ADVERTISEMENT

ಕೊಳ್ಳೇಗಾಲ: ದುರ್ನಾತ ಬೀರುತ್ತಿವೆ ಪ್ರಮುಖ ರಸ್ತೆಗಳು

ಡಾ.ಬಿ.ಆರ್‌.ಅಂಬೇಡ್ಕರ್‌, ಡಾ.ರಾಜ್‌ಕುಮಾರ್‌ ರಸ್ತೆಯಲ್ಲಿಲ್ಲ ಸಮರ್ಪಕ ಚರಂಡಿ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2023, 8:23 IST
Last Updated 11 ಡಿಸೆಂಬರ್ 2023, 8:23 IST
ಕೊಳ್ಳೇಗಾಲದ ಡಾ.ಬಿ.ಆರ್‌.ಅಂಬೇಡ್ಕರ್‌ ರಸ್ತೆಯಲ್ಲಿ ಅಂಚೆಕಚೇರಿ ಮುಂಭಾಗದಲ್ಲಿ ಕೊಳಚೆ ನೀರು ಹರಿಯುತ್ತಿರುವುದು
ಕೊಳ್ಳೇಗಾಲದ ಡಾ.ಬಿ.ಆರ್‌.ಅಂಬೇಡ್ಕರ್‌ ರಸ್ತೆಯಲ್ಲಿ ಅಂಚೆಕಚೇರಿ ಮುಂಭಾಗದಲ್ಲಿ ಕೊಳಚೆ ನೀರು ಹರಿಯುತ್ತಿರುವುದು   

ಕೊಳ್ಳೇಗಾಲ: ನಗರದ ಪ್ರಮುಖ ರಸ್ತೆಗಳಾದ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಡಾ.ರಾಜ್ ಕುಮಾರ್ ರಸ್ತೆಗಳಲ್ಲಿ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದಿರುವುದರಿಂದ ಗಬ್ಬು ನಾರುತ್ತಿದ್ದು, ಜನರು ತೊಂದರೆ ಅನುಭವಿಸುತ್ತಿದ್ದಾರೆ. 

ಎರಡೂ ರಸ್ತೆಗಳು ಪ್ರಮುಖ ವಹಿವಾಟಿನ ಸ್ಥಳಗಳಾಗಿದ್ದು, ಇಲ್ಲಿ ಜನರ ಓಡಾಟ ಹೆಚ್ಚಿದೆ. 

ಈ ರಸ್ತೆಗಳ ಎರಡೂ ಬದಿಗಳಲ್ಲಿ ಕೆಲವು ಕಡೆ ಚರಂಡಿ ಇವೆ. ಇನ್ನೂ ಕೆಲವು ಕಡೆಗಳಲ್ಲಿ ಇಲ್ಲ. ಮತ್ತೂ ಕೆಲವು ಕಡೆಗಳಲ್ಲಿ ದುರಸ್ತಿಯಲ್ಲಿದೆ. ಹೀಗಾಗಿ ಕೊಳಚೆ ನೀರೆಲ್ಲ ರಸ್ತೆಯಲ್ಲಿ ಹರಿಯುತ್ತದೆ.

ADVERTISEMENT

ಚಪ್ಪಡಿ ಕಲ್ಲುಗಳು ಅಡ್ಡಿ: ಪ್ರತಿಯೊಂದು ಅಂಗಡಿಯ ಮುಂದೆ ಅಂಗಡಿ ಮಾಲೀಕರು ಚರಂಡಿಗೆ ಚಪ್ಪಡಿ ಕಲ್ಲುಗಳನ್ನು ಹಾಕಿಕೊಂಡಿದ್ದಾರೆ. ಇದರಿಂದ ಚರಂಡಿಯಲ್ಲಿ ನೀರು ಸರಾಗವಾಗಿ ಹೋಗುತ್ತಿಲ್ಲ. ಅದಲ್ಲದೆ ಕೆಲ ಅಂಗಡಿ ಮಾಲೀಕರು ಕಸಗಳನ್ನು ಚರಂಡಿಗೆ ಸುರಿಯುತ್ತಿದ್ದಾರೆ. ಇದರಿಂಚ ಚರಂಡಿ ಕಟ್ಟಿಕೊಳ್ಳುತ್ತಿದೆ.

ಈ ರಸ್ತೆಗಳಲ್ಲಿ ಹೋಗಬೇಕಾದರೆ ಮೂಗು ಮುಚ್ಚಿಕೊಂಡು ಹೋಗಬೇಕಾಗಿದೆ. ನಗರ ಸಭೆಯವರು ಪ್ರಮುಖ ರಸ್ತೆಗಳ ಚರಂಡಿಗಳನ್ನೇ ಸುಸಜ್ಜಿತವಾಗಿಟ್ಟುಕೊಂಡಿಲ್ಲ. ಇನ್ನು ಉಳಿದ ರಸ್ತೆಗಳು, ಬಡಾವಣೆಗಳ ಪಾಡೇನು ಎಂದು ಪ್ರಶ್ನಿಸುತ್ತಾರೆ ಸಾರ್ವಜನಿಕರು. 

ಚರಂಡಿಯ ಚಪ್ಪಡಿ ಕಲ್ಲುಗಳನ್ನು ತೆಗೆದರೆ ನೀರು ಸರಾಗವಾಗಿ ಹರಿದು ಹೋಗುತ್ತದೆ. ಆಗ ನಗರ ಸಭೆಯವರು ಕಸಗಳನ್ನು ತೆಗೆಯಲೂ ಅನುಕೂಲವಾಗುತ್ತದೆ. ಆದರೆ, ಸಿಮೆಂಟ್ ಕಾಂಕ್ರೀಟ್, ಕಬ್ಬಿಣದ ಸಲಾಕೆಗಳಿಂದ ಚರಂಡಿಗಳನ್ನು ಮುಚ್ಚಿದ್ದಾರೆ. ಇದರಿಂದ ನೀರು ಹರಿದು ಹೋಗುತ್ತಿಲ್ಲ.

ಅಂಬೇಡ್ಕರ್‌ ರಸ್ತೆಯ ಚರಂಡಿಯಲ್ಲಿ ನೀರು ಕಟ್ಟಿ ನಿಂತಿರುವುದು

‘ಮಳೆ ಬಂದ ಸಂದರ್ಭದಲ್ಲಿ ಚರಂಡಿಯ ನೀರು ರಸ್ತೆಗೆ ಉಕ್ಕಿ ಎರಡು ರಸ್ತೆಗಳಲ್ಲಿ ನೀರು ನದಿಯಂತೆ ಹರಿಯುತ್ತದೆ.  ಹೋಟೆಲ್, ಮಾಂಸದ ಅಂಗಡಿಯವರು ಚರಂಡಿಗೆ ಕೊಳಚೆ ನೀರನ್ನು ಬಿಡುತ್ತಿದ್ದಾರೆ. ಇದರಿಂದಲೂ ಚರಂಡಿ ವಾಸನೆ ಬರುತ್ತಿದೆ.  ಎರಡೂ ರಸ್ತೆಗಳ ಚರಂಡಿಗಳನ್ನು ನಗರಸಭೆಯವರು ಸ್ವಚ್ಛತೆ ಮಾಡುತ್ತಿಲ್ಲ. ಚರಂಡಿಗಳಲ್ಲಿ ಹೂಳು ತೆಗೆಯದೆ ವರ್ಷಗಳು ಕಳೆದಿವೆ. ನಗರಸಭೆ ಅಧಿಕಾರಿಗಳು ಇನ್ನಾದರೂ ಈ ಬಗ್ಗೆ ಗಮನಹರಿಸಬೇಕು’ ಎಂದು ಪ್ರಭುಸ್ವಾಮಿ ಒತ್ತಾಯಿಸಿದರು. 

ತೆರೆದುಕೊಂಡಿರುವ ಚರಂಡಿ
ಕೊಳ್ಳೇಗಾಲದ್ದು ಹೆಸರಿಗಷ್ಟೇ ನಗರಸಭೆ. ಇಲ್ಲಿ ಯಾವ ಕೆಲಸವೂ ಸಹ ಆಗುವುದಿಲ್ಲ. ಗ್ರಾಮೀಣ ಭಾಗದಲ್ಲಿಯೇ ರಸ್ತೆ ಚರಂಡಿಗಳು ಇಲ್ಲಿಗಿಂತ ಉತ್ತಮವಾಗಿವೆ
. ಪ್ರಸನ್ನ ಅಣಗಳ್ಳಿ
- ಚರಂಡಿಗಳು ಇಲ್ಲದಿರುವುದು ನನ್ನ ಗಮನಕ್ಕೆ ಬಂದಿದೆ. ಮುಂದೆ ವ್ಯವಸ್ಥಿತಿವಾಗಿ ನಿರ್ಮಿಸಲಾಗುವುದು. ಸದ್ಯ ಸ್ವಚ್ಛತೆಗೆ ಗಮನ ಹರಿಸಲಾಗುವುದು
ಮಹೇಶ್ ಉಪವಿಭಾಗಾಧಿಕಾರಿ ಮತ್ತು ನಗರಸಭೆ ಪ್ರಭಾರ ಆಯುಕ್ತ
ಹೊಸ ಚರಂಡಿ ನಿರ್ಮಿಸಿ...
ಎರಡೂ ರಸ್ತೆಗಳ ಎರಡೂ ಬದಿಗಳಲ್ಲಿ ವ್ಯವಸ್ಥಿತವಾಗಿ ಚರಂಡಿ ನಿರ್ಮಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.  ‘ಇಲ್ಲಿರುವ ಅಂಗಡಿಗಳಿಂದ ನಗರಸಭೆ ಹೆಚ್ಚಿನ ಆದಾಯ ಗಳಿಸುತ್ತದೆ. ಆದರೂ ನಗರಸಭೆ ನಿರ್ಲಕ್ಷ ಮಾಡಿದೆ. ಎರಡೂ ರಸ್ತೆಗಳನ್ನು ಅಭಿವೃದ್ಧಿ ಪಡಿಸಬೇಕು. 15 ವರ್ಷಗಳಿಂದಲೂ ಜನರು ಈ ಒತ್ತಾಯ ಮಾಡುತ್ತಿದ್ದಾರೆ. ಆದರೂ ಜನಪ್ರತಿನಿಧಿಗಳು ಅಧಿಕಾರಿಗಳು ಕಾಳಜಿ ವಹಿಸಿಲ್ಲ. ರಸ್ತೆ ಚರಂಡಿಗಳನ್ನು ಅಭಿವೃದ್ಧಿ ಪಡಿಸಲು ಮುಂದಾಗದಿದ್ದರೆ ಹೋರಾಟ ನಡೆಸಲಾಗುವುದು’ ಎಂದು ಮುಖಂಡ ರಾಜು ಎಚ್ಚರಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.