
ಯಳಂದೂರು: ಪಟ್ಟಣ ಸೇರಿ ತಾಲ್ಲೂಕಿನ ವಿವಿಧ ಗ್ರಾಮ ಹಾಗೂ ಬೆಟ್ಟದ ಹತ್ತಾರು ದೇವಾಲಯಗಳಲ್ಲಿ ಧನುರ್ಮಾಸ ಪೂಜೆಗಳು ಆರಂಭವಾಗಿವೆ. ಡಿ.16 ರಿಂದ ಬೆಳಗಿನ ಪ್ರಾತಃಕಾಲದಲ್ಲಿ ಭಕ್ತ ಗಣ ಶ್ರದ್ಧಾಭಕ್ತಿಯಿಂದ ಜಪ, ತಪ, ಪಾರಾಯಣ ಮಾಡುತ್ತಿದ್ದು, ದೇವಳಗಳಲ್ಲಿ ಭಕ್ತಿ ಸುಧೆ ಹಾಗೂ ಘಂಟಾ ನಾದ ಕೇಳಿಬರುತ್ತಿದೆ.
ಪಟ್ಟಣದ ಗೌರೀಶ್ವರ ದೇವಳ, ಚಿಕ್ಕ ತಿರುಪತಿ, ಅಗರ ರಾಮೇಶ್ವರ, ಅಂಕಳ ಪರಮೇಶ್ವರಿ ಹಾಗೂ ಬಿಳಿಗಿರಿವಾಸನ ಸನ್ನಿಧಿಯಲ್ಲಿ ಧನು ಸಂಕ್ರಮಣದ ಧಾರ್ಮಿಕ ಕಾರ್ಯಗಳು ನಡೆಯುತ್ತಿವೆ. ಮುಂಜಾನೆ 4 ರಿಂದ ಬೆಳಗಿನ 6ವರೆಗೆ ಬ್ರಹ್ಮ ಮುಹೂರ್ತದ ಸಮಯದಲ್ಲಿ ದೈವಾರಾಧನೆಗೆ ಒತ್ತು ನೀಡಲಾಗಿದ್ದು, ಮಹಾಲಕ್ಷ್ಮಿ, ನಾರಾಯಣ ಪಾರಾಯಣ ಹಾಗೂ ಲಕ್ಷ್ಮಿಯ ಮೂವತ್ತು ಮಂತ್ರಗಳ ಸ್ಮರಣೆ, ಪಠಣೆ ಹಾಗೂ ವಿಶೇಷ ಅಲಂಕಾರ ಭಕ್ತರ ಆಕರ್ಷಣೆಗೆ ಕಾರಣವಾಗಿದೆ.
ಧನುರ್ಮಾಸದಲ್ಲಿ ಮಂಗಳಕಾರ್ಯ ನಡೆಯುವುದಿಲ್ಲ. ಈ ದಿನ ಸುಬ್ರಹ್ಮಣ್ಯ, ನಾರಾಯಣ ಪೂಜೆ, ಜಪ ಮತ್ತು ವ್ರತಗಳಿಗೆ ಮೀಸಲಾಗಿದೆ. ವಿಶೇಷವಾಗಿ ಲಕ್ಷ್ಮಿಪೂಜೆಗೆ ಮೊದಲ ಮನ್ನಣೆ ನೀಡಲಾಗಿದ್ದು, ಲಕ್ಷ್ಮಿ ಕಟಾಕ್ಷ ಮಾಸವಾಗಿ ಪರಿಗಣಿಸಲಾಗಿದೆ. ಈ ವೇಳೆ ತನು ಮನದಿಂದ ದೇವಿಯನ್ನು ಅರ್ಚಿಸಿದರೆ ಮನೆ ಮಂದಿಗೆ ವಿದ್ಯೆ, ವಿನಯ, ಸಂಪತ್ತು, ಕೀರ್ತಿ, ಮೋಕ್ಷ ಲಭಿಸುತ್ತದೆ. ಹಾಗಾಗಿ, ಸೂರ್ಯ ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವವರಿಗೆ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯ ನಡೆಸುವುದು ಶುಭಕರ ಎನ್ನುತ್ತಾರೆ ಅಗರ ಅಂಕಳಪರಮೇಶ್ವರಿ ದೇವಳದ ಅರ್ಚಕ ಸುಂದ್ರಪ್ಪ.
ಧನುರ್ಮಾಸ ಪ್ರಾರ್ಥನೆಗೆ ಮಹಾ ಪವಿತ್ರಕಾಲ ಎನ್ನಲಾಗಿದೆ. ಈ ಸಮಯ ಸೂರ್ಯೋದಯಕ್ಕೂ ಮೊದಲು ಬ್ರಾಹ್ಮೀ ಮುಹೂರ್ತದಲ್ಲಿ ವಿಷ್ಣು ದೇವಾಲಯಗಳಲ್ಲಿ ವಿಶೇಷ ಪೂಜೆ, ನೈವೇದ್ಯ ನಡೆಸಿ, ವೆಂಕಟೇಶ ಪಠಣ ಸ್ತೋತ್ರ ಮಾಡಲಾಗುತ್ತದೆ. ಈ ಪೂಜೆಯಿಂದ ಜನ್ಮ ಜನ್ಮಾಂತರ ಪಾಪಗಳು ನಾಶವಾಗಿ, ಮೋಕ್ಷ ಪ್ರಾಪ್ತಿಯಾಗುತ್ತದೆ. ಮಹಿಳೆಯರು ವಿಶೇಷವಾಗಿ ಕಾತ್ಯಾಯಿನಿ ವ್ರತ ಆಚರಿಸಿ ಪ್ರಾಪ್ತಿ ಸಿದ್ಧಿಗಾಗಿ ಹರಕೆ ಸಲ್ಲಿಸುತ್ತಾರೆ ಎಂದು ಪಟ್ಟಣದ ಗೌರೀಶ್ವರ ದೇವಳದ ಆಗಮಿಕ ಚಂದ್ರಮೌಳಿ ಹೇಳುತ್ತಾರೆ.
ಪೂಜಾ ವಿಧಾನ ವೈಭವ
ವಿಷ್ಣು ದೇವಸ್ಥಾನಗಳಿಗೆ ತೆರಳುವವರು ಮುಂಜಾವದ ಆಗಸದಲ್ಲಿ ನಕ್ಷತ್ರಗಳು ಕಾಣಿಸುವಾಗ ದೈವ ಸಂಕಲ್ಪಮಾಡಿ ಆರಾಧಿಸಬೇಕು. ಮೊದಲ 15 ದಿನ ಸಿಹಿ ಹಾಗೂ ನಂತರದ 15 ದಿನ ಖಾರದ ಹುಗ್ಗಿ ಅರ್ಪಿಸಬೇಕು. ಈ ವೇಳೆ ದಾನ ಧರ್ಮಕ್ಕೂ ಅವಕಾಶ ನೀಡಲಾಗಿದೆ. ಅರ್ಚನೆ ನಂತರ ಭಕ್ತರಿಗೆ ಉಪಹಾರ ಪ್ರಸಾದ ವಿತರಿಸಲಾಗುತ್ತದೆ. ಭಕ್ತರು ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಹುಗ್ಗಿ, ಪಾಯಸ ಸೇವನೆ ಮಾಡಬಹುದು ಎನ್ನುತ್ತಾರೆ ಚಿಕ್ಕತಿರುಪತಿ ದೇವಸ್ಥಾನದ ಆಗಮಿಕ ಸೇತು ಮಾಧವರಾವ್.
ಗ್ರಾಮೀಣ ಪ್ರದೇಶಗಳಲ್ಲಿ ವೃಕ್ಷಗಳಿಗೆ ಪೂಜೆ ಸಲ್ಲಿಸಿ ಧನುರ್ಮಾಸಚರಣೆ ಪೂರೈಸುತ್ತಾರೆ. ಕೆಲವೆಡೆ 9 ದಿನ ಇಲ್ಲವೆ 12 ದಿನಗಳ ಕಾಲ ಪೂಜೆ ಸಲ್ಲಿಸುತ್ತಾರೆ. ಈ ಸಮಯದಲ್ಲಿ ಮದುವೆ ಮತ್ತು ಗೃಹಕಾರ್ಯ ನಡೆಯುವುದಿಲ್ಲ. ಈ ದಿನಗಳಲ್ಲಿ ಸೂರ್ಯನ ಚಲನೆ ನಿಧಾನವಾಗಿದ್ದು, ಗುರುವಿನ ಮೇಲೆ ಪರಿಣಾಮ ಬೀರದು ಎಂಬ ನಂಬಿಕೆ ಇದೆ. ಹಾಗಾಗಿ, ಶೂನ್ಯಮಾಸವನ್ನು ಪೂಜಾ ಸಮಯಗಳಿಗೆ ಮಾತ್ರ ಮೀಸಲಿಟ್ಟು, ಆರಾಧನೆಗೆ ಮಿತಿಗೊಳಿಸಲಾಗಿದೆ ಎನ್ನುತ್ತಾರೆ ಅರ್ಚಕರು.
ಮನೆ ಮನಗಳಲ್ಲಿ ಶಾಂತಿ ಸಮೃದ್ಧಿ ನೆಲೆಸಲು ಹಾಗೂ ಮುಂದಿನ ದಿನಗಳಲ್ಲಿ ಮಂಗಳಕರ ಕೆಲಸಗಳು ನಡೆಸಲು ಸೂರ್ಯೋದಯಕ್ಕೂ ಮೊದಲು ಶುಚಿರ್ಭೂತರಾಗಿ ಪೂಜೆ ಸಲ್ಲಿಸುತ್ತೇವೆ.– ಸುಭದ್ರಮ್ಮ, ಗೃಹಿಣಿ ಅಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.