ಸಂತೇಮರಹಳ್ಳಿ: ಕೇಂದ್ರ ಸ್ಥಾನದಲ್ಲಿ ಆರಂಭವಾಗಿರುವ ಡಿಜಿಟಲ್ ಗ್ರಂಥಾಲಯ ವಿದ್ಯಾರ್ಥಿಗಳಿಗೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವವರಿಗೆ ವರದಾನವಾಗಿ ಪರಿಣಮಿಸಿದೆ.
ಹಿಂದಿನ ದಿನಗಳಲ್ಲಿ ಗ್ರಂಥಾಲಯಕ್ಕೆ ಪ್ರತಿದಿನ ದಿನಪತ್ರಿಕೆ ಓದಲು ಬೆರಳೆಣಿಕೆಯಷ್ಟು ಮಂದಿ ಬರುತ್ತಿದ್ದರು. ಕಳೆದ ವರ್ಷದ ಆಗಸ್ಟ್‌ನಲ್ಲಿ ಆರಂಭವಾದ ಡಿಜಿಟಲ್ ಗ್ರಂಥಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಓದುಗರು ಭೇಟಿ ನೀಡುತ್ತಿದ್ದಾರೆ. ಶಾಲಾ ವಿದ್ಯಾರ್ಥಿಗಳು, ಪದವಿಪೂರ್ವ, ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳು ಮಾತ್ರವಲ್ಲದೆ, ವಿದ್ಯಾಭ್ಯಾಸ ಮುಗಿಸಿರುವ, ಉದ್ಯೋಗದ ಹುಡುಕಾಟದಲ್ಲಿರುವವರು ಬಂದು ಪ್ರಯೋಜನ ಪಡೆಯುತ್ತಿದ್ದಾರೆ.
ದಿನಪತ್ರಿಕೆಗಳು, ಸಾಹಿತ್ಯ, ವಿಜ್ಞಾನ, ಕಲೆ, ರಾಜಕೀಯ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಸ್ವಾತಂತ್ರ್ಯ ಹೋರಾಟಗಾರರು, ಮಹಾನ್ ನಾಯಕರ ಆತ್ಮ ಚರಿತ್ರೆ, ಕನ್ನಡ ನಿಘಂಟು, ಭಾರತದ ಇತಿಹಾಸ, ಅರ್ಥಶಾಸ್ತ್ರ, ಭಾರತ ಸಂವಿಧಾನ ಸೇರಿದಂತೆ ಪ್ರಸ್ತುತಕ್ಕೆ ಅವಶ್ಯಕವಾಗಿರುವ ಕೆಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳು ಓದುಗರನ್ನು ಆಹ್ವಾನಿಸುತ್ತಿವೆ. ಕಂಪ್ಯೂಟರ್ ಹಾಗೂ ಲ್ಯಾಪ್‌ಟಾಪ್ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ.
ಸರ್ಕಾರಿ ಹಾಗೂ ಖಾಸಗಿ ಶಾಲಾ ವಿದ್ಯಾರ್ಥಿಗಳು ಪ್ರತಿದಿನ ಶಾಲೆ ಬಿಟ್ಟ ನಂತರ ಭೇಟಿಕೊಟ್ಟು ದಿನಪತ್ರಿಕೆಗಳು, ಮಕ್ಕಳ ಕಥೆ ಪುಸ್ತಕಗಳನ್ನು ಓದುವುದರ ಜೊತೆಗೆ ಕಂಪ್ಯೂಟರ್ ಜ್ಞಾನ, ಲ್ಯಾಪ್ ಟಾಪ್ ಬಳಸುವ ವಿಧಾನವನ್ನು ತಿಳಿದುಕೊಳ್ಳುತ್ತಿದ್ದಾರೆ. ಜತೆಗೆ, ಕೇರಂ, ಚೆಸ್, ಹಾವು ಏಣಿ ಆಟ, ಬ್ಯಾಡ್ಮಿಂಟನ್ ಹಾಗೂ ಸ್ಕಿಪಿಂಗ್ ಆಟಗಳ ಸಲಕರಣೆಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಓದುವುದರ ಜತೆಗೆ ಮನರಂಜನೆಗೂ ಹೆಚ್ಚು ಅವಕಾಶ ಕಲ್ಪಿಸಿರುವುದಿಂದ ವಿದಾರ್ಥಿಗಳು ಉತ್ಸಾಹದಿಂದ ಬರುತ್ತಿದ್ದಾರೆ.
1091 ಸದಸ್ಯರು: ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳ ಆನ್‌ಲೈನ್ ಅಧ್ಯಯನಕ್ಕೆ ಇಂಟರ್‌ನೆಟ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಇಲ್ಲಿಯೇ ನೌಕರಿಗಳಿಗೆ ವಿದ್ಯಾರ್ಥಿಗಳು ಅರ್ಜಿ ಹಾಕುತ್ತಿದ್ದಾರೆ. ಗ್ರಂಥಾಲಯದಲ್ಲಿ ಸಿಗದ ಪುಸ್ತಕಗಳು, ಇ ಲೈಬ್ರರಿಯಲ್ಲಿ ದೊರಕುತ್ತಿವೆ ಎಂದು ವಿದಾರ್ಥಿಗಳು ಹೇಳುತ್ತಾರೆ.
ಗ್ರಂಥಾಲಯಕ್ಕೆ ಅರ್ಜಿ ಶುಲ್ಕ ಸೇರಿ ₹22 ನಿಗದಿ ಮಾಡಲಾಗಿದೆ. ಈಗಾಗಲೇ 1091 ಮಂದಿ ಸದಸ್ಯತ್ವ ಪಡೆದುಕೊಂಡಿದ್ದಾರೆ. 800 ಶಾಲಾ ವಿದ್ಯಾರ್ಥಿಗಳನ್ನು ಉಚಿತವಾಗಿ ಸದಸ್ಯತ್ವ ಮಾಡಿಕೊಳ್ಳಲಾಗಿದೆ. ಸದಸ್ಯತ್ವ ಪಡೆದವರು ಪುಸ್ತಕಗಳನ್ನು ಎರವಲು ಪಡೆದುಕೊಂಡು ಆಗಾಗ್ಗೆ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ.
‘ಗ್ರಂಥಾಲಯದಲ್ಲಿ ಅಭ್ಯಾಸ ಮಾಡಲು ಉತ್ತಮ ವಾತಾವರಣವಿದೆ. ಒಬ್ಬ ಓದುಗನಿಗೆ ಅವಶ್ಯವಾಗಿರುವ ಎಲ್ಲ ಸಂಪನ್ಮೂಲಗಳು ಲಭ್ಯವಿದೆ. ಹಾಗಾಗಿ ಸೌಲಭ್ಯವನ್ನು ಬಳಸಿಕೊಳ್ಳುತ್ತಿದ್ದೇವೆ’ ಎಂದು ಯಲಕ್ಕೂರು ಮಂಜು ಹೇಳುತ್ತಾರೆ.
‘ಕುಡಿಯುವ ನೀರಿನ ಜೊತೆಗೆ ಡಿಜಿಟಲ್ ವ್ಯವಸ್ಥೆಯೊಂದಿಗೆ ಓದುಗರಿಗೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಓದುಗರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ’ ಎಂದು ಗ್ರಂಥಾಪಾಲಕಿ ನಿರ್ಮಲಾ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.