ADVERTISEMENT

ಉಪ್ಪಾರರನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2022, 12:52 IST
Last Updated 11 ಅಕ್ಟೋಬರ್ 2022, 12:52 IST
ಬಾಗಳಿ ರೇವಣ್ಣ
ಬಾಗಳಿ ರೇವಣ್ಣ   

ಚಾಮರಾಜನಗರ: ಉಪ್ಪಾರ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಉಪ್ಪಾರ ಎಸ್‌ಟಿ ಹೋರಾಟ ಸಮಿತಿ ಆಗ್ರಹಿಸಿದೆ.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಮಿತಿ ಅಧ್ಯಕ್ಷ ಬಾಗಳಿ ರೇವಣ್ಣ, ‘ಸಮುದಾಯವನ್ನು ಎಸ್‌ಟಿಗೆ ಸೇರ್ಪಡೆಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆ ಮಾಡಲಾಗುವುದು’ ಎಂದು ಎಚ್ಚರಿಸಿದರು.

‘ರಾಜ್ಯದಲ್ಲಿ ಉಪ್ಪಾರ ಜನಾಂಗಕ್ಕೆ ಸೇರಿದ 45 ಲಕ್ಷ ಜನರಿದ್ದಾರೆ. ಸದ್ಯ ಪ್ರವರ್ಗ–1ರಲ್ಲಿ ಬರುವ ಸಮುದಾಯ ರಾಜಕೀಯವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ತುಂಬಾ ಹಿಂದುಳಿದಿದೆ. ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಸಮುದಾಯಕ್ಕೆ ಶೈಕ್ಷಣಿಕ, ರಾಜಕೀಯ ಸ್ಥಾನಮಾನಗಳು ಸಿಕ್ಕಿಲ್ಲ. ಡಿ.ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಎಲ್‌.ಜಿ.ಹಾವನೂರು ನೇತೃತ್ವದ ಆಯೋಗ ರಚಿಸಿದ್ದರು. ವರದಿಯ ಶಿಫಾರಸಿನಂತೆ ಉಪ್ಪಾರ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ರಾಜ್ಯದ ಎಲ್ಲ ಕಡೆಯೂ ಸಮುದಾಯದವರು ಇದ್ದಾರೆ. 224 ವಿಧಾನಸಭಾ ಕ್ಷೇತ್ರಗಳ ಪೈಕಿ 160 ಕ್ಷೇತ್ರಗಳಲ್ಲಿ ಉಪ್ಪಾರರು ನಿರ್ಣಾಯಕ ಮತದಾರರಾಗಿದ್ದಾರೆ. ಹಾವನೂರು ಆಯೋಗ ವರದಿ ಸಲ್ಲಿಸಿ 50 ವರ್ಷಗಳು ಕಳೆದಿದ್ದರೂ, ಸಮುದಾಯವನ್ನು ಎಸ್‌ಟಿಗೆ ಸೇರಿಸಲು ಕ್ರಮವಹಿಸಿಲ್ಲ. ಚುನಾವಣೆಗೂ ಮೊದಲು ಜನಾಂಗದ ಪರ ಹೋರಾಡಿ ಎಸ್‌ಟಿಗೆ ಸೇರಿಸಲು ಕ್ರಮವಹಿಸುವುದಾಗಿ ಭರವಸೆ ನೀಡಿದ್ದ ಸಿದ್ದರಾಮಯ್ಯ, ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅವರು ಆ ಬಳಿಕ ಜನಾಂಗವನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಸಮುದಾಯದ ಏಕೈಕ ಶಾಸಕ ಸಿ.ಪುಟ್ಟರಂಗಶೆಟ್ಟಿ ಕೂಡ ಜನಾಂಗದ ಪರ ಧ್ವನಿ ಎತ್ತಲು ಮುಂದಾಗಿಲ್ಲ‌’ ಎಂದರು.

‘ಇದೇ ರೀತಿ ಮುಂದುವರಿದರೆ ಮುಂದೆ ಬರುವ ಚುನಾವಣೆಯಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಬುದ್ದಿ ಕಲಿಸಬೇಕಾಗುತ್ತದೆ.ಸರ್ಕಾರಗಳ ಕ್ರಮ ಖಂಡಿಸಿ ಮುಂದಿನ ದಿನಗಳಲ್ಲಿ ಚಾಮರಾಜನಗರದಿಂದ ಬೆಂಗಳೂರುವರೆಗೂ ಪಾದಯಾತ್ರೆ ನಡೆಸಲಾಗುವುದು’ ಎಂದು ರೇವಣ್ಣ ಹೇಳಿದರು.

ಸಮಿತಿಯ ಆನಂದ್‌ ಉಪ್ಪಾರ್, ಕುಮಾರ್, ಚೆಲುವರಾಜು, ವೆಂಕಟೇಶ್‌, ಸುರೇಶ್‌, ಸಿದ್ದಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.