್ವೇಗಾರ ‘ಪ್ರಜಾವಾಣಿ’ಗೆ ತಿಳಿಸಿದರು.

ಶಬ್ದಮಾಲಿನ್ಯ ಕಡಿಮೆಯಾಗಿರುವುದು ಒಳ್ಳೆಯ ಬೆಳವಣಿಗೆ. ಈ ಬಾರಿ ಹೆಚ್ಚಿನ ಜನರು ಪಟಾಕಿಗಳಿಂದ ದೂರ ಉಳಿದಿದ್ದಾರೆ. ಅವರಲ್ಲಿ ಜಾಗೃತಿಯೂ ಮೂಡಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಪರಿಸರ ಅಧಿಕಾರಿ ಎಂ.ಜಿ. ರಘುರಾಮ್ ತಿಳಿಸಿದ್ದಾರೆ.

ಅಂಕಿ ಅಂಶ

2018ರಲ್ಲಿ ದಾಖಲಾಗಿದ್ದ ಶಬ್ದಮಾಲಿನ್ಯ ಪ್ರಮಾಣ

67.4 ಡೆಸಿಬೆಲ್‌

ಈ ವರ್ಷ ದಾಖಲಾಗಿರುವ ಶಬ್ದಮಾಲಿನ್ಯ ಪ್ರಮಾಣ

65.81 ಡೆಸಿಬೆಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.