
ಚಾಮರಾಜನಗರ: ಮಲೆ ಮಹದೇಶ್ವರನ ಬೆಟ್ಟಕ್ಕೆ ಪಾದಯಾತ್ರೆಯಲ್ಲಿ ಹೋಗುತ್ತಿದ್ದ ಭಕ್ತರೊಬ್ಬರು ಬುಧವಾರ ಚಿರತೆ ದಾಳಿಯಿಂದ ಮೃತಪಟ್ಟಿರುವುದು ಮಾದಪ್ಪನ ಭಕ್ತರಲ್ಲಿ ಆತಂಕ ಸೃಷ್ಟಿಸಿದೆ.
ಮಾನವ–ಪ್ರಾಣಿ ಸಂಘರ್ಷ ಮಿತಿಮೀರಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ಪಾದಯಾತ್ರಿಗಳಿಗೆ ಸೂಕ್ತ ಭದ್ರತೆ ಒದಗಿಸುವವಲ್ಲಿ ಅರಣ್ಯ ಇಲಾಖೆ ಹಾಗೂ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಫಲವಾಯಿತೇ ಎಂಬ ಟೀಕೆಗಳು ವ್ಯಕ್ತವಾಗಿವೆ.
ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳವಾದ ಮಲೆ ಮಹದೇಶ್ವರನ ದೇವಸ್ಥಾನ ರಾಜ್ಯದಲ್ಲೇ ಅತಿ ಹೆಚ್ಚು ಆದಾಯ ಬರುವ ದೇಗುಲಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಶಿವರಾತ್ರಿ, ಯುಗಾದಿ, ದೀಪಾವಳಿ ಜಾತ್ರಾ ಮಹೋತ್ಸವಗಳಲ್ಲಿ ಹಾಗೂ ಅಮಾವಾಸ್ಯೆ ದಿನಗಳಲ್ಲಿ ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಬಸ್, ಕಾರು, ದ್ವಿಚಕ್ರ ವಾಹನಗಳಲ್ಲಿ ಬರುವವರು ಒಂದೆಡೆಯಾದರೆ, ನೂರಾರು ಕಿ.ಮೀ ದೂರದಿಂದ ಪಾದಯಾತ್ರೆಯ ಮೂಲಕ ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಹಿಂದೆ ಶಿವರಾತ್ರಿ ಸಂದರ್ಭದಲ್ಲಿ ಹೆಚ್ಚಾಗಿ ಕಾಲ್ನಡಿಗೆಯಲ್ಲಿ ಬರುತ್ತಿದ್ದ ಭಕ್ತರು ಕೆಲವು ವರ್ಷಗಳಿಂದೀಚೆಗೆ ವರ್ಷಪೂರ್ತಿ ಪಾದಯಾತ್ರೆಯಲ್ಲಿ ಬರುತ್ತಿದ್ದಾರೆ. ಹೀಗೆ ಕಾಲ್ನಡಿಗೆಯಲ್ಲಿ ಕಾಡಿನ ಹಾದಿಯಲ್ಲಿ ಬರುವಾಗ ಭಕ್ತರು ಪ್ರಾಣಿಗಳ ದಾಳಿ ಭೀತಿ ಎದುರಿಸುತ್ತಿದ್ದಾರೆ.
ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಂದ ಶಿವರಾತ್ರಿ ಜಾತ್ರೆ ವೇಳೆ ಭಕ್ತರು ಕನಕಪುರದ ಮೂಲಕ ಕಾವೇರಿ ನದಿ ದಾಟಿ ಹನೂರು ತಾಲ್ಲೂಕಿನ ಬಸವನಕಣ ತಲುಪುತ್ತಾರೆ. ಬಳಿಕ ಕಾಡಿನೊಳಗೆ ಸಂಚರಿಸಿ ಶಾಗ್ಯ, ಡಿ.ಎಂ ಸಮುದ್ರ, ಎಲ್ಲೆಮಾಳ, ಮಲ್ಲಯ್ಯನಪುರ, ಕೌದಳ್ಳಿ, ವಡಕೆಹಳ್ಳ, ಕೋಣನಕೆರೆ, ತಾಳುಬೆಟ್ಟ ಮಾರ್ಗವಾಗಿ ಮಹದೇಶ್ವರನ ಕ್ಷೇತ್ರ ತಲುಪುತ್ತಾರೆ. ಈ ಹಾದಿ ಬಹುತೇಕ ಅರಣ್ಯ ಪ್ರದೇಶದಿಂದ ಕೂಡಿದ್ದು ಕಾಡು ಪ್ರಾಣಿಗಳ ದಾಳಿ ಭೀತಿಯಿಂದ ಭಕ್ತರಿಗೆ ಸುರಕ್ಷತೆ ಇಲ್ಲದಂತಾಗಿದೆ.
ಮುತ್ತತ್ತಿ ಹೊಳೆ ದಾಟುವಾಗ ಹಾಗೂ ತಾಳುಬೆಟ್ಟದ ಬಳಿ ಅರಣ್ಯ ಇಲಾಖೆಯ ಅಧಿಕಾರಿಗಳು ಇರುವುದು ಬಿಟ್ಟರೆ ಉಳಿದ ಮಾರ್ಗದಲ್ಲಿ ಅಗತ್ಯ ರಕ್ಷಣೆ ಇಲ್ಲದಂತಾಗಿದೆ ಎಂದು ದೂರುತ್ತಾರೆ ಭಕ್ತರು. ಎರಡು ವರ್ಷಗಳ ಹಿಂದಷ್ಟೇ ಮಲೆ ಮಹದೇಶ್ವರ ಬೆಟ್ಟದ ಸಮೀಪದ ಶನಿ ಮಹಾತ್ಮನ ದೇವಾಲಯದ ಬಳಿ ಆನೆ ತುಳಿತಕ್ಕೆ ಮಹಿಳೆ ಬಲಿಯಾಗಿದ್ದರು. ಬುಧವಾರ ಮಂಡ್ಯ ಜಿಲ್ಲೆಯ ಚೀರನಹಳ್ಳಿ ಗ್ರಾಮದ ಪ್ರವೀಣ್ ಚಿರತೆ ದಾಳಿಗೆ ಬಲಿಯಾಗಿದ್ದಾರೆ. ಮುಂದೆ ಇಂತಹ ಅವಘಡಗಳು ಸಂಭವಿಸದಂತೆ ಪಾದಯಾತ್ರೆಯಲ್ಲಿ ಬರುವ ಭಕ್ತರಿಗೆ ಸೂಕ್ತ ಭದ್ರತೆ ನೀಡಬೇಕು ಎಂದು ಒತ್ತಾಯಿಸುತ್ತಾರೆ ಭಕ್ತರು.
ಮಹದೇಶ್ವರನ ಬೆಟ್ಟಕ್ಕೆ ಬರುವ ಭಕ್ತರಿಗೆ ತಾಳುಬೆಟ್ಟ ಸಹಿತ ಇತರೆಡೆಗಳಲ್ಲಿ ತಂಗಲು ವ್ಯವಸ್ಥೆ ಇಲ್ಲ. ನೂರಾರು ಕಿ.ಮೀ ದೂರದಿಂದ ಬರುವ ಭಕ್ತರಿಗೆ ವಿಶ್ರಾಂತಿ ಪಡೆಯಲು ವ್ಯವಸ್ಥೆ ಮಾಡಿದರೆ ಅನುಕೂಲವಾಗುತ್ತದೆ ಎನ್ನುತ್ತಾರೆ ಮಂಡ್ಯ ಮೂಲದ ಭಕ್ತ ಬಸವಣ್ಣ. ತಿರುಪತಿ ಮಾದರಿಯಲ್ಲಿ ಕಾಲ್ನಡಿಗೆ ದಾರಿ ಮಾಡುವುದಾಗಿ ಹೇಳಿರುವ ಪ್ರಾಧಿಕಾರ ಕಳೆದ 5 ವರ್ಷದಿಂದ ಬೆಟ್ಟವೇರಲು ಮೆಟ್ಟಿಲುಗಳನ್ನು ಮಾತ್ರ ನಿರ್ಮಾಣ ಮಾಡುತ್ತಿದ್ದಾರೆ. ಇದರಿಂದ ಸುರಕ್ಷತೆ ಇಲ್ಲದಂತಾಗಿದೆ ಎಂದು ದೂರುತ್ತಾರೆ ಭಕ್ತರು.
‘ಮುಂದೆ ಇಂತಹ ದುರ್ಘಟನೆಗಳು ನಡೆಯದಂತೆ ಎಚ್ಚರ ವಹಿಸಲಾಗುವುದು. ಶಿವರಾತ್ರಿ ಜಾತ್ರೆಯ ಸಂದರ್ಭ ಕಾಲ್ನಡಿಗೆಯಲ್ಲಿ ಕ್ಷೇತ್ರಕ್ಕೆ ಬರುವ ಭಕ್ತರಿಗೆ ರಕ್ಷಣೆ ನೀಡುವ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ. ಅರಣ್ಯ ರಕ್ಷಕರು ಹಾಗೂ ಅರಣ್ಯ ವೀಕ್ಷಕರು ಗಸ್ತು ನಡೆಸುವಂತೆ ಸೂಚಿಸಲಾಗುವುದು. ಪ್ರಾಧಿಕಾರದಿಂದ ಗಸ್ತು ವಾಹನ ಹಾಕಲಾಗುವುದು. ನಿರ್ದಿಷ್ಟ ಅವಧಿಯಲ್ಲಿ ಮಾತ್ರ ಭಕ್ತರು ಅರಣ್ಯ ಪ್ರದೇಶದೊಳಗೆ ಪಾದಯಾತ್ರೆ ಮಾಡಬೇಕು’ ಎಂದು ಹನೂರು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.
ಮಾದಪ್ಪನ ಸನ್ನಿಧಿಗೆ ಪಾದಯಾತ್ರೆಯಲ್ಲಿ ಬಂದರೆ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬ ಅಚಲ ನಂಬಿಕೆ ಭಕ್ತರಲ್ಲಿದ್ದು ವರ್ಷಪೂರ್ತಿ ಭಕ್ತರು ಕಾಲ್ನಡಿಗೆಯಲ್ಲಿ ಕ್ಷೇತ್ರಕ್ಕೆ ಬರುತ್ತಾರೆ. ಕೊಳ್ಳೇಗಾಲದಿಂದ ಹನೂರಿಗೆ ಬಂದು ತಾಳುಬೆಟ್ಟ ತಲುಪಿ ಅಲ್ಲಿಂದ ಬಸವನ ಹಾದಿಯಲ್ಲಿ ಮಹದೇಶ್ವರನ ದೇವಸ್ಥಾನಕ್ಕೆ ಹೋಗುವುದು ರೂಢಿ. ಭಕ್ತರು ಬೆಟ್ಟ ಹತ್ತಲು ಅನುಕೂಲವಾಗುವಂತೆ ಪ್ರಾಧಿಕಾರದಿಂದ 2021–22ರಲ್ಲಿ ಮೆಟ್ಟಿಲುಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ತಾಳುಬೆಟ್ಟದಿಂದ 7 ಕಿ.ಮೀ ದೂರದಲ್ಲಿರುವ ಮಾದಪ್ಪನ ಬೆಟ್ಟದವರೆಗಿನ ಹಾದಿ ಪರಿಸರ ಸೂಕ್ಷ್ಯ ವಲಯವಾಗಿದ್ದು ನಿರ್ಮಾಣ ಕಾಮಗಾರಿಗಳಿಗೆ ಅವಕಾಶವಿಲ್ಲ ಎನ್ನುತ್ತಾರೆ ಅಧಿಕಾರಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.