ADVERTISEMENT

ಪೋಷಕರ ತಪ್ಪು ಕಲ್ಪನೆ ಸರ್ಕಾರಿ ಶಾಲೆಗೆ ಮುಳು: ಮಹಾದೇವ ಶಂಕನಪುರ

ಸಮ್ಮೇಳನ ಸರ್ವಾಧ್ಯಕ್ಷರೊಂದಿಗೆ ಸಂವಾದ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2023, 6:21 IST
Last Updated 10 ಫೆಬ್ರುವರಿ 2023, 6:21 IST
ಸಮ್ಮೇಳನದ ಸಮ್ಮೇಳಾನಾಧ್ಯಕ್ಷರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಹಾದೇವ ಶಂಕನಪುರ ಅವರು, ಅತಿಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು
ಸಮ್ಮೇಳನದ ಸಮ್ಮೇಳಾನಾಧ್ಯಕ್ಷರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಹಾದೇವ ಶಂಕನಪುರ ಅವರು, ಅತಿಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು   

ಕೊಳ್ಳೇಗಾಲ: ‘ಕನ್ನಡ ಅಥವಾ ಸರ್ಕಾರಿ ಶಾಲೆ ಎಲ್ಲವನ್ನೂ ಪೂರೈಸಲು ಸಾಧ್ಯವಿಲ್ಲ ಎಂದು ಪೋಷಕರು ಇಂಗ್ಲಿಷ್ ಶಿಕ್ಷಣಕ್ಕೆ‌ ಮಾರು ಹೋಗುತ್ತಿರುವುದರಿಂದಲೇ ಇಂದು ಸರ್ಕಾರಿ ಕನ್ನಡ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿವೆ’ ಎಂದು ಚಾಮರಾಜನಗರ ಜಿಲ್ಲಾ 12ನೇ ಸಾಹಿತ್ಯ ಸಮ್ಮೇಳನಧ ಸರ್ವಾಧ್ಯಕ್ಷ ಮಹಾದೇವ ಶಂಕನಪುರ ಕಳವಳ ವ್ಯಕ್ತಪಡಿಸಿದರು.

ಸಮ್ಮೇಳನದ ಮೊದಲ ದಿನ ಬುಧವಾರ ಸಂಜೆ ನಡೆದ ಸಮ್ಮೇಳನದ ಸರ್ವಾಧ್ಯಕ್ಷರೊಂದಿಗೆ ಸಾಹಿತ್ಯ ಸಮ್ಮೇಳನದ ಸಂವಾದ ಕಾರ್ಯಕ್ರಮದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಸಂವಾದದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಗೋವಿಂದರಾಜು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಕನ್ನಡ ಸರ್ಕಾರಿ ಶಾಲೆಗಳ ಬಗ್ಗೆ ಇಂದಿನ ಪೋಷಕರಲ್ಲಿ ಇರುವ ತಪ್ಪು ಕಲ್ಪನೆಗಳೇ ಸರ್ಕಾರಿ ಶಾಲೆಗಳು ಮುಚ್ಚಲು ಕಾರಣವಾಗಿವೆ. ಸರ್ಕಾರಗಳು ಕನ್ನಡ ಶಾಲೆಗಳಲ್ಲಿರುವ ವ್ಯವಸ್ಥೆಯ ಬಗ್ಗೆ ಅರಿವು‌ ಮೂಡಿಸುವ ಅಗತ್ಯ ಇದೆ’ ಎಂದರು.

ADVERTISEMENT

ಇತಿಹಾಸ ಪ್ರಾಧ್ಯಾಪಕರಾಗಿದ್ದ ತಮಗೆ ಸಾಹಿತ್ಯದ ಒಲವು ಹೇಗೆ ಬಂತು ಎಂದು ಚಂದ್ರಶೇಖರ್ ತುಬಾರ್ ಕೇಳಿದ್ದಕ್ಕೆ, ‘ಜಾತಿ ಕಾರಣಕ್ಕೆ ಅನುಭವಿಸಿದ ನೋವು, ಕೀಳರಿಮೆ ಇವೆಲ್ಲವು ನನ್ನನ್ನು ದಟ್ಟವಾಗಿ ಆವರಿಸಿದ್ದವು. ಅದೆಲ್ಲವನ್ನು ಮಾತಿನ ಮೂಲಕ ಹೊರಹಾಕದೆ, ಸದಾ ಕಾಡುವ, ಘಟಿಸುವ ವಿಷಯಗಳನ್ನು ಕಾವ್ಯದ ಮೂಲಕ, ಅಧ್ಯಯನ ಮೂಲಕ ಹೊರಹಾಕಿದೆ. ಓದು, ಪಿಎಂಎಸ್‌ಆರ್ ಸಂಸ್ಥೆಯಲ್ಲಿ ಕೆಲಸ‌ ಮಾಡುವ ಸಂದರ್ಭದಲ್ಲಿ ಸಿಕ್ಕಿದ ಉತ್ತಮ ವೇದಿಕೆ ನನ್ನನ್ನು ಒಬ್ಬ ಉತ್ತಮ ಬರಹಗಾರನನ್ನಾಗಿ ರೂಪಿಸಿತು’ ಎಂದು ಮಹಾದೇವ ಉತ್ತರಿಸಿದರು.

ಚಿಕ್ಕಲ್ಲೂರು ಜಾತ್ರೆಯ ಪಂಕ್ತಿಸೇವೆ ಕುರಿತು ಮಾತನಾಡಿದ ಅವರು, ‘ಮಂಟೇಸ್ವಾಮಿ ಪರಂಪರೆಯಲ್ಲಿ ಎಲ್ಲಿಯೂ ಬಲಿಪೀಠವಿಲ್ಲ. ಬಸವಣ್ಣನವರ ವಚನ ಸಾಹಿತ್ಯದಲ್ಲಿ ಬರುವ ಅನ್ನದಾಸೋಹ ಪರಿಕಲ್ಪನೆಯೊಂದಿಗೆ ಮಂಟೇಸ್ವಾಮಿ ಪರಂಪರೆಯ ಪಂಕ್ತಿಸೇವೆಯೊಂದಿಗೆ ನೋಡಬೇಕಿದೆ’ ಎಂದರು.

‘ದಲಿತರ ರಾಜಕಾರಣ ವಿಷಯ ಬಂದಾಗ ಅಂಬೇಡ್ಕರ್ ಆಯ್ದುಕೊಂಡ ರಾಜಕೀಯವನ್ನು ಯಾರು ಮಾಡುತ್ತಿದ್ದಾರೆ ಎಂಬುದನ್ನು ಹುಡುಕಬೇಕಿದೆ. ಈ ವಿಷಯ ಹಲವು ಗೊಂದಲಗಳನ್ನು ಮೂಡಿಸಿದೆ. ದಲಿತರ ಮತಗಳ ಆಧಾರದ ಮೇಲೆ ರಾಜಕಾರಣ ಮಾಡುತ್ತ ವಿವಿಧ ಪಕ್ಷಗಳಲಿದ್ದುಕೊಂಡು ಪಕ್ಷ ನಿಷ್ಠೆಯಲ್ಲಿರುವ ದಲಿತ ನಾಯಕರು ಅಂಬೇಡ್ಕರ್ ಸೂಚಿಸಿದ ರಾಜಕಾರಣದಲ್ಲಿ ತಲ್ಲೀನರಾಗುವರೇ ಎಂಬುದೇ ಗೊಂದಲವಾಗಿದೆ’ ಎಂದರು.

ಡಾ.ಎನ್.ಕೆ.ದಿಲೀಪ್, ಚಂದ್ರಶೇಖರ್ ತುಬಾರ್, ನಿಂಗಪ್ಪ ಭೈರನತ್ತ, ಡಿ. ರವಿಕುಮಾರ್ ಇಂದ್ವಾಡಿ, ಗೋವಿಂದರಾಜು, ಬಾಳಗುಣಸೆ ಮಂಜುನಾಥ್ ಇದ್ದರು.

ಎರಡೂ ಕಾಲಘಟ್ಟಗಳು ಒಂದೇ...

12 ಶತಮಾನದ ಅಲ್ಲಮಪ್ರಭು ಹಾಗೂ ಚೆನ್ನಬಸವಣ್ಣ ಅವರನ್ನು ಮತ್ತು 16ನೇ ಶತಮಾನದ ಮಂಟೇಸ್ವಾಮಿ, ರಾಚಪ್ಪಾಜಿ ಅವರೊಂದಿಗೆ ಸಮೀಕರಿಸುವ ಬಗ್ಗೆ ಮಾತನಾಡಿದ ಮಹಾದೇವ ಶಂಕನಪುರ, ‘ಅಲ್ಲಮಪ್ರಭು, ಚೆನ್ನಬಸವಣ್ಣ ಅವರ ಆಶಯಗಳು ಹಾಗೂ ಮಂಟೇಸ್ವಾಮಿ, ರಾಚಪ್ಪಾಜಿ ಆಶಯಗಳು ಎರಡೂ ಒಂದೇ. ಎರಡು ಕಾಲಘಟ್ಟಗಳು ಬೇರೆ ಬೇರೆಯಾದರೂ ಸಾಮಾಜಿಕ ಅಸಮಾನತೆ, ಚಾರಿತ್ರಿಕ, ಸಾಂಸ್ಕೃತಿಕ ಪರಂಪರೆಗಳು ಒಂದೇ ಆಗಿರುವುದರಿಂದ ಎರಡು ಕಾಲಘಟ್ಟಗಳ ವ್ಯಕ್ತಿಗಳನ್ನು ಸಮೀಕರಿಸಿ ಅರ್ಥೈಸುವ ಅಗತ್ಯ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.