ADVERTISEMENT

ದೊಡ್ಡ ಕನಸು ಗುರಿಯ ಜೊತೆಗೆ ಶ್ರಮ ಇರಲಿ: ಜಿ.ಎಲ್.ತ್ರಿಪುರಾಂತಕ

ಜೆಎಸ್‌ಎಸ್ ಬಾಲಕರ ಪ್ರೌಢಶಾಲೆಯ ವಾರ್ಷಿಕೋತ್ಸವ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 4:41 IST
Last Updated 28 ಡಿಸೆಂಬರ್ 2025, 4:41 IST
ಚಾಮರಾಜನಗರ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ನಡೆದ ಜೆಎಸ್‌ಎಸ್ ಬಾಲಕರ ಪ್ರೌಢಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸುತ್ತೂರು ಜೆಎಸ್‌ಎಸ್ ಸಂಸ್ಥೆಗಳ ಸಂಯೋಜನಾಧಿಕಾರಿ ಜಿ.ಎಲ್. ತ್ರಿಪುರಾಂತಕ ಮಾತನಾಡಿದರು
ಚಾಮರಾಜನಗರ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ನಡೆದ ಜೆಎಸ್‌ಎಸ್ ಬಾಲಕರ ಪ್ರೌಢಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸುತ್ತೂರು ಜೆಎಸ್‌ಎಸ್ ಸಂಸ್ಥೆಗಳ ಸಂಯೋಜನಾಧಿಕಾರಿ ಜಿ.ಎಲ್. ತ್ರಿಪುರಾಂತಕ ಮಾತನಾಡಿದರು   

ಚಾಮರಾಜನಗರ: ಆಸೆಗಳು, ಕನಸುಗಳು ದೊಡ್ಡದಾಗಿರಬೇಕು, ಜೀವನದ ಗುರಿ ಸಾಧನೆಗೆ ಶ್ರಮ ಹಾಕಬೇಕು ಎಂದು ‌ಸುತ್ತೂರು ಜೆಎಸ್‌ಎಸ್ ಸಂಸ್ಥೆಗಳ ಸಂಯೋಜನಾಧಿಕಾರಿ ಜಿ.ಎಲ್.ತ್ರಿಪುರಾಂತಕ ಸಲಹೆ ನೀಡಿದರು.

ನಗರದ ಜೆ.ಎಚ್ ಪಟೇಲ್ ಸಭಾಂಗಣದಲ್ಲಿ ಶನಿವಾರ ನಡೆದ ಜೆಎಸ್‌ಎಸ್ ಬಾಲಕರ ಪ್ರೌಢಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶಕ್ಕೆ ಅನ್ನ ನೀಡುವ ರೈತ ಸಮುದಾಯ ಹಾಗೂ ದೇಶವನ್ನು ಕಾಯುವ ಸೈನಿಕನ ಸೇವೆ ಸದಾ ಸ್ಮರಣೀಯ. ಸಮಾಜಕ್ಕೆ ರೈತ ಹಾಗೂ ಸೈನಿಕ ಹೀರೋಗಳಾಗಬೇಕೆ ಹೊರತು ಸಿನಿಮಾಗಳ ನಾಯಕರಲ್ಲ ಎಂದರು.

ವಿದ್ಯಾರ್ಥಿ ಸುಂದರವಾದ ಜೀವನ ಹಾಳು ಮಾಡಿಕೊಳ್ಳಬಾರದು. ಮೊಬೈಲ್ ಫೋನ್‌ ಗೀಳಿನಿಂದ ಹೊರಬಂದು ಸಾಧಕರಾಗಬೇಕು. ಗ್ರಾಮೀಣ ಭಾಗದ ಹಾಗೂ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದವರು ಪ್ರಸ್ತುತ ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ. ಹಳ್ಳಿಯ ಸೊಗಡು ಮತ್ತು ಬದುಕಿನ ಅರ್ಥ ತಿಳಿದಿರುವ ಗ್ರಾಮೀಣ ಭಾಗದವರು ಸಾಧನೆಯಲ್ಲಿ ಹಾದಿಯಲ್ಲಿದ್ದಾರೆ ಎಂದರು.

ADVERTISEMENT

ಜೀವನದಲ್ಲಿ ನಿರ್ದಿಷ್ಟ ಗುರಿಮುಟ್ಟಲು ಸಾಕಷ್ಟು ಪೂರ್ವತಯಾರಿ ಅಗತ್ಯ. ವಿದ್ಯಾರ್ಥಿಗಳು ಅಗತ್ಯ ಸಿದ್ಧತೆಗಳೊಂದಿಗೆ ಗುರಿಯತ್ತ ಮುನ್ನುಗ್ಗಿದ್ದರೆ ಯಶಸ್ಸು ದೊರೆಯುತ್ತದೆ. ಚಾಮರಾಜನಗರಕ್ಕೆ ಹಿಂದುಳಿದ ಜಿಲ್ಲೆ ಎಂಬ ಅಪವಾದವಿದ್ದರೂ ಬಹಳಷ್ಟು ಸಾಧಕರನ್ನು ಎಲ್ಲ ಕ್ಷೇತ್ರಗಳಿಗೆ ನೀಡಿದೆ. ಈ ನೆಲದಲ್ಲಿ ಹುಟ್ಟಿರುವವುದಕ್ಕೆ ಹೆಮ್ಮೆ ಪಡಬೇಕು ಎಂದರು.

ಜೆಎಸ್‌ಎಸ್ ಅಕ್ಷರ ದಾಸೋಹ ಕೇಂದ್ರ ಅಧ್ಯಕ್ಷ ಉಡಿಗಾಲ ಆರ್.ಕುಮಾರಸ್ವಾಮಿ ಮಾತನಾಡಿ, ಸುತ್ತೂರು ಮಠದ ಹಿರಿಯ ಶ್ರೀಗಳು ಸ್ವಾತಂತ್ರ್ಯ ಪೂರ್ವದಲ್ಲಿಯೇ ಗ್ರಾಮೀಣ ಪ್ರದೇಶಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಹಳ್ಳಿಗಳಲ್ಲಿ ಶಾಲೆಗಳನ್ನು ಆರಂಭಿಸಿದರು. ವಿದ್ಯಾರ್ಥಿನಿಲಯಗಳನ್ನು ಆರಂಭಿಸಿ ಜ್ಞಾನಾರ್ಜನೆಗೆ ಅವಕಾಶ ಮಾಡಿಕೊಟ್ಟರು. ಪರಿಣಾಮ ಚಾಮರಾಜನಗರ ಜಿಲ್ಲೆ ಶೈಕ್ಷಣಿಕವಾಗಿ ಪ್ರಗತಿ ಹೊಂದಲು ಸಾಧ್ಯವಾಯಿತು ಎಂದರು.

ಡಯಟ್ ಕಾಲೇಜಿನ ಉಪ ನಿರ್ದೇಶಕ ಕಾಶಿನಾಥ್, ಶಾಲೆಯ ಮುಖ್ಯ ಶಿಕ್ಷಕ ಬಿ.ಎಂ.ಸಿದ್ದಪ್ಪ ಮಾತನಾಡಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕ ಶಿವಕುಮಾರ್, ನಟೇಶ್, ಡಿ.ಸಿ.ರಾಜೇಂದ್ರ, ಪುಷ್ಪಲತಾ, ಶೋಭಾ, ಸಂಘದ ಕಾರ್ಯದರ್ಶಿ ಮುರುಳಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.