
ಅಂಗವಿಕಲ ಮಕ್ಕಳನ್ನು ಯಾರು ಕೀಳಾಗಿ ಕಾಣದಿರಿ | ಎಸ್‌ಎಸ್‌ಎಲ್‌ಸಿ: ಹೆಚ್ಚು ಅಂಕಗಳಿಸಿದ ಮಕ್ಕಳಿಗೆ ಸನ್ಮಾನ
ಕೊಳ್ಳೇಗಾಲ: ‘ಅಂಗವಿಕಲ ಮಕ್ಕಳು ದೇವರ ಸಮಾನವಾಗಿದ್ದು, ಅವರ ಬೇಡಿಕೆ ಅರ್ಥೈಸಿಕೊಂಡು ಈಡೇರಿಸುವುದು ಪುಣ್ಯದ ಸೇವೆ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಗುರುಶಾಂತಪ್ಪ ಬೆಳ್ಳುಂಡಗಿ ಹೇಳಿದರು.
ನಗರದ ಗುರುಭವನದಲ್ಲಿ ಸೋಮವಾರ ಶಾಲಾ ಶಿಕ್ಷಣ ಇಲಾಖೆ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ, ಚಾಮರಾಜನಗರ ಜಿಲ್ಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾಗೂ ಅಲಿಂಕೋ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ನಡೆದ ಅಂಗವಿಕಲ ಮಕ್ಕಳಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಅಂಗವಿಕಲ ಮಕ್ಕಳನ್ನು ಯಾರು ಕೀಳಾಗಿ ಕಾಣಬಾರದು. ಈ ಮಕ್ಕಳಿಗೆ ಎಲ್ಲಾ ಕ್ಷೇತ್ರದಲ್ಲೂ ಸಹ ಮೊದಲ ಆದ್ಯತೆ ನೀಡಬೇಕು. ಇಂತಹ ಮಕ್ಕಳ ಸೇವೆ ಮಾಡುವುದು ಬಹಳ ಪುಣ್ಯದ ಕೆಲಸ ಎಂದರು.
ಈ ಮಕ್ಕಳು ಸಮಾಜದ ಆಸ್ತಿ. ಇವರ ಆರೈಕೆ ಮಾಡುವುದು, ಶೈಕ್ಷಣಿಕ ಚಟುವಟಿಕೆಗೆ ಪ್ರೇರಣೆ ನೀಡುವುದು ಬಹಳ ಜವಾಬ್ದಾರಿಯುತ ಸ್ಥಾನವಾಗಿದೆ. ಆ ಕಾರಣ ಸರ್ಕಾರದಿಂದ ಬರುವ ಪ್ರತಿಯೊಂದು ಸವಲತ್ತುಗಳನ್ನು ಮಕ್ಕಳಿಗೆ ನೀಡಬೇಕು ಎಂದು ತಿಳಿಸಿದರು.
ಅಂಗವಿಕಲ ಮಕ್ಕಳು ತಮ್ಮ ಕಷ್ಟಗಳನ್ನು ಹೇಳಿಕೊಳ್ಳುವುದಿಲ್ಲ. ಮನಸ್ಸಿನಲ್ಲಿ ಇಟ್ಟುಕೊಂಡು ಅನುಭವಿಸುತ್ತಾರೆ. ಹಾಗಾಗಿ ಅಂತಹ ಮಕ್ಕಳ ಜೊತೆ ಸ್ನೇಹ ಬಾಂಧವ್ಯ ಬೆಳೆಸಿ ಅವರ ಆರೋಗ್ಯ ಹಾಗೂ ಶಿಕ್ಷಣದ ಬಗ್ಗೆ ಪ್ರತಿಯೊಬ್ಬ ಶಿಕ್ಷಕರು ಹಾಗೂ ಸಾರ್ವಜನಿಕರು ತಿಳಿದುಕೊಳ್ಳಬೇಕು. ಹೀಗಾದರೆ ಮಾತ್ರ ಅವರ ಯೋಗಕ್ಷೇಮ ವಿಚಾರಿಸಲು ಸಾಧ್ಯ ಎಂದರು.
ಮಕ್ಕಳ ಶಿಕ್ಷಣಕ್ಕೆ ಹಾಗೂ ವಿವಿಧ ಕ್ಷೇತ್ರಗಳಿಗೆ ಎಷ್ಟು ಆಸಕ್ತಿ ವಹಿಸುತ್ತಾರೋ ಅಷ್ಟೇ ಆರೋಗ್ಯದ ಬಗ್ಗೆಯೂ ಸಹ ಕಾಳಜಿ ವಹಿಸಬೇಕು. ಆರೋಗ್ಯವಿದ್ದರೆ ಮಾತ್ರ ನಾವು ಜೀವನದಲ್ಲಿ ಏನು ಬೇಕಾದರೂ ಸಾಧನೆ ಮಾಡಬಹುದು. ಹಾಗಾಗಿ ಇಂತಹ ಮಕ್ಕಳು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ 7 ಅಂಗವಿಕಲ ಮಕ್ಕಳಿಗೆ ಸನ್ಮಾನಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಮಹದೇವ ಕುಮಾರ್, ಜಿಲ್ಲಾ ಸಮನ್ವಯ ಶಿಕ್ಷಣಾಧಿಕಾರಿ ಉಮೇಶ್, ಅಂಗವಿಕಲರ ಸಂಘದ ಅಧ್ಯಕ್ಷ ಸಿದ್ದರಾಜು, ಸರ್ಕಾರಿ ವೈದ್ಯ ಡಾ.ಶೇಖರಾಜು, ಡಾ.ರಮೇಶ್, ಡಾ.ದಿಲೀಪ್, ನಿವೃತ್ತ ಶಿಕ್ಷಕ ರಾಮಯ್ಯ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಂಗಸ್ವಾಮಿ, ಇಸಿಒ ವಿಜಯಕುಮಾರ್, ವಿಶೇಷ ಚೇತನ ಮಕ್ಕಳ ನೋಡಲ್ ಬಿಆರ್‌ಪಿ ಹೀನಾ ಕೌಶರ್, ಇಸಿಒ ಬಸವರಾಜು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.