ADVERTISEMENT

ಹಾಲು, ಪಡಿತರ ಸಮರ್ಪಕ ವಿತರಣೆಗೆ ಸೂಚನೆ

ಕೊರೊನಾ ವೈರಸ್‌ ತಡೆ: ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2020, 15:23 IST
Last Updated 5 ಏಪ್ರಿಲ್ 2020, 15:23 IST
ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಪುಣಜನೂರು ಚೆಕ್‌ಪೋಸ್ಟ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಪುಣಜನೂರು ಚೆಕ್‌ಪೋಸ್ಟ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು   

ಚಾಮರಾಜನಗರ: ದಿಗ್ಬಂಧನದ ಸಂದರ್ಭದಲ್ಲಿ ಸರ್ಕಾರದ ಸೂಚನೆಯಂತೆ ಬಡವರಿಗೆ ಹಾಲು ಮತ್ತು ಪಡಿತರವನ್ನು ಸಮರ್ಪಕವಾಗಿ ವಿತರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಸೂಚಿಸಿದರು.

ವಿವಿಧೆಡೆ ಕೋವಿಡ್– 19 ತಡೆಗಾಗಿ ಜಿಲ್ಲಾಡಳಿತ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಪರಿಶೀಲನೆಗಾಗಿ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ ಬಳಿಕ ಅಧಿಕಾರಿಗಳೊಂದಿಗೆ ಅವರು ಸಭೆ ನಡೆಸಿದರು.

‘ಕೊಳಚೆ ಪ್ರದೇಶದ ವಾಸಿಗಳು, ವಲಸೆ ಕಾರ್ಮಿಕರು, ಕಟ್ಟಡ ಕಾರ್ಮಿಕರಿಗೆ ಹಾಲು ವಿತರಣೆಯಾಗುತ್ತಿದೆ. ಇದನ್ನು ಅತ್ಯಂತ ಹೊಣೆಗಾರಿಕೆಯಿಂದ ಅರ್ಹರಿಗೆ ಅವರು ಇರುವ ಕಡೆಗೆ ನೇರವಾಗಿ ತಲುಪಿಸಬೇಕು.ಪಡಿತರದಾರರಿಗೆ ಎರಡು ತಿಂಗಳ ಪಡಿತರ ಪದಾರ್ಥವನ್ನು ಮುಂಗಡವಾಗಿ ನೀಡಲಾಗುತ್ತಿದೆ. ಇದನ್ನು ಪಡೆಯುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚಿಸಬೇಕು. ಪಡಿತರದಾರರಿಗೆ ಯಾವುದೇ ತೊಂದರೆಯಾಗಬಾರದು. ಹೆಚ್ಚು ಜನಜಂಗುಳಿಯಾಗದಂತೆ ಸುಗಮವಾಗಿ ಪಡಿತರ ವಿತರಣೆ ಮಾಡಬೇಕು’ ಎಂದರು.

ADVERTISEMENT

ಕೃಷಿ ಚಟುವಟಿಕೆಗಳಿಗೆ ಪೂರಕವಾಗಿರುವ ಬಿತ್ತನೆ ಬೀಜ, ರಸಗೊಬ್ಬರ, ಕೃಷಿ ಪರಿಕರಗಳಿಗೆ ಕೊರತೆಯಾಗಬಾರದು. ತೋಟಗಾರಿಕೆ, ಕೃಷಿ ಉತ್ಪನ್ನಗಳ ಮಾರಾಟ ಸಾಗಣೆಗೆ ಯಾವುದೇ ಅಡಚಣೆಯಾಗದಂತೆ ನೋಡಿಕೊಳ್ಳಬೇಕು. ರಸಗೊಬ್ಬರ, ಕೃಷಿ ಪರಿಕರಗಳ ಅಂಗಡಿ ತೆರೆದು ಅನುಕೂಲ ಕಲ್ಪಿಸಿಕೊಡಬೇಕು ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾತನಾಡಿ, ‘ಕೃಷಿ ಪರಿಕರಗಳ ಅಂಗಡಿ ತೆರೆಯಲು ಪ್ರಸ್ತುತ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಕಾಲಾವಕಾಶ ನೀಡಲಾಗಿದೆ. ಅಗತ್ಯ ಬೇಡಿಕೆ ಇದ್ದರೆ ಸಮಯವನ್ನು ವಿಸ್ತರಿಸಲು ಕ್ರಮ ತೆಗೆದುಕೊಳ್ಳಲಾಗುತ್ತದೆ’ ಎಂದರು.

ಚೆಕ್‌ಪೋಸ್ಟ್, ಆಶ್ರಯ ಶಿಬಿರಕ್ಕೆ ಭೇಟಿ: ಇದಕ್ಕೂ ಮೊದಲು ಸುರೇಶ್‌ ಕುಮಾರ್‌ ಅವರು ತಾಲ್ಲೂಕಿನ ಗಡಿಭಾಗದ ಪುಣಜನೂರು ಚೆಕ್‌ಪೋಸ್ಟ್‌ಗೆ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲಿ ನಡೆಸಲಾಗುತ್ತಿರುವ ವಾಹನಗಳ ಪರಿಶೀಲನೆ, ಚಾಲಕರು, ಸಹಾಯಕರ ಆರೋಗ್ಯ ತಪಾಸಣೆ ಪ್ರಕ್ರಿಯೆಯನ್ನು ವೀಕ್ಷಿಸಿದರು.

‘ಪ್ರತಿಯೊಂದು ವಾಹನವನ್ನು ಸ್ಯಾನಿಟೈಸೇಷನ್ ಮಾಡಿಯೇ ಒಳಬಿಡಬೇಕು. ಕಟ್ಟುನಿಟ್ಟಿನ ತಪಾಸಣೆ ನಡೆಯಬೇಕು. ಚಾಲಕರು, ಸಹಾಯಕರು ಆರೋಗ್ಯವಾಗಿದ್ದಾರೆಯೇ ಎಂಬುದನ್ನು ಸ್ಕ್ರೀನಿಂಗ್ ಮೂಲಕ ಖಾತರಿ ಪಡಿಸಿಕೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಬಳಿಕ ಪುಣಜನೂರು ಬಳಿಯ ಪರಿಶಿಷ್ಟ ವರ್ಗಗಳ ಆಶ್ರಮ ಶಾಲೆಯಲ್ಲಿ ಆಶ್ರಯ ಪಡೆದಿರುವ ಹೊರಜಿಲ್ಲೆಯ ಕೆಲವು ನಾಗರಿಕರನ್ನು ಭೇಟಿ ಮಾಡಿ ಸಮಾಲೋಚಿಸಿದರು.

ಶಾಸಕರಾದ ಎನ್.ಮಹೇಶ್, ಸಿ.ಎಸ್.ನಿರಂಜನ್‌ಕುಮಾರ್, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್ ನಾರಾಯಣ ರಾವ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣನವರ್, ಉಪವಿಭಾಗಾಧಿಕಾರಿ ಅನಿತಾ ಎಸ್‌.ಚಿನ್ನಸ್ವಾಮಿ, ವೈದ್ಯಕೀಯ ಕಾಲೇಜಿನ ಡೀನ್ ಡಾ.ಸಂಜೀವ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಂ.ಸಿ.ರವಿ ಹಾಜರಿದ್ದರು.

ನಾನು ವಕ್ತಾರನಷ್ಟೇ: ಸುರೇಶ್‌ ಕುಮಾರ್‌

‘ಕೊರೊನಾ ವೈರಸ್‌ಗೆ ಸಂಬಂಧಿಸಿದ ವಿವರಗಳನ್ನು ನೀಡಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನನ್ನನ್ನು ನೇಮಿಸಿದ್ದಾರೆ. ನಾನು ವಕ್ತಾರನಷ್ಟೇ’ ಎಂದು ಸುರೇಶ್‌ ಕುಮಾರ್‌ ಅವರು ಸ್ಪಷ್ಟಪಡಿಸಿದರು.

ಪುಣಜನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸೋಂಕಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರೇ ಮಾಡುತ್ತಾರೆ. ಅಧಿಕಾರಿಗಳಿಂದ ಪಡೆದ ಮಾಹಿತಿಗಳನ್ನು ನೀಡುವುದಷ್ಟೇ ನನ್ನ ಕೆಲಸ’ ಎಂದರು.

ಕ್ರಮ ಯಶಸ್ವಿ: ‘ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಸರ್ಕಾರ ತೆಗೆದುಕೊಂಡಿರುವ ಕ್ರಮಗಳು ಯಶಸ್ವಿಯಾಗುತ್ತಿವೆ. ಇಡೀ ದೇಶದಲ್ಲಿ ಕರ್ನಾಟಕ 9ನೇ ಸ್ಥಾನದಲ್ಲಿದೆ. ದಿಗ್ಬಂಧನದ ಅವಧಿ ಮುಗಿಯುವುದರೊಳಗೆ ಇನ್ನಷ್ಟು ನಿಯಂತ್ರಣಕ್ಕೆ ಬರಲಿದೆ’ ಎಂದರು.

‘ಪ್ರಕರಣಗಳ ಸಂಖ್ಯೆ 50 ಸಾವಿರದಿಂದ 60 ಸಾವಿರ ಆಗಬಹುದು ಎಂದು ಕೆಲವರು ಎಚ್ಚರಿಸಿದ್ದರು. ಆದರೆ, ಸರ್ಕಾರ ಕೈಗೊಂಡ ಕ್ರಮಗಳ ಪರಿಣಾಮವಾಗಿ ಆ ರೀತಿ ಆಗಿಲ್ಲ.ಜ್ಯುಬಿಲಿಯಂಟ್ ಹಾಗು ನಿಜಾಮುದ್ದೀನ್ ವಿದ್ಯಮಾನ ಘಟಿಸದಿದ್ದರೆ ಪರಿಸ್ಥಿತಿ ಇನ್ನಷ್ಟು ನಿಯಂತ್ರಣದಲ್ಲಿ ಇರುತ್ತಿತ್ತು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.