ADVERTISEMENT

ಚಾಮರಾಜನಗರ: ನೀರಿನ ಕೊರತೆ ಕಾಡದಂತೆ ಕ್ರಮವಹಿಸಲು ಸೂಚನೆ

ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‌ ಕುಮಾರ್‌

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2021, 15:21 IST
Last Updated 13 ಮಾರ್ಚ್ 2021, 15:21 IST
ಕುಡಿಯುವ ನೀರಿಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ನಡೆಸಿದರು
ಕುಡಿಯುವ ನೀರಿಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ನಡೆಸಿದರು   

ಚಾಮರಾಜನಗರ: ಬೇಸಿಗೆಯ ಸಮಯದಲ್ಲಿ ಜಿಲ್ಲೆಯಲ್ಲಿ ಎಲ್ಲಿಯೂ ಕುಡಿಯುವ ನೀರಿಗೆ ಸಮಸ್ಯೆ ಆಗಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್‌ ಕುಮಾರ್‌ ಅವರು ಅಧಿಕಾರಿಗಳಿಗೆ ಶನಿವಾರ ಸೂಚಿಸಿದರು.

ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ನಡೆದ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆ ನಡೆಸಿದ ಅವರು, ‘ಕುಡಿಯುವ ನೀರಿಗೆ ಅಭಾವ ಉಂಟಾಗದಂತೆ ಮುಂಜಾಗ್ರತಾ ಕ್ರಮಗಳನ್ನು ವ್ಯವಸ್ಥಿತವಾಗಿ ತೆಗೆದುಕೊಳ್ಳಬೇಕು. ಸಮಸ್ಯೆಗಳು ಇರುವ ಗ್ರಾಮಗಳಿಗೆ ವಿಶೇಷ ಗಮನ ನೀಡಿ ಜನರು, ಜಾನುವಾರುಗಳಿಗೆ ಯಾವುದೇ ಕೊರತೆ ಬಾರದಂತೆ ಸಮರ್ಪಕವಾಗಿ ನೀರು ಪೂರೈಸುವ ಕಾರ್ಯಗಳಿಗೆ ಮುಂದಾಗಬೇಕು’ ಎಂದು ಹೇಳಿದರು.

ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಆರ್.ನರೇಂದ್ರ, ಎನ್.ಮಹೇಶ್, ಸಿ.ಎಸ್. ನಿರಂಜನ ಕುಮಾರ್ ಅವರು ಮಾತನಾಡಿ, ಕೊಡಿಯುವ ನೀರಿನ ಕೊರತೆ ಕಂಡು ಬರುವ ಗ್ರಾಮಗಳಲ್ಲಿ ನೀರಿನ ಬವಣೆ ನೀಗಿಸಲು ಹೆಚ್ಚಿನ ಅನುದಾನದ ಅಗತ್ಯವಿದೆ. ಈ ಬಗ್ಗೆ ಕ್ರಮ ವಹಿಸಬೇಕು ಎಂದು ಸಚಿವರ ಗಮನಕ್ಕೆ ತಂದರು.

ADVERTISEMENT

ಇದಕ್ಕೆ ಸ್ಪಂದಿಸಿದ ಉಸ್ತುವಾರಿ ಸಚಿವರು ‘ಕುಡಿಯುವ ನೀರಿನ ಸಂಬಂಧ ಎಷ್ಟು ಗ್ರಾಮಗಳಿಗೆ ನೀರು ಒದಗಿಸಬೇಕಾಗುತ್ತದೆ ಹಾಗೂ ಇದಕ್ಕೆ ಬೇಕಾಗುವ ಅನುದಾನದ ವಿವರವನ್ನು ಒಳಗೊಂಡ ಪ್ರಸ್ತಾವವನ್ನು ಕೂಡಲೇ ಸಲ್ಲಿಸಬೇಕು. ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಜೊತೆ ಚರ್ಚಿಸಿ ಅಗತ್ಯ ಕ್ರಮ ವಹಿಸಲಾಗುವುದು’ ಎಂದರು.

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಮಾತನಾಡಿ, ‘ಬರಪೀಡಿತ ಎಂದು ಘೋಷಣೆಯಾಗದ ತಾಲ್ಲೂಕುಗಳ ಸಮಸ್ಯಾತ್ಮಕ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಪೂರೈಸಲು ಮತ್ತು ಅವಶ್ಯವಿದ್ದಲ್ಲಿ ಖಾಸಗಿ ಕೊಳವೆ ಬಾವಿಗಳಿಂದ ನೀರು ಪಡೆಯಲು ಬಾಡಿಗೆ ಪಾವತಿಗಾಗಿ ವಿನಿಯೋಗಿಸಲು ಹಣ ಬಿಡುಗಡೆಯಾಗಿದೆ’ ಎಂದರು.

‘ಜನಸಂದಣಿಯ ಸ್ಥಳಗಳಾದ ಕಚೇರಿ, ಬಸ್ ನಿಲ್ದಾಣ ಮುಂತಾದ ಕಡೆ ಬೇಸಿಗೆ ಸಂದರ್ಭದಲ್ಲಿ ನೀರು ಪೂರೈಸುವ ವ್ಯವಸ್ಥೆಯಾಗಬೇಕು. ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯ ನಿರ್ವಹಿಸುವಂತಾಗಬೇಕು. ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿಗೆ ಜಿಲ್ಲೆಯ ಯಾವುದೇ ಭಾಗದಲ್ಲಿ ಹಾಹಾಕಾರ ಉಂಟಾಗದಂತೆ ಮುತುವರ್ಜಿಯಿಂದ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು’ ಎಂದು ಸಚಿವ ಸುರೇಶ್‌ ಕುಮಾರ್‌ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಮಳೆ-ಬೆಳೆ, ಜಾನುವಾರುಗಳಿಗೆ ಮೇವು ಲಭ್ಯತೆ, ಇನ್ನಿತರ ಪ್ರಮುಖ ವಿಷಯಗಳ ಬಗ್ಗೆಯೂ ಸಚಿವರು ಪರಾಮರ್ಶೆ ನಡೆಸಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಶಿಕಲಾ, ಸದಸ್ಯ ಎ.ಆರ್.ಬಾಲರಾಜು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೊಯರ್ ನಾರಾಯಣರಾವ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಉಪವಿಭಾಗಾಧಿಕಾರಿ ಡಾ. ಗಿರೀಶ್ ದಿಲೀಪ್ ಬದೋಲೆ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣವರ್, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೆಶಕಕೆ. ಸುರೇಶ್, ಜಂಟಿ ಕೃಷಿ ನಿರ್ದೆಶಕಿ ಚಂದ್ರಕಲಾ, ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ಸಿ.ವೀರಭದ್ರಯ್ಯ, ತಹಶೀಲ್ದಾರರಾದ ಕೆ. ಕುನಾಲ್, ಚಿದಾನಂದ ಗುರುಸ್ವಾಮಿ, ನಾಗರಾಜು, ರವಿಶಂಕರ್, ಇತರೆ ಇಲಾಖೆಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.