ADVERTISEMENT

3,300 ಕ್ವಿಂಟಲ್ ಬೀಜಕ್ಕೆ ಬೇಡಿಕೆ ಸಲ್ಲಿಕೆ

ಯಳಂದೂರು: ಉದ್ದು, ಅಲಸಂದೆ, ಸೂರ್ಯಕಾಂತಿಗೆ ನೆಕ್ರೋಸಿಸ್ ನಂಜುರೋಗ

​ಪ್ರಜಾವಾಣಿ ವಾರ್ತೆ
Published 22 ಮೇ 2021, 4:03 IST
Last Updated 22 ಮೇ 2021, 4:03 IST
ಯಳಂದೂರು ತಾಲ್ಲೂಕಿನ ಹೊಸೂರು ಗ್ರಾಮದ ಹೊರ ವಲಯದ ಉದ್ದು, ಹೆಸರು, ಅಲಸಂದೆ ತಾಕಿನಲ್ಲಿ ಕಂಡುಬಂದ ಹಳದಿ ನಂಜಾಣು ರೋಗವನ್ನು ವೀಕ್ಷಿಸುತ್ತಿರುವ ಕೃಷಿಕ
ಯಳಂದೂರು ತಾಲ್ಲೂಕಿನ ಹೊಸೂರು ಗ್ರಾಮದ ಹೊರ ವಲಯದ ಉದ್ದು, ಹೆಸರು, ಅಲಸಂದೆ ತಾಕಿನಲ್ಲಿ ಕಂಡುಬಂದ ಹಳದಿ ನಂಜಾಣು ರೋಗವನ್ನು ವೀಕ್ಷಿಸುತ್ತಿರುವ ಕೃಷಿಕ   

ಯಳಂದೂರು: ಇತ್ತೀಚಿನ ದಿನಗಳಲ್ಲಿ ಮಳೆ ಸುರಿಯುವ ಲಕ್ಷಣ ಗೋಚರಿಸುತ್ತಿದ್ದು, ಬಿತ್ತನೆ ಕಾರ್ಯಕ್ಕೆ ಕೃಷಿಕರು ಗದ್ದೆ, ಹೊಲಗಳನ್ನು ಹಸನು ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ, ಈಗಾಗಲೇ ನಾಟಿ ಮಾಡಿರುವ ಉದ್ದು, ಹೆಸರು ಮತ್ತು ಅಲಸಂದೆಗೆ ಹಳದಿ ನಂಜಾಣು ರೋಗ ಕಾಣಿಸಿಕೊಂಡಿದೆ.

ತಾಲ್ಲೂಕಿನಲ್ಲಿ ಮುಂಗಾರು ಪೂರ್ವ ಮಳೆಗೆ 3 ಸಾವಿರಕ್ಕೂ ಹೆಚ್ಚು ಹೆಕ್ಟೇರ್‌ಗಳಲ್ಲಿ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ. ಮೇ ಮೊದಲ ದಿನದಿಂದಲೇ ಜೋಳ, ಅಲ್ಪ ಪ್ರಮಾಣದಲ್ಲಿ ಭತ್ತ ಹಾಗೂ ಒಣ ಪ್ರದೇಶಗಳಲ್ಲಿ ಹೆಸರು ಬಿತ್ತನೆ ನಡೆದಿದೆ. ಅದರಂತೆ ಈ ಬಾರಿ ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ ವಿತರಣೆಯೂ ನಡೆದಿದೆ. ಆದರೆ, ಜನತಾ ಕರ್ಫ್ಯೂ ಹೇರಿದದ್ದರಿಂದ ಹಿಡುವಳಿದಾರರು ಕೃಷಿ ಕೇಂದ್ರಗಳತ್ತ ಬರುತ್ತಿಲ್ಲ.

ಮಳೆ ಆರಂಭಕ್ಕೂ ಮೊದಲು ಗದ್ದೆಗೆ ಸಾವಯವ ಹಟ್ಟಿಗೊಬ್ಬರ ಹಾಕಿ ಉಳುಮೆ ಕಾರ್ಯದಲ್ಲಿ ಬೇಸಾಯ ಗಾರರು ತೊಡಗಿದ್ದಾರೆ. ಮುಂಗಾರು ಈ ತಿಂಗಳಾಂತ್ಯಕ್ಕೆ ಆರಂಭ ಆಗುವ ನಿರೀಕ್ಷೆ ಇದ್ದು, ಲಾಕ್‌ಡೌನ್‌ ತೆರವಾದ ಬಳಿಕ ಬೀಜ ಮತ್ತು ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಲಿದೆ ಎಂದು ಚಾಮಲಾಪುರದ ರೈತ ಸಿದ್ಧಲಿಂಗಸ್ವಾಮಿ ಹೇಳಿದರು.

ADVERTISEMENT

ನಾಟಿ ಕಾರ್ಯ ಹೆಚ್ಚಲಿದೆ: ಈ ಬಾರಿ ಮುಂಗಾರು ಹಂಗಾಮಿನ ಬಿತ್ತನೆಗೆ ಅಷ್ಟಾಗಿ ಬೇಡಿಕೆ ಬಂದಿಲ್ಲ. ಲಾಕ್‌ಡೌನ್‌ ಬಳಿಕ ರೈತರು ಬೀಜಕ್ಕೆ ಬೇಡಿಕೆ ಸಲ್ಲಿಸುವ ನಿರೀಕ್ಷೆ ಇದೆ. ಹೀಗಾಗಿ, ರಾಗಿ 300 ಕ್ವಿಂಟಲ್, ಭತ್ತ-2,550 ಮತ್ತು ಮುಸುಕಿನಜೋಳ 500 ಕ್ವಿಂಟಲ್‌ಗೆ ಬೇಡಿಕೆ ಸಲ್ಲಿಸಲಾಗಿದೆ. ಜೂನ್-ಆಗಸ್ಟ್ ನಡುವೆ ರಾಗಿ ಮತ್ತು ನಾಲೆಯಲ್ಲಿ ನೀರು ಹರಿಯುವ ಸಮಯ ಭತ್ತ ಬಿತ್ತನೆ ತಾಕು ಹೆಚ್ಚಳವಾಗುವ ನಿರೀಕ್ಷೆ ಇದೆ. ತಾಲ್ಲೂಕಿನಲ್ಲಿ 3,300 ಕ್ವಿಂಟಲ್ ಬಿತ್ತನೆ ಬೀಜಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಎ.ವೆಂಕಟರಂಗಶೆಟ್ಟಿ ಹೇಳಿದರು.

ಗ್ರಾಮೀಣರ ಚಿತ್ತ ಕೃಷಿಯತ್ತ: ಈ ಬಾರಿ ಗ್ರಾಮೀಣ ಜನರು ಕೋವಿಡ್‌ನಿಂದ ಉದ್ಯೋಗ ಕಳೆದುಕೊಂಡಿದ್ದು, ಹಳ್ಳಿಗಳತ್ತ ಹಿಂದಿರುಗಿದ್ದಾರೆ. ಮನೆಗೆ ಬಂದವರು ಕೃಷಿ ಚಟುವಟಿಕೆಯತ್ತ ಮುಖ ಮಾಡುವ ವಿಶ್ವಾಸ ಇದೆ. ಹೀಗಾಗಿ, ಮುಂಗಾರು ಹಂಗಾಮಿನ ಕೃಷಿ ವ್ಯಾಪ್ತಿ ಹೆಚ್ಚಲಿದೆ. ಕೃಷಿ ಇಲಾಖೆ ಹೆಚ್ಚಿನ ಬಿತ್ತನೆ ಬೀಜ ವಿತರಿಸಲು ಸಿದ್ಧತೆ ನಡೆಸಿದೆ ಎಂದು ಸಹಾಯಕ ನಿರ್ದೇಶಕ ಎನ್.ಜಿ.ಅಮೃತೇಶ್ವರ ‘ಪ್ರಜಾವಾಣಿ’ಗೆ ತಿಳಿಸಿದರು.

ನಂಜಾಣು ರೋಗ ಸಮಗ್ರ ನಿರ್ವಹಣೆ?: ಅಗರ ಮತ್ತು ಕಸಬಾ ಹೋಬಳಿಗಳಲ್ಲಿ ಬಿತ್ತನೆ ಆಗಿರುವ ಉದ್ದು, ಹೆಸರು, ಅಲಸಂದೆ ತಾಕಿನಲ್ಲಿ ಹಳದಿ ನಂಜಾಣು ರೋಗ ಅಲ್ಲಲ್ಲಿ ಕಂಡುಬಂದಿದೆ. 0.6 ಗ್ರಾಂ ಇಮಿಡಾಕ್ಲೋಪಿಡ್‌ ಅನ್ನು 1 ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪಡಿಸಬೇಕು ಇಲ್ಲವೇ 1 ಲೀಟರ್ ನೀರಿಗೆ 2 ಎಂ.ಎಲ್ ರೋಗರ್ ಸೇರಿಸಿ ಬಾಧಿತ ಗಿಡಗಳಿಗೆ ಸಿಂಪಡಣೆ ಮಾಡಬೇಕು ಎಂದು ಕೃಷಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.