ADVERTISEMENT

ಕುಡಿಯುವ ನೀರು ಪೋಲು

​ಪ್ರಜಾವಾಣಿ ವಾರ್ತೆ
Published 4 ಜೂನ್ 2020, 10:01 IST
Last Updated 4 ಜೂನ್ 2020, 10:01 IST
ಬೇಗೂರು ಸಮೀಪದ ಹೊರೆಯಾಲ ಗ್ರಾಮದ ಬಳಿ ಪೈಪ್ ಒಡೆದು ಕುಡಿಯುವ ನೀರು ಕಾರಂಜಿಯಂತೆ ಚಿಮ್ಮುತ್ತಿದೆ
ಬೇಗೂರು ಸಮೀಪದ ಹೊರೆಯಾಲ ಗ್ರಾಮದ ಬಳಿ ಪೈಪ್ ಒಡೆದು ಕುಡಿಯುವ ನೀರು ಕಾರಂಜಿಯಂತೆ ಚಿಮ್ಮುತ್ತಿದೆ   

ಗುಂಡ್ಲುಪೇಟೆ: ಹೊರೆಯಾಲ ಗ್ರಾಮಕ್ಕೆ ಸರಬರಾಜು ಮಾಡುತ್ತಿರುವ ಕುಡಿಯುವ ನೀರಿನ ಪೈಪ್ ಮಾರ್ಗ ಮಧ್ಯೆ ಒಡೆದು ಹೋಗಿದ್ದು, ಪ್ರತಿದಿನ ನೀರು ಕಾರಂಜಿಯಂತೆ ಚಿಮ್ಮುತ್ತಿದ್ದು ರಸ್ತೆ ಪಕ್ಕದಲ್ಲಿ ಹರಿದು ಪೋಲಾಗುತ್ತಿದೆ.

ಯಡವನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಬಳಿ ಬೋರ್‌ವೆಲ್ ಕೊರೆದು, ಹೊರೆಯಾಲ ಗ್ರಾಮಕ್ಕೆ ಕುಡಿಯುವ ನೀರು ಒದಗಿಸಲಾಗುತ್ತಿದೆ. ಆದರೆ,ಬೇಗೂರು ಹೆಡಿಯಾಲ ರಸ್ತೆಯಿಂದ ಯಡವನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಬಸವನಗುಡಿ ಬಳಿ ಸರಬರಾಜಾಗುತ್ತಿರುವ ಕುಡಿಯುವ ನೀರಿನ ಪೈಪ್ ಒಡೆದಿರುವುದರಿಂದ ಸಮಸ್ಯೆ ಉಂಟಾಗಿದೆ.

ರಸ್ತೆಯಲ್ಲಿ ಸಂಚರಿಸುವ ಕೆಲವರು ಈ ನೀರನ್ನು ವಾಹನಗಳನ್ನು ತೊಳೆಯಲು ಬಳಸುತ್ತಿದ್ದಾರೆ. ಆದರೂ ಸ್ಥಳೀಯ ಜನ ಪ್ರತಿನಿಧಿಗಳಾಗಲಿ, ಗ್ರಾಮ ಪಂಚಾಯಿತಿ ಅಧಿಕಾರಿಗಳಾಲಿ ಇತ್ತ ಗಮನ ನೀಡಿಲ್ಲ ಎಂದು ಆರೋಪಿಸಿರುವ ಹೊರೆಯಾಲ ಗ್ರಾಮಸ್ಥರು,ಶೀಘ್ರ ದುರಸ್ತಿಪಡಿಸಬೇಕೆಂದು ಒತ್ತಾಯಿಸಿದ್ದಾರೆ.

ADVERTISEMENT

ಪೈಪ್ ಒಡೆದಿರುವ ಸ್ಥಳದಲ್ಲಿ ನಲ್ಲಿ ಹಾಕಿ ಗ್ರಾಮ ಪಂಚಾಯಿತಿ ವತಿಯಿಂದ ತೊಟ್ಟಿ ನಿರ್ಮಿಸಿ ಜಾನುವಾರುಗಳು ನೀರು ಕುಡಿಯಲು ಅನುವು ಮಾಡಿ ಕೊಡಲಿ ಎಂಬುದು ಈ ಭಾಗದ ರೈತರ ಬೇಡಿಕೆ.

ಈ ಭಾಗದಲ್ಲಿ ಓಂಕಾರ ವಲಯದ ಅರಣ್ಯ ಭಾಗದಿಂದ ಅನೇಕ ಆನೆಗಳು ಬರುತ್ತದೆ. ಜಾನುವಾರುಗಳಿಗೆ ಇರುವ ಕಾಲರಾ ಮತ್ತು ಆಂತ್ರಾಕ್ಸ್ ರೋಗದ ಲಕ್ಷಣಗಳು ಕಂಡು ಬಂದು ಕಾಡು ಪ್ರಾಣಿಗಳಿಗೆ ತಗುಲಿದರೆ ಮುಂದೆ ದೊಡ್ಡ ಅನಾಹುತವಾಗುತ್ತದೆ ಎಂದು ಪರಿಸರ ಪ್ರೇಮಿ ರವಿಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ.

ಜಾನುವಾರುಗಳಿಗೆ ಉಪಯೋಗ ಆಗಲಿ ಎಂದು ಪೈಪ್ ಹಾಕಲಾಗಿತ್ತು. ಕಿಡಿಗೇಡಿಗಳ ಕೃತ್ಯದಿಂದ ಒಡೆದಿದೆ. ಒಡೆದಿರುವ ಪೈಪ್ ಅನ್ನು ದುರಸ್ತಿಗೊಳಿಸಿ ನೀರು ಪೋಲಾಗುವುದನ್ನು ತಪ್ಪಿಸುವ ಜೊತೆಗೆ ಜಾನುವಾರುಗಳು ನೀರು ಕುಡಿಯಲು ತೊಟ್ಟಿ ನಿರ್ಮಾಣಕ್ಕೆ ಗ್ರಾಮ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೊರೆಯಾಲ ಪಿಡಿಒಶಾಂತರಾಜು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.